5 ರು. ನೋಟು ನಿರಾಕರಿಸಿ 1000 ದಂಡ ತೆತ್ತ ಕಂಡಕ್ಟರ್!
ಪ್ರಯಾಣಿಕನಿಂದ 5 ರು. ನೋಟನ್ನು ಪಡೆಯಲು ನಿರಾಕರಿಸಿದ ಬಸ್ ಕಂಡಕ್ಟರ್ ಇದೀಗ ತಮ್ಮ ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ. ದಂಡದ ಮೊತ್ತವಾಗಿ 1000 ರು. ಕಡಿತ ಮಾಡಲಾಗಿದೆ.
ತುರುವೇಕೆರೆ (ಜ.25): ಪ್ರಯಾಣಿಕನಿಂದ 5 ರು. ನೋಟನ್ನು ಪಡೆಯಲು ನಿರಾಕರಿಸಿದ ಬಸ್ ನಿರ್ವಾಹಕರೊಬ್ಬರು 1000 ರು. ದಂಡ ತೆತ್ತ ಪ್ರಕರಣ ವರದಿಯಾಗಿದೆ.
ತುಮಕೂರು ಜಿಲ್ಲೆಯ ತುರುವೇಕೆರೆಯ ಪ್ರಯಾಣಿಕ ಸೋಮಶೇಖರ್ 2020ರ ಮಾರ್ಚ್ 5ರಂದು ಹಾಸನ ಜಿಲ್ಲೆಯ ಅರಸೀಕೆರೆ ಡಿಪೋಗೆ ಸೇರಿದ ಸಾರಿಗೆ ಬಸ್‌ನಲ್ಲಿ ಅರಸೀಕೆರೆಯಿಂದ ತಿಪಟೂರಿನತ್ತ ಪ್ರಯಾಣ ಬೆಳೆಸಿದ್ದರು.
35 ರು. ಟಿಕೆಟ್ ಪಡೆದುಕೊಳ್ಳುವ ಸಲುವಾಗಿ 10ರ 3, ಮತ್ತು 5ರ ಒಂದು ನೋಟನ್ನು ಬಸ್ ನಿರ್ವಾಹಕ ಮಹೇಶ್‌ಗೆ ಕೊಟ್ಟಿದ್ದಾರೆ. ನಿರ್ವಾಹಕ 5ರ ನೋಟನ್ನು ಪಡೆಯಲು ನಿರಾಕರಿಸಿದ್ದಾರೆ.
ಗಮನಿಸಿ KSRTC ಯಲ್ಲಿ ಆರಂಭವಾಗುತ್ತಿದೆ ಹೊಸ ವ್ಯವಸ್ಥೆ : ಏನದು..? ...
ಮಾತಿಗೆ ಮಾತು ಬೆಳೆದು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿತು. ಈ ಸಂಬಂಧ ಸೋಮಶೇಖರ್, ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಚಿಕ್ಕಮಗಳೂರು ವಿಭಾಗೀಯ ನಿಯಂತ್ರಕರು ತನಿಖೆ ನಡೆಸಿ ವೇತನದಿಂದ 1000 ರು. ಕಡಿತಗೊಳಿಸಿದ್ದಾರೆ. ಅಲ್ಲದೆ ನೊಂದ ಪ್ರಯಾಣಿಕನಿಗೆ ಅಧಿಕಾರಿಗಳು ವಿಷಾದನೀಯ ಪತ್ರ ರವಾನಿಸಿದ್ದಾರೆ.