ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ - ಬಿಜೆಪಿಗೆ ಮುಖಭಂಗ : ಡಿಕೆಶಿ ನೆತೃತ್ವದಲ್ಲೇ ರಣತಂತ್ರ
- ಮೇಯರ್ ಹಾಗೂ ಉಪಮೇಯರ್ ಆಯ್ಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ
- ವೀಕ್ಷಕರನ್ನು ಕಳುಹಿಸಿ ವರದಿ ಪಡೆದ ಬಳಿಕ ಅಂತಿಮ ತೀರ್ಮಾನ
ಬೆಂಗಳೂರು (ಸೆ.26): ಬಳ್ಳಾರಿ (Ballari) ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK shivakumar) ನೇತೃತ್ವದಲ್ಲಿ ಸಭೆ ನಡೆಸಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲು ಒಮ್ಮತ ಮೂಡದ ಹಿನ್ನೆಲೆಯಲ್ಲಿ ಬಳ್ಳಾರಿಗೆ ವೀಕ್ಷಕರನ್ನು ಕಳುಹಿಸಿ ವರದಿ ಪಡೆದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಬಳ್ಳಾರಿ ಪಾಲಿಕೆ ಮೇಯರ್ (mayor ) ಹಾಗೂ ಉಪ ಮೇಯರ್ ಹುದ್ದೆ ಕುರಿತು ಬಳ್ಳಾರಿ ಹಾಗೂ ವಿಜಯನಗರ ಮುಖಂಡರು ಹಾಗೂ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಲಾಯಿತು.
ಕಲಬುರ್ಗಿ: ಬಿಜೆಪಿ ಆಹ್ವಾನಿಸುತ್ತಿದೆ, ಕಾಂಗ್ರೆಸ್‌ಗೆ ಮನಸ್ಸು ಇದ್ದಂತಿಲ್ಲ: ಗೊಂದಲದಲ್ಲಿ ಜೆಡಿಎಸ್
39 ವಾರ್ಡ್‌ಗಳ ಪಾಲಿಕೆಯಲ್ಲಿ ಕಾಂಗ್ರೆಸ್ 21 ಸ್ಥಾನದ ಮೂಲಕ ಸ್ಪಷ್ಟಬಹುಮತ ಪಡೆದಿದೆ. ಕೇವಲ 13 ಸ್ಥಾನ ಗಳಿಸುವ ಮೂಲಕ ಬಿಜೆಪಿಗೆ (BJP) ಮುಖಭಂಗ ಉಂಟಾಗಿದೆ. ಹೀಗಿದ್ದರೂ ಕೊರೋನಾ (covid) ನೆಪವೊಡ್ಡಿ ಮೇಯರ್-ಉಪಮೇಯರ್ ಚುನಾವಣೆಗೆ ಅಧಿಸೂಚನೆ ಪ್ರಕಟಿಸುತ್ತಿಲ್ಲ. ಏ.27ರಂದೇ ಚುನಾವಣೆ ನಡೆದಿದ್ದರೂ ಈವರೆಗೂ ಮೇಯರ್-ಉಪಮೇಯರ್ ನೇಮಕಕ್ಕೆ ಅವಕಾಶ ನೀಡಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಡಿ.ಕೆ. ಶಿವಕುಮಾರ್ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖರೊಂದಿಗೆ ಸಭೆ ನಡೆಸಲಾಗಿದೆ. ಚುನಾವಣೆ ನಡೆದು ಆರು ತಿಂಗಳು ನಡೆದಿದ್ದು, ಕೊರೋನಾ ನೆಪವೊಡ್ಡಿ ಮೇಯರ್ ಚುನಾವಣೆ ಮುಂದೂಡಿದ್ದಾರೆ. ಪಾಲಿಕೆಯಲ್ಲಿ ನಮಗೆ ಸಂಪೂರ್ಣ ಬಹುಮತ ಇದೆ. ಹೀಗಾಗಿ ನಾವೇ ಅಧಿಕಾರ ಹಿಡಿಯುತ್ತೇವೆ ಎಂದರು.
ವೀಕ್ಷಕರ ನೇಮಕ:
ಮೇಯರ್ ಸ್ಥಾನದ ಆಕಾಂಕ್ಷಿ ಪೂಜಾರಿ ಗಾದೆಪ್ಪ ಮಾತನಾಡಿ, ಮೇಯರ್ ಹಾಗೂ ಉಪಮೇಯರ್ ಕುರಿತು ಅಂತಿಮ ನಿರ್ಧಾರ ಆಗಿಲ್ಲ. ನಾವೇ ಅಲ್ಲಿಗೆ ವೀಕ್ಷಕರನ್ನು ಕಳುಹಿಸುತ್ತೇವೆ. ಅವರು ವರದಿ ಸಲ್ಲಿಸಲಿದ್ದು ಅದರಂತೆ ಅಂತಿಮ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಮತ್ತೊಬ್ಬ ಆಕಾಂಕ್ಷಿ ವಿವೇಕ್, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಪಕ್ಷದ ಕೆಲಸವನ್ನು ಸರಿಯಾಗಿ ಮಾಡಬೇಕು. ಅಂತಹವರನ್ನು ನಾವೇ ಮೇಯರ್ ಮಾಡುತ್ತೇವೆ. ಇಲ್ಲಿ ಮಾಡಿದರೆ ಬೇರೆಯವರಿಗೆ ಅಸಮಾಧಾನವಾಗುತ್ತದೆ. ಹೀಗಾಗಿ ಅಲ್ಲಿಗೆ ನಾವೇ ವೀಕ್ಷಕರನ್ನು ಕಳುಹಿಸುತ್ತೇವೆ ಎಂದಿದ್ದಾರೆ ಎಂದರು.