Asianet Suvarna News Asianet Suvarna News

ಜಾತಿ ಜನಗಣತಿ ವರದಿ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧ

ಸಮಾಜದ ಕಟ್ಟಕಡೆಯನ್ನು ವ್ಯಕ್ತಿಗೆ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಆಲೋಚನೆಯಲ್ಲಿ ನಡೆಸಿರುವ ಜಾತಿ ಜನಗಣತಿ ವರದಿ ಜಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಬದ್ಧವಾಗಿದೆ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Congress government committed to implement caste census report snr
Author
First Published Nov 29, 2023, 10:36 AM IST

ಮೈಸೂರು : ಸಮಾಜದ ಕಟ್ಟಕಡೆಯನ್ನು ವ್ಯಕ್ತಿಗೆ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಆಲೋಚನೆಯಲ್ಲಿ ನಡೆಸಿರುವ ಜಾತಿ ಜನಗಣತಿ ವರದಿ ಜಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಬದ್ಧವಾಗಿದೆ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕವು ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರವು ಜಾತಿ ಜನಗಣತಿ ನಡೆಸಿತು. ಈಗ ವರದಿ ಸ್ವೀಕರಿಸುತ್ತಿದೆ. ಆದರೆ, ಬಿಜೆಪಿ ಜಾತಿ ಗಣತಿ ಮೂಲಕ ದೇಶ ಒಡೆಯುತ್ತಿದೆ ಎಂದು ಆರೋಪಿಸಿದೆ. ಒಡೆಯೋದಕ್ಕೆ ಏನಿದೆ? ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ಜಾತಿ ಗಣತಿ ನಡೆಸಬೇಕೆಂಬುದು ನಮ್ಮ ಕಾಂಗ್ರೆಸ್ ಪಕ್ಷದ ಆದ್ಯತೆಯಾಗಿದೆ ಎಂದರು.

ಹಿಂದುಳಿದ ಮತ್ತು ದಲಿತ ಸಮಾಜವನ್ನು ಸಂವಿಧಾನ ರಕ್ಷಿಸಿದೆ. ಅದೇ ವರ್ಗಗಳು ಸಂವಿಧಾನವನ್ನು ರಕ್ಷಿಸಬೇಕು. ಆದರೆ, ದಿನನಿತ್ಯ ಸಂವಿಧಾನ ರಕ್ಷಿಸುತ್ತಿರುವುದು ನಮಗೆ ತಿಳಿದಿಲ್ಲ. ಸಂಪ್ರದಾಯವಾದಿಗಳು ಮತ್ತು ಹಿಂದುತ್ವವಾದಿಗಳಿಂದ ಸಂವಿಧಾನಕ್ಕೆ ಅಪಾಯ ಎದುರಾಗಿದೆ ಎಂದರು.

ಡಾ. ಅಂಬೇಡ್ಕರ್ ಅವರ ಸಂವಿಧಾನ ಬಹುಸಂಖ್ಯಾತ ಶೋಷಿತರಿಗೆ ಸಮಾನ ಹಕ್ಕು ಕೊಟ್ಟಿತು. ಸನಾತನ ಮತ್ತು ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆ ಇರಬೇಕೆಂದು ಬಯಸುವವರು ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಿಸಲು ಯತ್ನಿಸುತ್ತಿದ್ದಾರೆ. ಹಿಟ್ಲರ್ ಸಂವಿಧಾನದ ಮೂಲಕವೇ ಅಧಿಕಾರಕ್ಕೆ ಬಂದ, ಅದೇ ದಾರಿಯನ್ನು ತುಳಿಯುತ್ತಿದ್ದಾರೆ ಎಂದು ಅವರು ದೂರಿದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶತಮಾನಗಳಿಂದ ಹಿಂದುಳಿದವರಿಗೆ ಮೀಸಲಾತಿ ಕೊಡಲಾಗಿದೆ. ಈಗ ಮುಂದುವರಿದ ಜಾತಿಗಳಿಗೂ ಮೀಸಲಾತಿ ನೀಡಿದ್ದರೂ, ಅವರು ಒಂದೇ ಒಂದು ಹೋರಾಟ ಮಾಡಲಿಲ್ಲ. ಇದನ್ನೂ ಯಾರು ವಿರೋಧಿಸಲಿಲ್ಲ. ಆದರೆ, ದಲಿತರು ಮೀಸಲಾತಿ ಹೆಚ್ಚಿಸುವಂತೆ ಬೀದಿಗಿಳಿದು ಹೋರಾಟ ಮಾಡಬೇಕು. ಅದನ್ನು ಯಾರು ಕೇಳುವುದಿಲ್ಲ ಎಂದರು.

ಕೋಮುವಾದಿಗಳು, ಬಂಡವಾಳಶಾಹಿ ಉದ್ಯಮಿಗಳಿಂದ ಸಂಪತ್ತಿನ ಬಲ ಪಡೆದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದಾರೆ. ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲಾಗುತ್ತಿದೆ. ಧರ್ಮ, ಜಾತಿಗಳ ಸಂಘರ್ಷ ಏರ್ಪಟ್ಟಿದೆ. ಒಂದು ಧರ್ಮದವರನ್ನು ಕೊಂದರು ತಪ್ಪಿಲ್ಲ. ಕಾನೂನು ಗಾಳಿಗೆ ತೂರಿದ್ದಾರೆ ಎಂದರು.

