Asianet Suvarna News Asianet Suvarna News

ವಸತಿ ಯೋಜನೆ ಶೀಘ್ರ ಪೂರ್ಣಗೊಳಿಸಿ; ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ತಾಕೀತು

  • ವಸತಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಡಿಸಿ ತಾಕೀತು
  • ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಕೂಡಲೇ ಸರಿಪಡಿಸಿ
  • ನಗರ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
  • ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

 

Completion of the housing project at the earliest warn  District Collector Dr.R. Selvamani
Author
Bengaluru, First Published Aug 26, 2022, 10:08 AM IST

ಶಿವಮೊಗ್ಗ (ಆ.26) : ನಗರ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಕೂಡಲೇ ಸರಿಪಡಿಸಿ ಶೀಘ್ರ ಕಾರ್ಯಗತಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಇಲ್ಲಿನ ಜಿಲ್ಲಾಡಳಿತ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

PMAY: ಕರ್ನಾಟಕದಲ್ಲಿ ವಸತಿ ಯೋಜನೆ ಶರವೇಗದಲ್ಲಿ ಜಾರಿ: ಸೋಮಣ್ಣ

2021-22ನೇ ಸಾಲಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ನಗರ ವಸತಿ ಯೋಜನೆ(Dr. BR Ambedkar Urban Housing Project), ವಾಜಪೇಯಿ ನಗರ ವಸತಿ ಯೋಜನೆ(Vajpayee Urban Housing Scheme), ಡಾ.ಬಿ.ಆರ್‌.ಅಂಬೇಡ್ಕರ್‌ ನಗರ ವಸತಿ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಒಟ್ಟು 1740 ವಸತಿ ನೀಡುವ ಗುರಿ ಇದ್ದು, 531 ಮನೆಗಳು ಅನುಮೋದನೆಗೊಂಡಿವೆ. 444 ಬಾಕಿ ಇದೆ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ವಸತಿ ವಿವರ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸುವಂತೆ ಡಿಯುಡಿಸಿ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.

ತೀರ್ಥಹಳ್ಳಿ(Teerthahalli) ಪಟ್ಟಣ ಪಂಚಾಯ್ತಿಯಲ್ಲಿ ಫಲಾನುಭವಿಗಳು ಅರ್ಜಿ ಸಲ್ಲಿಸದಿರುವ ಕಾರಣ ಗುರಿ ಹಿಂದಿರುಗಿಸುವಂತೆ, ವೈಯಕ್ತಿಕ ಮನೆ ನಿರ್ಮಾಣ ಕಾರ್ಯ ಸಹ ಚುರುಕುಗೊಳಿಸಬೇಕು. ತಾಂತ್ರಿಕ ತೊಂದರೆ ಇತರೆ ಸಮಸ್ಯೆಗಳನ್ನು ಗುರುತಿಸಿ, ಪರಿಹಾರೋಪಾಯಗಳನ್ನು ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದರು.

ಶಿವಮೊಗ್ಗ ತಾಲೂಕಿನ ಗೋವಿಂದಾಪುರ(Govindapura)ದಲ್ಲಿ 249.02 ರು.ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 3000 (125 ಬ್ಲಾಕ್‌) ಗುಂಪು ಮನೆ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಯುಜಿಡಿ, ಎಸ್‌ಟಿಪಿ ಮತ್ತು ವಿದ್ಯುತ್‌ ಈ ಮೂರು ಕೆಲಸಗಳು ಒಟ್ಟೊಟ್ಟಿಗೆ ಆಗಬೇಕು. ಯಾವುದೇ ವಸತಿ ನಿರ್ಮಾಣ ಕಾರ್ಯದಲ್ಲಿ ಸಮರ್ಪಕ ಯೋಜನೆ ರೂಪಿಸಿ ಈ ಎಲ್ಲ ಕಾರ್ಯ ಕೈಗೊಳ್ಳಬೇಕು ಎಂದರು. ನವುಲೆ ಗ್ರಾಮದಲ್ಲಿ ಕೈಗೊಂಡಿರುವ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯು ಮಂದಗತಿಯಲ್ಲಿ ಸಾಗುತ್ತಿದ್ದು, ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು. ಭದ್ರಾವತಿಯಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಾಣವಾದ ಮನೆಗಳನ್ನು ಒಳಚರಂಡಿ ಇತರೆ ವ್ಯವಸ್ಥೆಗೊಳಿಸಿ ನೀಡುವಂತೆ ತಿಳಿಸಿದರು.

ನೋಟಿಸ್‌ ಜಾರಿ ಎಚ್ಚರಿಕೆ: ಗೋಪಿಶೆಟ್ಟಿಕೊಪ್ಪದ ಆಶ್ರಯ ವಸತಿ ಯೋಜನೆ ಇನ್ನೂ ಅನುಮೋದನೆಯಾಗದೆ ಬಾಕಿ ಇದ್ದು ಪಾಲಿಕೆಯವರು ಕಟ್ಟಡ ನಿರ್ಮಾಣ ಏಜೆನ್ಸಿಗೆ ಇನ್ನೂ ಭೂಮಿ ಹಸ್ತಾಂತರಿಸಿಲ್ಲ. ಕೂಡಲೇ ಅವರಿಗೆ ಪತ್ರ ಬರೆದು ಹಸ್ತಾಂತರಿಸಬೇಕು. ಪಾಲಿಕೆಯವರು ವಸತಿ ಯೋಜನೆ ಕುರಿತು ಗಂಭೀರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಯೋಜನೆ ಕುರಿತು ನಿಯಮಾನುಸಾರ ಶೀಘ್ರ ಕ್ರಮ ವಹಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾಗಳು ಕ್ರಮ ವಹಿಸಬೇಕು. ಹಾಗೂ ಎನ್‌ಜಿಟಿ ಮಾರ್ಗಸೂಚಿಯನ್ವಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಹಾಯಕ ಕಾರ್ಯಪಾಲಕ ಅಭಿಯಂತರರು ಈ ಬಗ್ಗೆ ಜವಾಬ್ದಾರಿ ವಹಿಸಬೇಕೆಂದರು. ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಹಣ ಬರುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.\

ಗುಡ್‌ ನ್ಯೂಸ್: ವಸತಿ ಯೋಜನೆಗಳ ಆದಾಯಮಿತಿ ಹೆಚ್ಚಳ

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಆಗಬೇಕಿರುವ ಕೆಲಸಗಳು, ಇತರೆ ಅಂಶಗಳ ಕುರಿತು ಪಟ್ಟಿಮಾಡಿ ತಿಳಿಸಿದಲ್ಲಿ ನಿಗಮದ ಎಂ.ಡಿ ಯವರೊಂದಿಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಡಿಯುಡಿಸಿ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್‌, ಸಿಎಒ ಮೋಹನ್‌ ಕುಮಾರ್‌, ಎಇಇ ಮಂಜುನಾಥ್‌, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಜರಿದ್ದರು.

Follow Us:
Download App:
  • android
  • ios