ಬಳ್ಳಾರಿ: ಕರ್ನಾಟಕ ಆಂಧ್ರ ಗಡಿ ಸರ್ವೇ ಮುಕ್ತಾಯ
ಸರ್ವೇ ಆಫ್ ಇಂಡಿಯಾದಿಂದ ಕರ್ನಾಟಕಾಂದ್ರ ಗಡಿ ಗಣಿ ಸರ್ವೇ ಮುಕ್ತಾಯ| ನಾಲ್ಕು ದಿನಗಳಲ್ಲಿ ಮರು ಸರ್ವೇ ಕಾರ್ಯ ಪೂರ್ಣಗೊಳಿಸಿದ ಅಧಿಕಾರಿಗಳ ತಂಡ|
ಬಳ್ಳಾರಿ(ಫೆ.05): ಸಂಡೂರಿನ ಕರ್ನಾಟಕ ಆಂಧ್ರ ಗಡಿ ಪ್ರದೇಶದಲ್ಲಿ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳ ತಂಡ ಕೈಗೊಂಡಿದ್ದ ಗಣಿ ಮರು ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಇನ್ನು ಮುಂದೆ ಎರಡೂ ರಾಜ್ಯಗಳ ಗಡಿ ಜಿಲ್ಲೆಗಳಾದ ಬಳ್ಳಾರಿ, ಆಂಧ್ರದ ಅನಂತಪುರ ಜಿಲ್ಲಾಡಳಿತಗಳಿಂದ ದೃಢೀಕರಣ (ಸರ್ಟಿಫೈ) ಕಾರ್ಯ ನಡೆಯಬೇಕಿದೆ.
ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು ಕರ್ನಾಟಕಾಂದ್ರ ಅಧಿಕಾರಿಗಳನ್ನು ಒಳಗೊಂಡ ಮೂರು ತಂಡಗಳೊಂದಿಗೆ ತಾಲೂಕಿನ ವಿಠಲಾಪುರ, ತುಮಟಿ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿರುವ ಆಂದ್ರದ ಓಬಳಾಪುರಂ, ಮಲಪನಗುಡಿ, ಗವಿಸಿದ್ದಾಪುರ ಅರಣ್ಯ ಪ್ರದೇಶಗಳ ರಾಕ್ ಪಾಯಿಂಟ್‌ಗಳಲ್ಲಿ ಗಡಿ ಗುರುತುಗಳನ್ನು ದಾಖಲಿಸಿದ್ದಾರೆ. ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಬಳ್ಳಾರಿ ಬೆಳಗಲ್ ಕ್ರಾಸ್‌ನಲ್ಲಿರುವ ಅರಣ್ಯ ಸಸ್ಯಕ್ಷೇತ್ರ ಮತ್ತು ತುಮಟಿ ಬಳಿ ಎರಡು ರೆಫ್ರೆನ್ಸ್ ಪಾಯಿಂಟ್, ಆಂದ್ರದ ಗಡಿಗ್ರಾಮಗಳಲ್ಲಿ ಎರಡು ರೆಫ್ರೆನ್ಸ್ ಪಾಯಿಂಟ್‌ಗಳ ಮೂಲಕ ರಾಕ್, ಟ್ರೈಜಂಕ್ಷನ್, ಪಾಯಿಂಟ್‌ಗಳನ್ನು ಗುರುತಿಸಿ ಸರ್ವೇ ಕಾರ್ಯ ಪೂರ್ಣಗೊಳಿಸಿದ್ದಾರೆ. ಎರಡೂ ರಾಜ್ಯಗಳ ಗಣಿಗಡಿಗಳುದ್ದಕ್ಕೂ ನೂತನವಾಗಿ 76 ರಾಕ್ ಪಾಯಿಂಟ್‌ಗಳನ್ನು ಗುರುತಿಸಿ ಪಿಲ್ಲರ್‌ಗಳನ್ನು ನಿರ್ಮಿಸಲಾಗಿತ್ತು ಎಂದು ಸರ್ವೇ ಕಾರ್ಯದಲ್ಲಿದ್ದ ಅಧಿಕಾರಿಗಳ ತಂಡದ ಮೂಲಗಳು ತಿಳಿಸಿವೆ.
ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಗಡಿಪ್ರದೇಶದಲ್ಲಿ ಗಡಿಗುರುತು ಕಾರ್ಯ ಶುರು
ನಾಲ್ಕು ದಿನಗಳ ಸರ್ವೇ ಕಾರ್ಯದಲ್ಲಿ ಗಣಿಗಡಿ ಸರ್ವೇ ತಂಡದ ಮುಖ್ಯಸ್ಥ ಪಿ. ಪ್ರೇಮಕುಮಾರ್, ಸರ್ವೇ ಅಧಿಕಾರಿ ಸಿಲ್ವೇರು ಶ್ರೀನಿವಾಸ, ಡಿಡಿಎಲ್‌ಆರ್ ಸುಮಾ ನಾಯ್ಕ, ಕಾರ್ಯಯೋಜನೆ ಮಹೇಶ್ವರಪ್ಪ, ಚಂದ್ರಶೇಖರಪ್ಪ, ಶಿವಕುಮಾರ್, ಡಿಆರ್‌ಎಫ್‌ಒ ಕಾಂತರಾಜ್, ಸರ್ವೇಯರ್‌ಗಳಾದ ರಾಘವರೆಡ್ಡಿ, ರಘು ವೆಂಕಟೇಶ, ಪ್ರಕಾಶ, ಆಂಧ್ರದ ಅಧಿಕಾರಿಗಳಿದ್ದರು.
ಕರ್ನಾಟಕಾಂದ್ರ ಗಣಿಗಡಿ ಸರ್ವೇ ಎರಡು-ಮೂರು ಬಾರಿ ನಡೆದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಬಾರಿ ಪೂರ್ಣಗೊಳಿಸಬೇಕು ಎಂದು ಸರ್ವೇ ಆಫ್ ಇಂಡಿಯಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರಿಂದ ಅಕ್ಟೋಬರ್ 16ರಿಂದ ಸರ್ವೇ ಕಾರ್ಯ ನಡೆದಿತ್ತು. ಈಗ ಫೆ. 1ರಿಂದ ಗುರುವಾರ(4 ದಿನಗಳ)ದ ವರೆಗೆ ಕೈಗೊಂಡ ಕರ್ನಾಟಕಾಂದ್ರ ಗಡಿ ಗಣಿ ಸರ್ವೇಕಾರ್ಯ ಪೂರ್ಣಗೊಳಿಸಲಾಯಿತು.