ಆನಂದ್‌ ಎಂ.ಸೌದಿ

ಯಾದಗಿರಿ [ಸೆ.05]:  ಬೆಳೆನಷ್ಟ, ಸಾಲಬಾಧೆಯಂಥ ಪರಿಸ್ಥಿತಿಯಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗುವ ರೈತನ ಕುಟುಂಬಕ್ಕೆ ಪರಿಹಾರ ಸಿಗಬೇಕಾದರೆ ಆತನ ಹೆಸರಲ್ಲೇ ಬ್ಯಾಂಕ್‌ ಸಾಲದ ದಾಖಲೆ ಇರಬೇಕೆಂಬ ನಿಯಮ ಅನೇಕ ಸಂತ್ರಸ್ತ ರೈತರ ಕುಟುಂಬಗಳನ್ನು ದುಃಖದ ಮಡುವಿಗೆ ತಳ್ಳಿದೆ. ನಾಲ್ಕು ವರ್ಷದ ಹಿಂದೆ ಜಾರಿಗೆ ತಂದ ಈ ಅವೈಜ್ಞಾನಿಕ ನಿಯಮದಿಂದಾಗಿ ಸರ್ಕಾರದಿಂದ ಬಿಡಿಗಾಸೂ ಪರಿಹಾರ ಸಿಗದೆ ರಾಜ್ಯದಲ್ಲಿ ಅನೇಕ ರೈತ ಕುಟುಂಬಗಳು ಬೀದಿಗೆ ಬೀಳುತ್ತಿವೆ.

ರಾಜ್ಯದ ರೈತ ಸಮುದಾಯದಲ್ಲಿ ಅವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದು, ಆಸ್ತಿಯೆಲ್ಲ ತಂದೆ ಅಥವಾ ಕುಟುಂಬದ ಹಿರಿಯರ ಹೆಸರಿನಲ್ಲಿರುತ್ತದೆ. ಇಂಥ ಕುಟುಂಬಗಳಲ್ಲಿ ಕೃಷಿ ಜವಾಬ್ದಾರಿ ಹೊತ್ತ ಮಗನ ಹೆಸರಲ್ಲಿ ಆಸ್ತಿ ದಾಖಲೆ ಇಲ್ಲದಿದ್ದರೆ ಬ್ಯಾಂಕ್‌ಗಳು ಆತನಿಗೆ ಸಾಲವನ್ನೇ ನೀಡುವುದಿಲ್ಲ. ಅನಿವಾರ್ಯವಾಗಿ ಆತ ತಂದೆ ಅಥವಾ ಕುಟುಂಬದ ಯಾರ ಹೆಸರಲ್ಲಿ ಜಮೀನಿರುತ್ತದೋ ಅವರದ್ದೇ ಹೆಸರಲ್ಲಿ ಬ್ಯಾಂಕ್‌ನಲ್ಲಿ ಅಥವಾ ಇತರೆಡೆ ಕೈಗಡ ಎತ್ತುವುದು ಅನಿವಾರ್ಯ. ಒಂದು ವೇಳೆ ಬೆಳೆನಷ್ಟದಂಥ ಸಂಕಷ್ಟದ ಸಮಯದಲ್ಲಿ ರೈತನೇನಾದರೂ ಆತ ಆತ್ಮಹತ್ಯೆ ಮಾಡಿಕೊಂಡರೆ ಆತನ ಕುಟುಂಬವನ್ನು ದೇವರೇ ಕಾಪಾಡಬೇಕು. ಕಾರಣ ಇಷ್ಟೆ, ಸಾಲದ ದಾಖಲೆ ಆತ್ಮಹತ್ಯೆ ಮಾಡಿಕೊಂಡ ರೈತನ ಹೆಸರಲ್ಲಿ ಇರುವುದಿಲ್ಲ, ಸರ್ಕಾರಿ ನಿಯಮಾವಳಿ ಪ್ರಕಾರ ಆತ ರೈತನೇ ಆಗಿರುವುದಿಲ್ಲ. ಹೀಗಾಗಿ ಮೃತ ಕುಟುಂಬಕ್ಕೆ ಇಂಥ ಸಂಕಷ್ಟದ ಸ್ಥಿತಿಯಲ್ಲಿ ಯಾವುದೇ ಪರಿಹಾರವೂ ಸಿಗುವುದಿಲ್ಲ.

