Asianet Suvarna News Asianet Suvarna News

ಬೆಂಗ್ಳೂರಲ್ಲಿ ವರುಣನ ಅಬ್ಬರ: ಕಾಂಪೌಂಡ್‌ ಕುಸಿದು 10 ಬೈಕ್‌ಗಳಿಗೆ ಹಾನಿ

ಬೆಂಗಳೂರಿನಲ್ಲಿ ಜೂನ್‌ 1ರಂದು ಗುಡುಗು, ಮಿಂಚು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆಯಿದ್ದು ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಿದೆ. ಇಂದು(ಮೇ 30) ಮತ್ತು ಮೇ 31ರಂದು ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ 

Compound Collapsed and Damaged 10 Bikes Due to Heavy Rain in Bengaluru grg
Author
First Published May 30, 2023, 6:05 AM IST | Last Updated May 30, 2023, 6:05 AM IST

ಬೆಂಗಳೂರು(ಮೇ.30):  ಎರಡ್ಮೂರು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಸೋಮವಾರ ನಗರದಲ್ಲಿ ಮತ್ತೆ ಅಬ್ಬರಿಸಿದ್ದು, ಗಾರ್ಮೆಂಟ್ಸ್‌ ಕಂಪನಿಯ ಕಾಂಪೌಂಡ್‌ವೊಂದು ಕುಸಿದು 10ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿರುವ ಘಟನೆ ನಡೆದಿದೆ. ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದ ಮಾಗಡಿ ರಸ್ತೆಯಲ್ಲಿರುವ ಶಾಹಿ ಗಾರ್ಮೆಂಟ್ಸ್‌ನ ಕಾಂಪೌಂಡ್‌ ಕುಸಿದು ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಗೋಡೆ ಬಿದ್ದಿದ್ದು 10ಕ್ಕೂ ಹೆಚ್ಚು ಬೈಕ್‌ಗಳು ಹಾನಿ ಗೊಂಡಿವೆ. ಈ ಸಂದರ್ಭದಲ್ಲಿ ಸಮೀಪ ನಿಂತಿದ್ದ ಕೆಲವರು ಒಂದಷ್ಟುಬೈಕ್‌ಗಳನ್ನು ಎಳೆದು ಹಾನಿಯಿಂದ ತಪ್ಪಿಸಿದ್ದಾರೆ.

ನಗರದ ಬಹುತೇಕ ಕಡೆಗಳಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಮಧ್ಯಾಹ್ನ ದಿಢೀರ್‌ ಅರ್ಧಗಂಟೆ ಕಾಲ ಹಲವೆಡೆ ಜೋರಾಗಿ ಮಳೆ ಸುರಿಯಿತು. ಇದರಿಂದಾಗಿ ಕೆಲವು ಸಮಯ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

Karnataka rains: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ: ಸಿಡಿಲಿಗೆ ಮೂವರು ಬಲಿ!

ಮಾಗಡಿ ರಸ್ತೆ, ನಾಗರಬಾವಿ, ಮಾದನಾಯಕನಹಳ್ಳಿ, ನಂದಿನಿ ಲೇಔಟ್‌, ಮಾರಪ್ಪನಪಾಳ್ಯ, ಮಲ್ಲೇಶ್ವರ, ಜಾಲಹಳ್ಳಿ, ಜೆ.ಪಿ.ಪಾರ್ಕ್, ರಾಧಾಕೃಷ್ಣ ದೇವಸ್ಥಾನ, ಜಕ್ಕೂರು, ಬ್ಯಾಟರಾಯನಪುರ, ಯಲಹಂಕ, ಕೊಡಿಗೆಹಳ್ಳಿ, ಕುವೆಂಪುನಗರ, ಅತ್ತಿಗುಪ್ಪೆ, ವಿಜಯನಗರ, ಕೆ.ಆರ್‌.ಪುರ, ಕೆಂಗೇರಿ, ಹಂಪಿನಗರ, ಹೆಮ್ಮಿಗೆಪುರ, ಮಾರುತಿ ಮಂದಿರ, ಮತ್ತಿಕೆರೆ ಹಾಗೂ ರಾಜ್‌ಮಹಲ್‌ ಗುಟ್ಟಹಳ್ಳಿ ಸೇರಿ ಹಲವು ಬಡಾವಣೆಗಳಲ್ಲಿ ಮಳೆ ಸುರಿದಿದೆ.
ಬಿಬಿಎಂಪಿಯ ಎಂಟು ವಲಯಗಳ ಪೈಕಿ ಪಶ್ಚಿಮ ವಲಯದಲ್ಲಿ ಹೆಚ್ಚಾಗಿ ಮಳೆಯಾಗಿದೆ. ಅಂಡರ್‌ಪಾಸ್‌, ಜಂಕ್ಷನ್‌, ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಗಾಳಿಯ ಅಬ್ಬರ ಹೆಚ್ಚಾಗಿ ಇಲ್ಲದ್ದರಿಂದ ಯಾವುದೇ ಮರಗಳು ಬಿದ್ದ ಅಥವಾ ಮುರಿದ ಬಗ್ಗೆ ವರದಿಯಾಗಿಲ್ಲ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಶಿವಮೊಗ್ಗದಲ್ಲಿ ಕುರಿ ಮೇಯಿಸಲು ಹೋದ ಮಹಿಳೆ ಸಿಡಿಲಿಗೆ ಬಲಿ

ಕಳೆದ ವಾರ ಸುರಿದ ಗಾಳಿಮಳೆಯಿಂದ ನೂರಾರು ವಿದ್ಯುತ್‌ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿದ್ದವು. ಅನೇಕ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿ ಮೃತಪಟ್ಟಿದ್ದರು.
ಇನ್ನು 3 ದಿನ ಗುಡುಗು ಮಳೆ

ನಗರದಲ್ಲಿ ಜೂನ್‌ 1ರಂದು ಗುಡುಗು, ಮಿಂಚು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆಯಿದ್ದು ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಿದೆ. ಮೇ 30 ಮತ್ತು ಮೇ 31ರಂದು ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Latest Videos
Follow Us:
Download App:
  • android
  • ios