Asianet Suvarna News Asianet Suvarna News

ರಾಜೀನಾಮೆ ಕೇಳುವ ನೈತಿಕ ಹಕ್ಕು ಕಾಂಗ್ರೆಸ್ ದಲಿತ ಮುಖಂಡರಿಗಿಲ್ಲ

ಕ್ಷೇತ್ರದ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರ ರಾಜೀನಾಮೆಯನ್ನು ಕೇಳುವ ನೈತಿಕ ಹಕ್ಕು ಕಾಂಗ್ರೆಸ್‌ನ ಬಹುಪಾಲು ದಲಿತ ಮುಖಂಡರಿಗೆ ಇಲ್ಲ ಎಂದು ಜೆಡಿಎಸ್ ದಲಿತ ಮುಖಂಡರು ಹೇಳಿದ್ದಾರೆ.

Congress Dalit leaders have no moral right to ask for resignation snr
Author
First Published Oct 21, 2023, 7:38 AM IST

  ತುರುವೇಕೆರೆ :  ಕ್ಷೇತ್ರದ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರ ರಾಜೀನಾಮೆಯನ್ನು ಕೇಳುವ ನೈತಿಕ ಹಕ್ಕು ಕಾಂಗ್ರೆಸ್‌ನ ಬಹುಪಾಲು ದಲಿತ ಮುಖಂಡರಿಗೆ ಇಲ್ಲ ಎಂದು ಜೆಡಿಎಸ್ ದಲಿತ ಮುಖಂಡರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ  ಜೆಡಿಎಸ್‌ನ ದಲಿತ ಮುಖಂಡ ಬೀಚನಹಳ್ಳಿ ರಾಮಣ್ಣ, ಹಾಲಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ಆಡಳಿತ ಮಾಡಿದ 15 ವರ್ಷಗಳ ಅವಧಿಯಲ್ಲಿ ಈಗ ಕಾಂಗ್ರೆಸ್‌ನ ದಲಿತ ಮುಖಂಡರು ಎಂದು ಕರೆಸಿಕೊಳ್ಳುತ್ತಿರುವ ಹಲವಾರು ಮಂದಿ ಸಾಕಷ್ಟು ಅನುಕೂಲಗಳನ್ನು ಪಡೆದವರೇ ಆಗಿದ್ದಾರೆ. ಬಹುತೇಕ ಮುಖಂಡರು ಶಾಸಕರಿಂದ ಅವರ ಅವಧಿಯಲ್ಲಿ ಬೋರ್‌ವೆಲ್‌ಗಳು ಮನೆ, ಜಮೀನು ಸೇರಿದಂತೆ ಸರ್ಕಾರದಿಂದ ದೊರೆತ ಬಹುಪಾಲು ಸವಲತ್ತುಗಳನ್ನು ಪಡೆದಿದ್ದಾರೆ. ಆದರೂ ಸಹ ಶಾಸಕರಿಂದ ತಾಲೂಕಿಗೆ ಏನೇನೂ ಆಗಿಲ್ಲ. ಅವರು ದಲಿತರ ವಿರೋಧಿ ನಿಲುವು ತಳೆದಿದ್ದಾರೆಂದು ಹೇಳಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ಹೊಟ್ಟೆ ತುಂಬ ಉಂಡು ದೂರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಬೀಚನಹಳ್ಳಿ ರಾಮಣ್ಣನವರು ದಲಿತರ ಹೆಸರಿನಲ್ಲಿ ಎಲ್ಲಾ ಸೌಲಭ್ಯಗಳನ್ನು ತಾವೇ ಪಡೆದು, ಬಡ ದಲಿತರನ್ನು ತಬ್ಬಲಿ ಮಾಡಿರುವ ಪುಣ್ಯಾತ್ಮರು ಅವರು ಎಂದು ಲೇವಡಿ ಮಾಡಿದರು.

