ನಾಗಮಂಗಲ (ಫೆ.14):  ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 35 ಗ್ರಾಪಂಗಳ ಪೈಕಿ 21 ಗ್ರಾಪಂಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ ಎಂದು ಮಾಜಿ ಸಚಿವ ಎನ್‌.ಚೆಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ 21 ಗ್ರಾಪಂಗಳ ಅಧ್ಯಕ್ಷ ಉಪಸ್ಥಿತಿಯೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಕೇವಲ 9 ಪಂಚಾಯ್ತಿಗಳಲ್ಲಿ ಮಾತ್ರ ಅಧಿಕಾರ ಹಿಡಿದಿದೆ ಎಂದು ಹುಸಿ ಹೇಳಿಕೆ ನೀಡಿ ಜನರ ಹಾದಿ ತಪ್ಪಿಸುವ ಕೆಲಸದಲ್ಲಿ ವಿರೋಧಿಗಳು ತೊಡಗಿದ್ದಾರೆ. ಯಾರು ಆದರೂ ಸತ್ಯಾಸತ್ಯತೆ ಅರಿತು ಮಾತನಾಡಬೇಕು ಎಂದರು.

ಇದು ನಮ್ಮ ಶಕ್ತಿ ಪ್ರದರ್ಶನವಲ್ಲ. ವಿರೋಧಿಗಳ ಹೇಳಿಕೆಗೆ ಉತ್ತರವಷ್ಟೆ. ಗ್ರಾಪಂನಲ್ಲಿ ನಾವು ಏನೋ ಸಾಧನೆ ಮಾಡಿದ್ದೇವೆ ಎಂದು ತೋರ್ಪಡಿಕೆಗೆ ಅಲ್ಲ ಮತ್ತು ಇದು ಮುಂದಿನ ಚುನಾವಣೆಗಳ ದಿಕ್ಸೂಚಿಯೂ ಅಲ್ಲ ಎಂದರು.

ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು:  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದದ್ದೆ. ನಾನು ಕಳೆದ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ನಂತರ ತಾಲೂಕಿನಲ್ಲಿ ನಡೆದ ವಿವಿಧ ಚುನಾವಣೆಳಲ್ಲಿ ಕಾಂಗ್ರೆಸ್‌ ಜಯಭೇರಿ ಹೊಡೆದಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನಮ್ಮ ಬೆಂಬಲಿಗರೇ ಹೆಚ್ಚು ಅಧಿಕಾರ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲಾ ಬ್ಯಾಂಕ್‌ನಲ್ಲಿ ಮೂರು ಮಂದಿ ನಿರ್ದೇಶಕರು ತಾಲೂಕಿನಿಂದ ಆಯ್ಕೆಯಾಗಿದ್ದಾರೆ ಎಂದರು.

ಮಂಡ್ಯದಲ್ಲಿ ಬಿಗ್ ಆಪರೇಷನ್ ಕಮಲ : ಬಿಜೆಪಿಯತ್ತ ಶಾಸಕರು? ..

ಇಬ್ಬರು ರಾಜ್ಯ ಮಟ್ಟದ ಸಹಕಾರ ಮಹಾ ಮಂಡಳವನ್ನು ತಾಲೂಕಿನ ಇಬ್ಬರು ಪ್ರತಿನಿಧಿಸುತ್ತಿದ್ದಾರೆ. ತಾಲೂಕಿನ ಪೀಕಾಡರ್‌ ಬ್ಯಾಂಕ್‌ ಟಿಎಪಿಸಿಎಂಎಸ್‌ ಕೂಡ ಕಾಂಗ್ರೆಸ್‌ ತೆಕ್ಕೆಯಲ್ಲೇ ಇವೆ. ಪಕ್ಷದ ಬೆಂಬಲದಲ್ಲಿ ಗೆದ್ದವರು ಬಹುತೇಕರು ಯುವಕರಿದ್ದಾರೆ. ಎಲ್ಲರೂ ತಾಲೂಕಿಗೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ವಿವರಿಸಿದರು.