ಸೌಲಭ್ಯವೂ ಸಿಗದು: ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಪರಿಹಾರ ದೊರೆತಲ್ಲಿ ಅದು ಜಿಲ್ಲಾಡಳಿತದ ಪಟ್ಟಿಯಲ್ಲಿ ನಮೂದಾಗುತ್ತದೆ. ಹೀಗಾಗಿ ಅವರ ಮಕ್ಕಳಿಗೆ, ಕುಟುಂಬಕ್ಕೆ ಸರ್ಕಾರದಿಂದ ಉಚಿತವಾಗಿ ಶಿಕ್ಷಣ, ಉದ್ಯೋಗ ಮತ್ತಿತರ ಸೌಲಭ್ಯಗಳು ಸಿಗುತ್ತವೆ. ಆದರೆ, ಆತ್ಮಹತ್ಯೆ ಮಾಡಿಕೊಂಡ ರೈತನ ಹೆಸರಲ್ಲಿ ದಾಖಲೆ ಇಲ್ಲದಿದ್ದರೆ ಪರಿಹಾರದ ಜತೆಗೆ ಈ ಎಲ್ಲ ಸೌಲಭ್ಯಗಳಿಂದಲೂ ಇಡೀ ಕುಟುಂಬ ವಂಚಿತವಾಗಬೇಕಾಗುತ್ತದೆ. ಒಂದು ಕಡೆ ದುಡಿಯುವ ಯಜಮಾನನ್ನು ಕಳೆದುಕೊಂಡ ದುಃಖ, ಇನ್ನೊಂದು ಕಡೆ ಯಾವುದೇ ಪರಿಹಾರ ಸಿಗದೆ ಮಾಡಿದ ಸಾಲ ತೀರಿಸುವುದು ಹೇಗೆನ್ನುವ ಚಿಂತೆಯಿಂದ ಇಡೀ ಕುಟುಂಬ ಬೀದಿಗೆ ಬೀಳುತ್ತದೆ.

ಎಚ್‌ಡಿಕೆಯಿಂದಲೂ ಮನವಿ ತಿರಸ್ಕೃತ: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಬೇವಿನಹಳ್ಳಿ(ಜೆ) ಗ್ರಾಮದ ನಿಂಗಪ್ಪ ಫೆ.14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ತಂದೆ, ತಾಯಿ, ಪತ್ನಿ, ಮೂವರು ಮಕ್ಕಳ ಕುಟುಂಬದ ಬದುಕಿಗೆ ಇವರೇ ಆಧಾರವಾಗಿದ್ದರು. ದಶಕಗಳಿಂದಲೂ ಕೃಷಿ ಮಾಡಿಕೊಂಡು ಬರುತ್ತಿದ್ದರೂ ಜಮೀನು ಮಾತ್ರ ನಿಂಗಪ್ಪ ಅವರ ತಾಯಿ ಲಕ್ಷ್ಮೇಬಾಯಿ ಹೆಸರಲ್ಲಿತ್ತು. ನಿಂಗಪ್ಪ ಕೃಷಿಕರಾಗಿದ್ದರೂ ಸಾಲದ ದಾಖಲೆ ಇಲ್ಲದೆ ನಿಂಗಪ್ಪನ ಕುಟುಂಬಕ್ಕೆ ಪರಿಹಾರ ಸಿಗಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವೇಳೆ ನಿಂಗಪ್ಪ ಕುಟುಂಬ ಪರಿಹಾಕ್ಕಾಗಿ ಮನವಿ ಮಾಡಿದ್ದರೂ ಇದೇ ಕಾರಣ ಮುಂದಿಟ್ಟುಕೊಂಡು ಮನವಿ ತಿರಸ್ಕೃರಿಸಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ವಡಗೇರಾ ತಾಲೂಕಿನ ಗುಲಸರಂ ಗ್ರಾಮದ ರವಿಗೌಡ 2016ರ ಜುಲೈ 25ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ತಂದೆ ಹೆಸರಿನಲ್ಲಿ ಜಮೀನು ಇತ್ತು. ಆದರೆ, ರವಿಗೌಡ ಹೆಸರಲ್ಲಿ ಸಾಲದ ದಾಖಲೆ ಇರದ ಕಾರಣ ಪರಿಹಾರ ತಿರಸ್ಕೃರಿಸಲಾಯಿತು. ಕಚೇರಿ ಅಲೆದಾಡಿದ ರವಿಗೌಡರ ಕುಟುಂಬಕ್ಕೆ ಯಾರ ನೆರವೂ ಸಿಗದಾಗ ಇಡೀ ಕುಟುಂಬ ಈಗ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಆಶ್ರಯ ಪಡೆದಿದೆ. ಏವೂರಿನ ಮಲ್ಲಣ್ಣ ತಳವಾರ, ಶಿವಯನೂರಿನ ಯೆಲ್ಲಪ್ಪ, ಸಗರದ ಲಕ್ಷ್ಮಣ, ಹಗರಟಗಿಯ ಬಸವರಾಜ್‌ ಸೇರಿ ಜಿಲ್ಲೆಯಲ್ಲಿ ಹೀಗೆ ಅನೇಕ ಕುಟುಂಬಗಳು ಈ ರೀತಿ ಪರಿಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿವೆ.

