ಮಹಿಳೆಗೆ ಸೋಮಣ್ಣ ಕಪಾಳ ಮೋಕ್ಷ : ಸಚಿವ ಸ್ಥಾನದಿಂದ ವಜಾಕ್ಕೆ ಆಗ್ರಹ
ಸಮಸ್ಯೆ ಹೇಳಿಕೊಂಡು ಬಂದಿದ್ದ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದ ಸಚಿವ ವಿ. ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಹಿಳಾ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರು (ಅ.25): ಸಮಸ್ಯೆ ಹೇಳಿಕೊಂಡು ಬಂದಿದ್ದ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದ ಸಚಿವ ವಿ. ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಹಿಳಾ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಹಿಳೆಯ (woman ) ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ರೇಸ್‌ಕೋರ್ಸ್ ರಸ್ತೆಯ (Road) ಕಾಂಗ್ರೆಸ್ ಭವನದ ಬಳಿ ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬಳಿಕ ಸೋಮಣ್ಣ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಕಾಂಗ್ರೆಸ್ ಭವನದ ಎದುರೇ ತಡೆದ ಪೊಲೀಸರು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಹಾಗೂ ಬೆಂಬಲಿಗರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಪುಷ್ಪಾ ಅಮರನಾಥ್, ಸೋಮಣ್ಣ ಅವರಿಂದ ಇಂತಹ ನೀಚ ನಡವಳಿಕೆ ನಿರೀಕ್ಷಿಸಿರಲಿಲ್ಲ. ಇದು ಬಿಜೆಪಿಯ ಸಂಸ್ಕೃತಿಯನ್ನು ತೋರುತ್ತಿದ್ದು, ಹೆಣ್ಣನ್ನು ಅಗೌರವದಿಂದ ಕಾಣುವುದು ಬಿಜೆಪಿಯ ಮನಃಸ್ಥಿತಿಯಲ್ಲೇ ಇದೆ ಎಂದು ಕಿಡಿ ಕಾರಿದರು.
ಅರವಿಂದ ಲಿಂಬಾವಳಿ, ಸಿದ್ದು ಸವದಿಯಿಂದ ಹಿಡಿದು ಪ್ರತಿಯೊಬ್ಬರೂ ಮಹಿಳೆಗೆ ಅಗೌರವ ತೋರಿದ್ದಾರೆ. ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ. ಮಹಿಳೆಯರ ಧ್ವನಿ ಅಡಗಿಸಲು
ಪ್ರಯತ್ನಿಸುತ್ತಿದ್ದಾರೆ. ಮಹಿಳೆಗೆ ಮಾಡಿದ ಈ ಅವಮಾನಕ್ಕೆ ನಾವು ಮಾತ್ರವಲ್ಲ ಶೋಭಕ್ಕ (ಶೋಭಾ ಕರಂದ್ಲಾಜೆ), ಶಶಿಕಲಾ ಜೊಲ್ಲೆ ಹಾಗೂ ಮಾಳವಿಕಾ ಅವಿನಾಶ್ ಸೇರಿ ಎಲ್ಲರೂ ಬೀದಿಗೆ ಬಂದು ಪ್ರತಿಭಟಿಸಬೇಕು.
ಪ್ರತಿಯೊಂದಕ್ಕೂ ಬೀದಿಗೆ ಇಳಿಯುತ್ತಿದ್ದ ನೀವು ಈ ಬಗ್ಗೆ ಮಾತನಾಡದೆ ಸುಮ್ಮನಿದ್ದೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರೂ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಭಾಗಿಯಾಗಿದ್ದರು. ಸೋಮಣ್ಣ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಪಾಳ ಮೋಕ್ಷ ಯಾವ ಸಂಸ್ಕೃತಿ :
ದಾವಣಗೆರೆ: ಮಹಿಳೆ ಮೇಲೆ ದರ್ಪ ತೋರಿರುವ ವಸತಿ ಸಚಿವ ವಿ.ಸೋಮಣ್ಣ ನಡೆ ಮಹಿಳಾ ವಿರೋಧಿ ಹಾಗೂ ಅಮಾನುಷ ಕೃತ್ಯ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್‌ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಹಂಗಳ ಗ್ರಾಮದಲ್ಲಿ ಮಹಿಳೆ ಜಾಗ ಕೋರಿ ಸಚಿವರ ಬಳಿ ತೆರಳಿದಾಗ ಕಪಾಳಮೋಕ್ಷ ಮಾಡಿದ್ದಾರೆ.ಇದೇನಾ ಬಿಜೆಪಿ ಸಂಸ್ಕೃತಿ. ಈ ಮೂಲಕ ಸ್ತ್ರೀಕುಲಕ್ಕೆ ಅವಮಾನ ಮಾಡಿದ್ದಾರೆ. ಬಿಜೆಪಿ ಪಾಲಿಕೆ ಸದಸ್ಯರು ಈ ಗೂಂಡಾ ವರ್ತನೆ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅಹವಾಲು ಹೇಳಲು ಬರುವ ಮಹಿಳೆಗೆ ಗೌರವ ಕೊಡುವುದಿರಲಿ, ಅಧಿಕಾರದ ಮದ ಏರಿಸಿಕೊಂಡವರ ರೀತಿ ವರ್ತಿಸುತ್ತಿರುವವರು ಬಿಜೆಪಿಯವರು. ಜನರು ಕಷ್ಟಹೇಳಿಕೊಂಡು ಸ್ವಲ್ಪ ಖಾರವಾಗಿ ಮಾತನಾಡಿದರೆ ಕಾಂಗ್ರೆಸ್‌ನವರು ಗೂಂಡಾಗಿರಿ ಮಾಡುತ್ತಾರೆ ಎನ್ನುತ್ತಾರೆ. ಈಗ ಅವರದ್ದೇ ಪಕ್ಷದ ಸಚಿವರ ವರ್ತನೆಗೆ ಬಿಜೆಪಿಯವರು ಏನು ಹೇಳುತ್ತಾರೆ. ಕೇವಲ ಬಾಯಿ ಮಾತಿನಲ್ಲಿ ಮಹಿಳೆಯರಿಗೆ ಗೌರವ ಕೊಡುವ ಬಿಜೆಪಿಯವರು ಮಹಿಳೆ ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿರುವ ಸೋಮಣ್ಣರ ಸಂಸ್ಕೃತಿ ವಿರುದ್ಧ ಮಾತನಾಡುತ್ತಾರಾ? ಬೀದಿಗಿಳಿದು ಹೋರಾಟ ಮಾಡುತ್ತಾರಾ? ತಾಕತ್ತಿದ್ದರೆ ಬಿಜೆಪಿಯವರು ಸೋಮಣ್ಣರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಿ ಎಂದು ಗಡಿಗುಡಾಳ್ ಮಂಜುನಾಥ್ ಸವಾಲು ಹಾಕಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ. ಮೊದಲಿನಿಂದಲೂ ದರ್ಪ, ಅಹಂಕಾರದಿಂದ ವರ್ತಿಸುವ ಸೋಮಣ್ಣರಿಗೆ ಮಹಿಳೆಯರಿಗೆ ಗೌರವ ಕೊಡುವುದನು,್ನ ಸಂಸ್ಕೃತಿ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುವ ಬಿಜೆಪಿ ನಾಯಕರು ಹೇಳಿಕೊಡಲಿ ಎಂದು ಸಲಹೆ ನೀಡಿದ್ದಾರೆ.