PMAY: ಕರ್ನಾಟಕದಲ್ಲಿ ವಸತಿ ಯೋಜನೆ ಶರವೇಗದಲ್ಲಿ ಜಾರಿ: ಸೋಮಣ್ಣ
* ಪ್ರಧಾನಮಂತ್ರಿ ಆವಾಸ್ ಯೋಜನೆ ಚುರುಕು
* ನಗರ-ಗ್ರಾಮಗಳಲ್ಲಿ ಈವರೆಗೆ 3.37 ಲಕ್ಷ ಮನೆ ನಿರ್ಮಾಣ
* ಸಾಲ ಕೊಡಿರುವ ಕಾರ್ಯಕ್ಕೆ ಹಿಂದಿನ ಸರ್ಕಾರಗಳು ಕೈ ಹಾಕಿರಲಿಲ್ಲ
ಬೆಂಗಳೂರು(ಏ.09): ರಾಜ್ಯದಲ್ಲಿ ಎಲ್ಲರಿಗೂ ಸೂರು ನೀಡುವ ಉದ್ದೇಶದಿಂದ ವಸತಿ ಯೋಜನೆಯನ್ನು ನಾಗಾಲೋಟದಲ್ಲಿ ಜಾರಿಗೊಳಿಸಲಾಗುತ್ತಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯು ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ವಿಭಿನ್ನ ರೀತಿಯಲ್ಲಿ ಜಾರಿಗೊಳ್ಳುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ(V Somanna) ಹೇಳಿದ್ದಾರೆ.
ಶುಕ್ರವಾರ ಬಿಜೆಪಿ(BJP) ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ(Karnataka) ನಗರ ಪ್ರದೇಶಕ್ಕೆ ಸಂಬಂಧಿಸಿದ 8.42 ಲಕ್ಷ ಮನೆಗಳು ಕೇಂದ್ರ ಸರ್ಕಾರದಿಂದ(Central Government) ಮಂಜೂರಾಗಿವೆ. ಮನೆಗಳ ನಿರ್ಮಾಣಕ್ಕೆ ಸಬ್ಸಿಡಿಯನ್ನು ನೀಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕೊಳಚೆ ಪ್ರದೇಶದಲ್ಲಿ ಮನೆ ನಿರ್ಮಾಣ ನಡೆಸುತ್ತಿದ್ದು, 2.62 ಲಕ್ಷ ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇದರ ಜತೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಎಲ್ಲ ನಗರಗಳಿಗೆ ವಿಸ್ತರಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಇತರ ನಗರಗಳಲ್ಲಿಯೂ ಬಡವರಿಗೆ, ತುಳಿತಕ್ಕೊಳಗಾದವರಿಗೆ ಪುರಸಭೆ, ನಗರಸಭೆ, ನಗರಪಾಲಿಕೆ ವ್ಯಾಪ್ತಿಯಲ್ಲಿ 2,500 ಎಕರೆಗೂ ಹೆಚ್ಚು ಸರ್ಕಾರಿ ಜಾಗ ಗುರುತಿಸಿ ಲಕ್ಷಾಂತರ ಮನೆ ನೀಡಲು ಅನುವು ಮಾಡಿಕೊಡಲಾಗಿದೆ ಎಂದರು.
ಧಾರವಾಡಕ್ಕೆ ಹೆಚ್ಚುವರಿ 3500 ಮನೆ: ಸಚಿವ ಸೋಮಣ್ಣ
ಸಾಲ ಕೊಡಿರುವ ಕಾರ್ಯಕ್ಕೆ ಹಿಂದಿನ ಸರ್ಕಾರಗಳು ಕೈ ಹಾಕಿರಲಿಲ್ಲ. 92 ಸಾವಿರ ಮನೆಗಳು ಅರ್ಧಂಬರ್ಧ ಕೆಲಸ ಮುಗಿಸಿ ಹಾಗೆಯೇ ಬಿದ್ದಿದ್ದವು. ಇದಕ್ಕೆ ಆದ್ಯತೆ ನೀಡಲು ಸ್ವತಃ ನಾನೇ ಸುತ್ತಾಡಿದ್ದೇನೆ. ಸಾಲ ನೀಡುವ ಕುರಿತು ಬ್ಯಾಂಕ್‌ಗಳ ಮುಖ್ಯಸ್ಥರ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಸಿ, ಆರು ಸಾವಿರಕ್ಕೂ ಹೆಚ್ಚು ಜನರಿಗೆ ಬ್ಯಾಂಕ್ ಸಾಲ ಸಿಕ್ಕಿದೆ. 2019ರಲ್ಲಿ ಮನೆಗಳ ಕುರಿತು ಸಮೀಕ್ಷೆ(Survey) ಮಾಡಿದ್ದೇವೆ. ನಗರ-ಗ್ರಾಮೀಣ ಪ್ರದೇಶದಲ್ಲಿ 3.37 ಲಕ್ಷ ಮನೆಗಳನ್ನು ಈಗಾಗಲೇ ನಿರ್ಮಿಸಿದ್ದೇವೆ. ಇದಕ್ಕಾಗಿ 9,228 ಕೋಟಿ ರು. ಖರ್ಚಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.66 ಲಕ್ಷ ಮನೆಗಳು(Home) ಮಂಜೂರಾಗಿವೆ. 1.08 ಲಕ್ಷ ಮನೆಗಳು ಪೂರ್ಣಗೊಂಡಿವೆ. 