ಏನಿದು ಹೊಸ ನಿಯಮ?

ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ 2014ರಲ್ಲಿ ಸರ್ಕಾರದ ಆದೇಶದಲ್ಲಿ ಮೃತ ರೈತನ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಜಮೀನಿದ್ದರೂ ಅಂಥ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ಆದರೆ ಭೋಗ್ಯ(ಲೀಸ್‌)ಕ್ಕೆ ಪಡೆದಿದ್ದ ಭೂಮಿ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೆ 2015ರ ಆದೇಶದಲ್ಲಿ ಲೀಸ್‌ ಪಡೆದ ಭೂಮಿಗೂ ಪರಿಹಾರ ಅನ್ವಯಿಸುತ್ತದೆ ಎಂಬ ನಿಯಮ ಅಳವಡಿಸಲಾಯಿತು. ಇದೇ ವೇಳೆ ಭೂಮಿ ಸಂಬಂಧಿಕರ ಹೆಸರಲ್ಲಿದ್ದರೂ ಸಾಲದ ದಾಖಲೆ ಮಾತ್ರ ಆತ್ಮಹತ್ಯೆ ಮಾಡಿಕೊಂಡ ರೈತರ ಹೆಸರಲ್ಲೇ ಇರಬೇಕು ಎಂಬ ನಿಯಮ ಕಡ್ಡಾಯ ಮಾಡಲಾಯ್ತು. ಆ ಬಳಿಕವೇ ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಜಮೀನು ಯಾರ ಹೆಸರಲ್ಲಿರುತ್ತದೆಯೋ ಅವರಿಗಷ್ಟೇ ಬ್ಯಾಂಕುಗಳು ಸಾಲ ಕೊಡುತ್ತವೆ. ಸಹಜವಾಗಿಯೇ ಅವಿಭಕ್ತ ಕುಟುಂಬಗಳಲ್ಲಿ ಕೃಷಿ ಮಾಡುವ ವ್ಯಕ್ತಿಯ ಹೆಸರಲ್ಲೇ ಆಸ್ತಿ ಇರುವುದಿಲ್ಲ. ತಂದೆ, ತಾಯಿ ಅಥವಾ ಕುಟುಂಬದ ಹಿರಿಯರ ಹೆಸರಲ್ಲಿ ಜಮೀನು ಇರುತ್ತದೆ. ಹೀಗಾಗಿ ಕೃಷಿ ಮಾಡುವವ ಅನಿವಾರ್ಯವಾಗಿ ಕೈಗಡ ಅಥವಾ ಯಾರ ಹೆಸರಲ್ಲಿ ಜಮೀನು ಇರುತ್ತೋ ಅವರ ಹೆಸರಲ್ಲಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಸಾಲ ಮಾತ್ರ ಕೃಷಿ ಮಾಡುವವನೇ ತೀರಿಸಬೇಕು. ಒಂದು ವೇಳೆ ಬೆಳೆನಷ್ಟವಾಗಿ ರೈತ ಆತ್ಮಹತ್ಯೆಗೆ ಶರಣಾದರೆ ಸರ್ಕಾರದಿಂದ ಆತನ ಕುಟುಂಬಕ್ಕೆ ಬಿಡಿಗಾಸು ಪರಿಹಾರವೂ ಸಿಗುವುದಿಲ್ಲ.

ಮೃತ ರೈತನ ಹೆಸರಲ್ಲಿ ಸಾಲದ ದಾಖಲೆಯಿರಬೇಕು ಅನ್ನೋದು ಅವೈಜ್ಞಾನಿಕ. ತಂದೆ ಅಥವಾ ತಾಯಿ ಹೆಸರಲ್ಲಿ ಆಸ್ತಿಗಳಿದ್ದಾಗ, ಬ್ಯಾಂಕುಗಳು ಸಾಲ ಹೇಗೆ ಕೊಡುತ್ತವೆ? ಸಾಲ ಕೊಡದಿದ್ದಾಗ ದಾಖಲೆ ಎಲ್ಲಿಂದ ತರೋಣ?

-ಹೊನ್ನಪ್ಪ ದಾಳಿ, ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ನಿಂಗಪ್ಪನ ಸಂಬಂಧಿ, ಗೊಂದೆನೂರು, ಶಹಾಪುರ