ಪಕ್ಷ ಬಿಟ್ಟಾಗ ಗೊಂದಲ:

1999ರ ವರೆಗೆ ತಾಲೂಕಿನಲ್ಲಿ ಜನತಾದಳ ಪಕ್ಷ ಬಲಿಷ್ಠವಾಗಿರಲಿಲ್ಲ. ನನ್ನ ರಾಜಕೀಯ ಪ್ರವೇಶದ ನಂತರ ತಾಲೂಕಿನಲ್ಲಿ ಜನತಾದಳ ಅಸ್ತಿತ್ವ ಕಂಡುಕೊಳ್ಳುತ್ತಾ ಹೋಯಿತು. ಕಷ್ಟಪಟ್ಟು ಪಕ್ಷ ಕಟ್ಟಿದೆ. ನಾನೇ ಕಟ್ಟಿಬೆಳೆಸಿದ ಪಕ್ಷವನ್ನು ಬಿಟ್ಟಾಗ ಮತದಾರರಲ್ಲಿ ಗೊಂದಲವುಂಟಾಗಿ ನಾನು ಸೋಲಬೇಕಾಯ್ತು. ವಿರೋಧಿಗಳ ಅಪಪ್ರಚಾರ, ಭಾವನಾತ್ಮಕ ಹೇಳಿಕೆಗಳು ನನಗೆ ಕಂಟಕವಾಯ್ತು. ಈಗ ಪರಿಸ್ಥಿತಿ ಬದಲಾಗಿದೆ. ತಾಲೂಕು, ಜಿಲ್ಲೆಯಲ್ಲಿ ಕಾಂಗ್ರೆಸ್‌ ಚೇತರಿಸಿಕೊಂಡಿದೆ. ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಜಿಲ್ಲೆಯಲ್ಲಿ ಮುನ್ನಡೆಗಳಿಸಿದೆ, ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಒಳ್ಳೆಯ ದಿನಗಳು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಗಮಂಗಲದಲ್ಲೇ ಸ್ಪರ್ಧೆ:  ನಾನು ಯಾವುದೇ ಕಾರಣಕ್ಕೂ ನಾಗಮಂಗಲ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಈ ಕ್ಷೇತ್ರ ನನಗೆ ಎಲ್ಲವನ್ನೂ ಕೊಟ್ಟಿದೆ ಹೀಗಿದ್ದೂ ಬೇರೆ ಕ್ಷೇತ್ರಕ್ಕೆ ಏಕೆ ಹೋಗಲಿ. ಜಿಲ್ಲೆಯ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಮಂಡ್ಯ ಕ್ಷೇತ್ರಕ್ಕೆ ಬನ್ನಿ ಎಂದು ಕೆಲವರು ಪ್ರೀತಿಯಿಂದ ಆಹ್ವಾನ ನೀಡುತ್ತಾರೆ. ಅದು ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿಗಷ್ಠೇ ಸೀಮಿತ. ಆದರೆ, ನಾಗಮಂಗಲ ಕ್ಷೇತ್ರ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಮಾಜಿ ಸಂಸದ ಎಲ್.ಆರ್‌. ಶಿವರಾಮೇಗೌಡ ತಾಲೂಕಿನಲ್ಲಿ ಚುನಾವಣೆಗೆ ನಿಲ್ಲುವುದು ಅವರ ವೈಯುಕ್ತಿಕ ಅಭಿಪ್ರಾಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರುವ ಸಾಧ್ಯತೆಗಳು ಇವೆ. ಎಲ್ಲವನ್ನು ಪರಿಶೀಲಿಸಿ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಪ್ರಸನ್ನ, ದಿವಾಕರ್‌, ಮಾಜಿ ಅಧ್ಯಕ್ಷರಾದ ಎಚ್‌.ಟಿ.ಕೃಷ್ಣೇಗೌಡ, ಎನ್‌.ಜೆ.ರಾಜೇಶ್‌, ಕಂಚನಹಳ್ಳಿ ಬಾಲು, ಕೊಣನೂರು ಹನುಮಂತು, ರವಿ ಸೇರಿದಂತೆ ಹಲವಾರು ಮುಖಂಡರು, ನಾಗಮಂಗಲ ವಿಧಾನ ಸಭಾ ಕ್ಷೇತ್ರದ 21 ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಜರಿದ್ದರು.