ಆರೋಪಿ ಅನೀಸ್ ಪೂಜಾರಿ ವಶಕ್ಕೆ| ಪ್ರಕರಣದ ಹಿಂದೆ ದುರುದ್ದೇಶ ಸಾಬೀತಾಗದ ಹಿನ್ನೆಲೆ ಮುಚ್ಚಳಿಕೆ ಬರೆಸಿ ಬಿಡುಗಡೆ| ಸಂಪೂರ್ಣ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ|
ಮಂಗಳೂರು(ಡಿ.25): ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಅವರ ಕಾರನ್ನು ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನೀಸ್ ಪೂಜಾರಿ (28) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
"
ಈತ ಮಹಿಳಾ ಕಾಂಗ್ರೆಸ್‌ನ ಬೋಳೂರು ವಾರ್ಡ್‌ನ ಕಾರ್ಯಕರ್ತೆಯೊಬ್ಬರ ಮಗ ಎನ್ನುವುದು ತಿಳಿದುಬಂದಿದ್ದು, ಖಾದರ್ ಕಾರು ಫಾಲೋ ಮಾಡಿದ ಹಿಂದೆ ದುರುದ್ದೇಶ ಇರಲಿಲ್ಲ ಎನ್ನುವ ಅಂಶ ಗೊತ್ತಾದ ಬಳಿಕ ಮುಚ್ಚಳಿಕೆ ಬರೆಸಿ ಬಿಟ್ಟಿದ್ದಾರೆ. ಆದರೆ ಅನೀಸ್ ಪೂಜಾರಿಯ ವಿರುದ್ಧ ಈಗಾಗಲೇ ಕಳವು, ದರೋಡೆ, ಗಾಂಜಾ ಸೇವನೆ ಮತ್ತಿತರ ಹಲವು ಕೇಸ್‌ಗಳು ದಾಖಲಾಗಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ. ಹೀಗಾಗಿ ಖಾದರ್ ಕಾರು ಫಾಲೋ ಮಾಡಿದ ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಐವನ್ ಡಿಸೋಜ ಸಹಿತ ಮುಖಂಡರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಯು.ಟಿ. ಖಾದರ್ ಬುಧವಾರ ಸಂಜೆ ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಲು ಏರ್‌ಪೋರ್ಟ್‌ನತ್ತ ಕಾರಿನಲ್ಲಿ ತೆರಳುತ್ತಿದ್ದರು. ಹಿಂದೆ ಎಸ್ಕಾರ್ಟ್ ವಾಹನ ಹಿಂಬಾಲಿಸುತ್ತಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅನೀಸ್ ತನ್ನ ಬೈಕ್‌ನಲ್ಲಿ ಕಾರಿಗಡ್ಡ ಬಂದು ಬಳಿಕ ಹಿಂಬಾಲಿಸಿದ್ದಾನೆ. ಕುತ್ತಾರು ಕಳೆದ ಬಳಿಕ ನಿರಂತರ ಎಸ್ಕಾರ್ಟ್ ವಾಹನ ಸೈರನ್ ಬಾರಿಸುತ್ತಿದ್ದರೂ ಅನೀಸ್ ಆಗಾಗ ಎಸ್ಕಾರ್ಟ್ ವಾಹನದ ಹಿಂದೆ ಮುಂದೆ ಅನುಮಾನಾಸ್ಪದವಾಗಿ ಬೈಕ್ ಚಲಾಯಿಸುತ್ತಿದ್ದುದರಿಂದ ಸಂಶಯಗೊಂಡ ಎಸ್ಕಾರ್ಟ್ ಅಧಿಕಾರಿ ಎಎಸ್‌ಐ ಸುಧೀರ್ ತಕ್ಷಣ ಕಂಟ್ರೋಲ್ ರೂಮ್‌ಗೆ ಮಾಹಿತಿ ರವಾನಿಸಿದ್ದರು. ಕಾರು ಪಂಪ್‌ವೆಲ್ ಬರುತ್ತಿದ್ದಂತೆ ಭದ್ರತೆಗಾಗಿ ಹೈವೇ ಪ್ಯಾಟ್ರೋಲ್ ವಾಹನ ಖಾದರ್ ಕಾರಿನ ಮುಂಭಾಗದಲ್ಲಿ ಸಂಚರಿಸಲು ಆರಂಭಿಸಿತು. ನಂತೂರು ಸರ್ಕಲ್ ಸಮೀಪ ಬರುತ್ತಿದ್ದಂತೆ ಪೊಲೀಸರು ಅನೀಸ್‌ನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಬಂದ ದಾರಿಯಲ್ಲಿ ಪರಾರಿಯಾಗಿದ್ದ.
ಕರ್ನಾಟಕದಲ್ಲಿ ಮತ್ತೋರ್ವ ಶಾಸಕನ ಹತ್ಯೆಗೆ ಸ್ಕೆಚ್? ತನಿಖೆ ಚುರುಕುಗೊಳಿಸಿದ ಪೊಲೀಸ್
ಬೈಕ್ ಸಂಖ್ಯೆಯನ್ನು ನಮೂದಿಸಿದ್ದ ಪೊಲೀಸರು ರಾತ್ರೋರಾತ್ರಿ ಅನೀಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಫಾಲೋ ಮಾಡಿದ್ದ ಹಿಂದೆ ದುರುದ್ದೇಶ ಕಂಡುಬಂದಿಲ್ಲ. ದೇರಳಕಟ್ಟೆಗೆ ಹೋಗಿದ್ದ ಆತ ಇಯರ್‌ಫೋನ್ ಹಾಕಿಕೊಂಡು ನಗರಕ್ಕೆ ಆಗಮಿಸುತ್ತಿದ್ದ ಎಂದು ತಿಳಿಸಿದ್ದಾರೆ.
ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಗುರುವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿತ್ತು. ರಾತ್ರೋರಾತ್ರಿ ಯುವಕನನ್ನು ವಶಕ್ಕೆ ಪಡೆದಿದ್ದರಿಂದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ. ಆದರೆ ಸಂಪೂರ್ಣ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 25, 2020, 11:03 AM IST