ಕೆ.ಆರ್‌.ಪೇಟೆ (ಡಿ.05): ತಾಲೂಕು ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಗಳು ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.

ಒಟ್ಟು 10 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಮತ್ತು ಬಿಜೆಪಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾದ ಕೃಷ್ಣೇಗೌಡ, ಪುಟ್ಟೇಗೌಡ, ಸ್ವಾಮಿಗೌಡ, ಸೋಮಶೇಖರ್‌, ಬಿ.ಎಸ್‌.ಯೋಗೇಶ್‌, ಧನಲಕ್ಷ್ಮಿ, ಯಶೋದಮ್ಮ, ಬಿ.ವಿ.ಮಾಧವ ಸೇರಿದಂತೆ ಒಟ್ಟು 8ಮಂದಿ ಗೆಲುವು ಸಾಧಿಸಿದ್ದರೆ ಜೆಡಿಎಸ್‌ ಬೆಂಬಲಿತ ಇಬ್ಬರು ಅಭ್ಯರ್ಥಿಗಳಾದ ದೇವರಾಜು ಮತ್ತು ಮಂಗಳಮ್ಮ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಬಲ್ಲೇನಹಳ್ಳಿ ರಮೇಶ್‌ ಹಾಗೂ ಬಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರೂಪಗಂಗಾಧರ್‌ ನೇತೃತ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದರು. ಗೆಲುವಿನ ನಂತರ ಮಾತನಾಡಿದ ಮೈತ್ರಿ ಅಭ್ಯರ್ಥಿಗಳು, ಮುಂದಿನ ಗ್ರಾಪಂ ಚುನಾವಣೆಯಲ್ಲೂ ನಮ್ಮ ಮೈತ್ರಿ ಮುಂದುವರಿಯಲಿದೆ ಎಂದರು.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ..

ನೂತನ ನಿರ್ದೇಶಕರು ಪಟ್ಟಣದ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್‌, ಬಿ.ಪ್ರಕಾಶ್‌ ನೇತೃತ್ವದಲ್ಲಿ ಪಕ್ಷದ ಮುಖಂಡರು ಅಭಿನಂದಿಸಿದರು. ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್‌, ಕಿಕ್ಕೇರಿ ಸುರೇಶ್‌, ತಾಪಂ ಸದಸ್ಯ ಮಾಧವ ಪ್ರಸಾದ್‌, ಮನ್‌ಮುಲ್ ನಿದೇರ್ಶಕ ಡಾಲು ರವಿ, ಮುಖಂಡರಾದ ಹರಳಹಳ್ಳಿ ವಿಶ್ವನಾಥ್‌, ರಾಜಯ್ಯ, ಪಿ.ಎಲ್ಡಿ ಬ್ಯಾಂಕ್‌ ಅಧ್ಯಕ್ಷ ಗೋವಿಂದರಾಜು, ಯುವ ಘಟಕದ ಅಧ್ಯಕ್ಷ ಸಿ.ಬಿ.ಚೇತನಕುಮಾರ್‌ ಇದ್ದರು.