ಈಗ ಕಾಂಗ್ರೆಸ್ ದಲಿತ ಮುಖಂಡರೆಂದು ಹೇಳಿಕೊಳ್ಳುತ್ತಿರುವ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಕೆ.ಬಿ.ಹನುಮಂತಯ್ಯ, ಗುರುದತ್, ತಿಮ್ಮೇಶ್ ಸೇರಿದಂತೆ ಹಲವಾರು ಮಂದಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಂದ ಎಷ್ಟೆಷ್ಟು ಸವಲತ್ತುಗಳನ್ನು ಪಡೆದಿದ್ದಾರೆಂಬುದರ ಪಟ್ಟಿ ಬಿಡುಗಡೆ ಮಾಡಿದರೆ ಅವರ ಬಣ್ಣ ಬಯಲಾಗುತ್ತದೆ ಎಂದು ಹೇಳಿದರು.

ಓಲೈಕೆ: ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯಾಗಿರುವ ಬೆಮಲ್ ಕಾಂತರಾಜ್ ರವರ ಓಲೈಕೆಗಾಗೇ ಕೆಲವು ದಲಿತ ಮುಖಂಡರು ಶಾಸಕರ ವಿರುದ್ಧ ಹೇಳಿಕೆ ನೀಡಿ ಶಹಬ್ಬಾಶ್ ಪಡೆಯಲು ಹವಣಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅವರಿಂದ ಏನಾದರೂ ಲಾಭ ಮಾಡಿಕೊಳ್ಳಬೇಕೆಂಬ ದುರಾಲೋಚನೆ ಇದೆ ಎಂದು ಜೆಡಿಎಸ್ ನ ದಲಿತ ಮುಖಂಡ ಮುನಿಯೂರು ರಂಗಸ್ವಾಮಿ ಆಪಾದಿಸಿದರು.

ಬೆಮಲ್ ಕಾಂತರಾಜ್ ರವರು ಜೆಡಿಎಸ್‌ನಿಂದಲೇ ವಿಧಾನಪರಿಷತ್ ಸದಸ್ಯರಾಗಿದ್ದವರು. ಆಗ ಅವರು ಈ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಏನು ಸೇವೆ ಮಾಡಿದ್ದಾರೆ, ಎಷ್ಟೆಷ್ಟು ಅನುದಾನವನ್ನು ತಂದಿದ್ದಾರೆಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಬೆಮಲ್ ಕಾಂತರಾಜ್ ರವರ ಕುರಿತು ಹಲವಾರು ಮಾಧ್ಯಮಗಳಲ್ಲಿ ಅವರ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪುಂಖಾನುಪುಂಖವಾಗಿ ಸುದ್ದಿ ಬರುತ್ತಿದೆ. ಇದನ್ನು ಮರೆ ಮಾಚಲು ಕಾಂಗ್ರೆಸ್‌ನ ದಲಿತ ಮುಖಂಡರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮುನಿಯೂರು ರಂಗಸ್ವಾಮಿ ಆರೋಪಿಸಿದರು.

ಮುಖಂಡರಾದ ಹೊನ್ನೇನಹಳ್ಳಿ ಕೃಷ್ಣ ತೋವಿನಕೆರೆ ರಂಗಸ್ವಾಮಿ, ಬಡವಣೆ ಶಿವರಾಜ್, ಕೃಷ್ಣ ಮಾದಿಗ, ಪುಟ್ಟರಾಜ್, ತಮ್ಮಯ್ಯ, ಬೀಚನಹಳ್ಳೀ ಮಹಾದೇವ್ ಇದ್ದರು.

ಹತಾಶೆಯ ನಡೆ

ಜೆಡಿಎಸ್‌ನಲ್ಲೇ ಇದ್ದ ಹಲವಾರು ದಲಿತ ಮುಖಂಡರು ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬೆಮಲ್ ಕಾಂತರಾಜ್ ರವರು ಗೆಲ್ಲಲಿದ್ದಾರೆಂಬ ದೂರಾಲೋಚನೆಯಿಂದ ಜೆಡಿಎಸ್‌ನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದರು. ಆದರೆ ಕ್ಷೇತ್ರದ ಮತದಾರರ ಆಶೀರ್ವಾದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪನವರ ಮೇಲಿತ್ತು. ಅವರಿಗೆಲ್ಲಾ ನಿರಾಸೆಯಾಗಿದೆ. ಭ್ರಮನಿರಸನವಾಗಿದೆ. ಹಾಗಾಗಿ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ದೂರುತ್ತಿದ್ದಾರೆಂದು ಹೇಳಿದರು.

Follow Us:
Download App:
  • android
  • ios