ಹಿಂದೂ ಮುಸ್ಲಿಮರು ಒಟ್ಟಾಗಿರಲು ಕಾಂಗ್ರೆಸ್, ಬಿಜೆಪಿ ಬಿಡುತ್ತಿಲ್ಲ : ಸಿ.ಎಂ.ಇಬ್ರಾಹಿಂ
ಸಮಾಜದಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ಬಾಳಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಿಡುತ್ತಿಲ್ಲ ಎಂದು ರಾಜ್ಯ ಜಾತ್ಯತೀತ ಜನತಾದಳ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.
ಕುಣಿಗಲ್: ಸಮಾಜದಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ಬಾಳಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಿಡುತ್ತಿಲ್ಲ ಎಂದು ರಾಜ್ಯ ಜಾತ್ಯತೀತ ಜನತಾದಳ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.
ಪಟ್ಟಣದ ಜಿಕೆಬಿಎಂಎಸ್ ಬಯಲು ರಂಗಮಂದಿರದಲ್ಲಿ ತಾಲೂಕು ಜಾತ್ಯತೀತ ಜನತಾದಳ ವತಿಯಿಂದ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಈಗಾಗಲೇ ಅಲ್ಪಸಂಖ್ಯಾತ ಮುಖಂಡರನ್ನು ರಾಜಕೀಯದಲ್ಲಿ ನಾಶ ಮಾಡಿದೆ. ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಹಿಂದೂ ಮುಸ್ಲಿಮ್ ಒಳಗೆ ಒಡಕುಂಟು ಮಾಡಿ ತಾವು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಮಂತ್ರಿ ದೇವೇಗೌಡರು ಅಲ್ಪಸಂಖ್ಯಾತರ ಏಳಿಗೆಗೆ 4% ಮೀಸಲಾತಿ ನೀಡಿ ಜನಾಂಗದ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಟ್ಟರು.ಪ್ರಧಾನಮಂತ್ರಿ ಮೋದಿ ಈ ದೇಶಕ್ಕೆ ಅಚ್ಚಾದಿನ್ ಬರುತ್ತದೆ ಎಂದು ಸಿಲಿಂಡರ್, ಪೆಟ್ರೋಲ್, ದಿನ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದರು. ವಿಧಾನಸಭಾ ಅಭ್ಯರ್ಥಿ ಡಿ.ನಾಗರಾಜಯ್ಯರನ್ನು ಗೆಲ್ಲಿಸಬೇಕೆಂದರು.
ರಾಜ್ಯ ಜೆಡಿಎಸ್ ಅಲ್ಪ ಸಂಖ್ಯಾತ ವಕ್ತಾರ ನಜ್ಮಾ ನಜೀರ್ ಮಾತನಾಡಿ, ಕಾಂಗ್ರೆಸ್ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಇವರಿಬ್ಬರು ಹಿಂಬಾಗಿಲಿನ ಮೂಲಕ ಒಬ್ಬರಿಗೊಬ್ಬರು ರಾಜಕೀಯವಾಗಿ ಸಹಾಯ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಏಳಿಗೆಗೆ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಲ್ಪಸಂಖ್ಯಾತರು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಹಂಚುವ ಸೀರೆ ಕುಕ್ಕರ್‌ಗೆ ಆಸೆಗೆ ಒಳಪಡದೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕರೆ ನೀಡಿದರು.
ಮಾಜಿ ಮಂತ್ರಿ ಡಿ.ನಾಗರಾಜಯ್ಯ ಮಾತನಾಡಿ, ತಾಲೂಕಿನಲ್ಲಿ ಅಲ್ಪಸಂಖ್ಯಾತರ ರಾಜಕೀಯ ನಾಯಕರಾಗಿ ಹಲವಾರು ಮುಖಂಡರು ತಮ್ಮ ಆಡಳಿತ ಅವಧಿಯಲ್ಲಿ ಅಧಿಕಾರವನ್ನು ನೀಡಿದ್ದೇನೆ. ಮುಂದೆಯೂ ನಿಮ್ಮ ಸೇವೆ ಮಾಡಲು ಸಿದ್ದನಾಗಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಆದ್ದರಿಂದ ಕುಮಾರಸ್ವಾಮಿ ಈ ನಾಡಿನ ಮುಖ್ಯಮಂತ್ರಿ ಆಗಲು ಆಶೀರ್ವಾದ ಮಾಡಬೇಕೆಂದರು.
ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಂಶೀತ್ ಉಲ್ಲಾ ಖಾನ್, ತುರುವೇಕೆರೆ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ, ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್ ಪಾಷಾ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆಂಜಿನಪ್ಪ, ನಾಗರಾಜು, ಡಾ. ರವಿ ನಾಗರಾಜಯ್ಯ, ತಾಲೂಕು ಅಧ್ಯಕ್ಷ ಬಿ.ಎನ್. ಜಗದೀಶ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಿಯಾ ಹುಲ್ಲಖಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.