37 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 21 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕಿದೆ. ಕೇಂದ್ರದ 1,168 ಕೋಟಿ ರು. ಅನುದಾನ, ರಾಜ್ಯದ 399 ಕೋಟಿ ರು. ಅನುದಾನವನ್ನು(Grant) ಇದಕ್ಕಾಗಿ ಬಳಸಿದ್ದೇವೆ ಎಂದು ಮಾಹಿತಿ ನೀಡಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಡಿ 1.80 ಲಕ್ಷ ಮನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದು 2018-19ರಿಂದ ಬೂದಿ ಮುಚ್ಚಿದ ಕೆಂಡದಂತಿತ್ತು. ನಾನು ಬಂದ ಬಳಿಕ 35 ಸಾವಿರ ಮನೆಗಳನ್ನು ಪೂರ್ಣಗೊಳಿಸಿದ್ದೇವೆ. ಉಳಿದವರು ವಿವಿಧ ಹಂತದಲ್ಲಿವೆ. ಡಿಸೆಂಬರ್‌ನೊಳಗೆ ಉಳಿದ ಮನೆಗಳನ್ನೂ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಆವಾಸ್ ಯೋಜನೆಯಿಂದ ಪ್ರತಿ ಬಡವರಿಗೆ ಸೂರು: ಸೋಮಣ್ಣ
ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯ(Pradhan Mantri Awas Yojana) ಬಡತನದಲ್ಲಿರುವ ಸರ್ವರಿಗೂ ವಸತಿ ಕಲ್ಪಿಸಿಕೊಡುವ ಒಂದು ಅತ್ಯುತ್ತಮ ಯೋಜನೆಯಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ(V Somanna) ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಮಂಗಳವಾರ ಬೆಂಗಳೂರು(Bengaluru) ನಗರ ಜಿಲ್ಲೆಯ ಪೂರ್ವ ತಾಲೂಕಿನ ಭೋಗನಹಳ್ಳಿಯಲ್ಲಿ ಮಹದೇವಪುರ ಕ್ಷೇತ್ರದ ಕೊಳಗೇರಿಯಲ್ಲಿ ವಾಸಿಸುವ ಸುಮಾರು ಒಂದು ಸಾವಿರ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ದರು.
Family Politics: ನನ್ನ ಮಗನ ಹಣೆಬರಹದಲ್ಲಿ ಬರೆದಿದ್ದರೆ ಎಂಎಲ್ಎ ಆಗ್ತಾನೆ: ಸಚಿವ ಸೋಮಣ್ಣ
ಮಹದೇವಪುರ ಕ್ಷೇತ್ರದಲ್ಲಿ ಆರು ಲಕ್ಷ ಮತದಾರರಿದ್ದಾರೆ. ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಲು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ(Aravind Limbavali) ಅವರ ಅವಿರತ ಶ್ರಮವೇ ಕಾರಣ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ದಿನದಲ್ಲಿ ಅಭಿವೃದ್ಧಿಯಲ್ಲಿ ಇದು ಅಗ್ರಸ್ಥಾನ ಪಡೆಯಲಿದೆ ಎಂದು ಹೇಳಿದ್ದರು.
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಯಾವುದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಶಾಸಕರ ಶ್ರಮ ಮಾತ್ರವಲ್ಲ, ಆಯಾ ಕ್ಷೇತ್ರದ ಸಚಿವರ ಬೆಂಬಲ ಅತ್ಯಗತ್ಯ. ಈ ನಿಟ್ಟಿನಲ್ಲಿ ಕ್ಷೇತ್ರದ ಜನರಿಗೆ ಮೂಲಸೌಲಭ್ಯ ಮತ್ತು ವಸತಿ ಕಲ್ಪಿಸುವಲ್ಲಿ ಸಚಿವ ಸೋಮಣ್ಣ ತುಂಬು ಮನಸ್ಸಿನಿಂದ ಬೆಂಬಲ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆಗಳನ್ನು, ಆರೋಗ್ಯ ಕೇಂದ್ರ, ಮೈದಾನ ನಿರ್ಮಿಸಿ ಕೊಡುತ್ತಿರುವುದು ಜನರಿಗೆ ಸಹಕಾರಿಯಾಗುತ್ತಿದೆ. ಇನ್ನು ಅಗತ್ಯ ಇರುವ ಮನೆಗಳ ಬಗ್ಗೆ ಸರ್ವೆ ಮಾಡಿಸಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ನೀಡುವ ಕಾರ್ಯವಾಗಲಿದೆ ಎಂದು ತಿಳಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ, ಬಿಬಿಎಂಪಿ ಆಯುಕ್ತ ಬಿ.ವೆಂಕಟೇಶ್, ಮಂಡಳಿ ಸದಸ್ಯರಾದ ಕೆ.ಎಸ್.ಗೀತಾ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.