ಮನು ಪರಂಪರೆಗೆ ಮುಕ್ತಾಯ ಹಾಡಿದ ಸಂವಿಧಾನ:

ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಮಾತನಾಡಿ, ಹೊಸ ತತ್ವ- ಸಿದ್ಧಾಂತದ ಅಡಿಪಾಯ ಮಾಡಿಕೊಂಡು ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನವೂ ಮನು ಪ್ರಣೀತ ಪರಂಪರೆಗೆ ಮುಕ್ತಾಯ ಹಾಡಿತು. ಮನುಸ್ಮೃತಿ ಪರಂಪರೆಯ ಚಿಂತನೆಯಿಂದ ಭಾರತವು ತನ್ನ ವಿರುದ್ಧ ತಾನೇ ಸೆಣಸಾಡಬೇಕಿತ್ತು. ಒಡೆದ ಮನೆಯಾಗಿದ್ದ ಭಾರತದ ಮನೆಯನ್ನು ಸಹಬಾಳ್ವೆಯ ಮನೆಯನ್ನಾಗಿ ಒಟ್ಟಿಗೆ ಒಂದಾಗಿ ಬಾಳುವುದನ್ನು ಸಂವಿಧಾನ ಕಲ್ಪಿಸಿತು ಎಂದರು.

ರಕ್ತಪಾತವಿಲ್ಲದೇ ಯುದ್ಧವಿಲ್ಲದೇ ಸಮಾನತೆಯ ಬದುಕು ತಂದುಕೊಟ್ಟವರು. ತಲೆಕೆಳಗಾಗಿ ನಿಂತ ಭಾರತವನ್ನು ತಲೆ ಮೇಲೆ ಮಾಡಿ ನಿಲ್ಲಿಸಿದ ಕೀರ್ತಿ ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ನರಕವಾಗಿದ್ದ ಭಾರತವನ್ನು ಸ್ವರ್ಗವಾಗಿಸಿದರು. ಭಾರತದ ಹಣೆಬರಹವನ್ನು ಪುನರ್ ರೂಪಿಸಿ ತಿದ್ದಿದ ಡಾ. ಅಂಬೇಡ್ಕರ್ ಭಾರತದ ಭಾಗ್ಯವಿಧಾತ ಮತ್ತು ಭಾರತದ ತಂದೆ ಎಂದರು.

ಡಾ.ಅಂಬೇಡ್ಕರ್ ಅವರನ್ನು ಟೀಕಿಸುವ ಮತ್ತು ಹಳಿಯುವ ಶಕ್ತಿ ಇಲ್ಲದವರು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ. ಸಂವಿಧಾನ ಎರವಲು ಎಂದು ಟೀಕಿಸುತ್ತಾರೆ. ಹೀಗೆ ಪ್ರಶ್ನಿಸುವವರಿಗೆ ಎರವಲು ಪಡೆಯದ ಜಗತ್ತಿನ ಯಾವ ಸಂವಿಧಾನವೂ ಇಲ್ಲ ಎಂಬ ಜ್ಞಾನ ಇಲ್ಲ. ಮಾತೃತ್ವ ಕಣ್ಣಿನಿಂದ ಕೂಡಿರುವ ಸಂವಿಧಾನವೂ ದೇಸಿಯ ಚಿಂತನೆಯಿಂದಲೇ ಅರಳಿದೆ. ಸಂವಿಧಾನ ವಿರೋಧಿ ಚಿಂತನೆ ಭೂಷಣ ಅಲ್ಲ ಎಂದು ಕಿಡಿಕಾರಿದರು.

ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಣ್ಣ ಬಡಿಗೇರ್, ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ದೊಡ್ಡಸಿದ್ದು ಹಾದನೂರು, ಚಂದ್ರು ಕಳ್ಳಿಮುದ್ದನಹಳ್ಳಿ, ವಾಟಾಳ್ ನಾಗರಾಜು, ಬಸವರಾಜು ದೇವರಸನಹಳ್ಳಿ, ಬೊಮ್ಮೇನಹಳ್ಳಿ ಕುಮಾರ್, ಸೋಮಯ್ಯ, ಮಹದೇವಮ್ಮ ಕಟ್ಟೆಮಳಲವಾಡಿ ಮೊದಲಾದವರು ಇದ್ದರು.

ಮಕ್ಕಳು ಸಂವಿಧಾನ ಪೀಠಿಕೆ ಓದುತ್ತಿರುವುದೇ ಈ ಸರ್ಕಾರದ ಸಾಧನೆ. ಅದಕ್ಕಾಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಅಭಿನಂದಿಸುತ್ತೇನೆ. ಮಕ್ಕಳಲ್ಲಿ ಬಿತ್ತುವ ಬೀಜ ನಾಳೆ ಬೆಳೆದು ದೊಡ್ಡದಾಗುತ್ತದೆ. ಮಕ್ಕಳೇ ನಾಳೆ ಸಂವಿಧಾನದ ರಕ್ಷಕರು. ಈ ಕಾರ್ಯವೂ ಸಂವಿಧಾನ ರಕ್ಷಣೆಗೆ ಮೂಲಭೂತ ಕಾರ್ಯಗಳಲ್ಲಿ ಒಂದಾಗಲಿದೆ.

- ಪ್ರೊ. ಅರವಿಂದ ಮಾಲಗತ್ತಿ, ಸಾಹಿತಿ

Follow Us:
Download App:
  • android
  • ios