Asianet Suvarna News Asianet Suvarna News

ಫೆ.15ರೊಳಗೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ: ಕಾರಜೋಳ

ವಿಮಾನ ನಿಲ್ದಾಣ ಹಾಗೂ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ  ಶೀಘ್ರದಲ್ಲಿಯೇ ನವದೆಹಲಿಗೆ ತೆರಳಿ ಕೇಂದ್ರ ಸಚಿವ ಭೂಪೇಂದ್ರ ಯಾದವ ಅವರನ್ನು ಭೇಟಿ ಮಾಡಿ ಚರ್ಚಿಸಿ ಶೀಘ್ರ ಅನುಮತಿಯನ್ನು ಸಹ ಪಡೆದುಕೊಳ್ಳಲಾಗುವುದು: ಗೋವಿಂದ ಕಾರಜೋಳ 

Complete the Work of Vijayapura Airport by February 15th Says Govind Karjol grg
Author
First Published Dec 11, 2022, 11:30 PM IST

ವಿಜಯಪುರ(ಡಿ.11):  ಫೆ.15ರೊಳಗೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ನಗರ ಹೊರ ವಲಯದ ಬುರಣಾಪುರ ಬಳಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ವಿಮಾನ ನಿಲ್ದಾಣ ಹಾಗೂ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ  ಶೀಘ್ರದಲ್ಲಿಯೇ ನವದೆಹಲಿಗೆ ತೆರಳಿ ಕೇಂದ್ರ ಸಚಿವ ಭೂಪೇಂದ್ರ ಯಾದವ ಅವರನ್ನು ಭೇಟಿ ಮಾಡಿ ಚರ್ಚಿಸಿ ಶೀಘ್ರ ಅನುಮತಿಯನ್ನು ಸಹ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ಯಾಸೆಂಜರ್‌ ಟರ್ಮಿನಲ್‌ ಬಿಲ್ಡಿಂಗ್‌, ಇ.ಟಿ.ಸಿ. ಬಿಲ್ಡಿಂಗ್‌, ಬೌಂಡ್ರಿ ವಾಲ್ಸ್‌ ಸೇರಿದಂತೆ ರನ್‌ವೇ ಕಾಮಗಾರಿಗಳನ್ನು ವೀಕ್ಷಿಸಿದ ಸಚಿವರು ಸರ್ವೇ ಪೋಲ್‌ನ್ನು ವೀಕ್ಷಿಸಿ ಕಾಮಗಾರಿಯನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿದರು.
ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನ ನೀಡಲಾಗಿದೆ, ಜಮೀನು ಸಮತಟ್ಟು ಮಾಡುವ ಕಾರ್ಯ ಕೈಗೊಳ್ಳುವ ಉದ್ದೇಶದಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ, ಆದರೂ ವೇಗದಿಂಧ ಕಾಮಗಾರಿ ಕೈಗೊಂಡು ಬರುವ ಫೆಬ್ರವರಿ 15ರೊಳಗೆ ಕಾಮಗಾರಿ ಸಂಪೂರ್ಣಗೊಂಡು ವಿಮಾನಗಳು ಹಾರಾಟ ನಡೆಸಲಿವೆ ಎಂದು ಹೇಳಿದರು.

ವಿಮಾನ ನಿಲ್ದಾಣ ಕಾಮಗಾರಿ ಮಾರ್ಚ್‌ಗೆ ಪೂರ್ಣ; ಸಂಸದ ರಮೇಶ ಜಿಗಜಿಣಗಿ

ವಿಮಾನ ನಿಲ್ದಾಣ ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ 727 ಎಕರೆ ಜಮೀನನ್ನು ಡಿನೋಟಿಫಿಕೇಶನ್‌ ಮಾಡಲಾಗಿದೆ. ವಿಜಯಪುರ ತಾಲೂಕಿನ ಬುರಣಾಪುರ-ಮದಭಾವಿ ಜಿಲ್ಲಾ ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣದ ಕೂಡುವ ರಸ್ತೆಗೆ . 4.95 ಕೋಟಿ ಲೋಕೋಪಯೋಗಿ ಇಲಾಖೆಯಿಂದ, ಇನ್ನೂ ಎರಡು ರಸ್ತೆಗಳಾದ ಮದಬಾವಿ ಲಂಬಾಣಿ ತಾಂಡಾದಿಂದ ದೊಡ್ಡಿ ದ್ಯಾಬೇರಿಯವರೆಗೆ ಪರಿಶಿಷ್ಟಜಾತಿ ಕಾಲನಿಗೆ ಕೂಡುವ ರಸ್ತೆ 4.50 ಕೋಟಿಗಳಲ್ಲಿ, ಮತ್ತು ಬುರಣಾಪುರ ಎಸ್‌.ಸಿ. ಕಾಲೋನಿಯಿಂದ ಅಲಿಯಾಬಾದ ಎಸ್‌.ಸಿ. ಕಾಲೋನಿಯವರೆಗೆ ಹೋಗುವ ರಸ್ತೆ, ವಿಮಾನ ನಿಲ್ದಾಣದ ಸುತ್ತಮುತ್ತ ಯಾವುದೇ ಅಡೆತಡೆ ಉಂಟಾಗಬಾರದು ಎಂಬ ದೃಷ್ಟಿಯಿಂದ ರಸ್ತೆ ನಿರ್ಮಾಣಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಕೂಡ 9.50 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಲಾಗಿದ್ದು, ಕೂಡಲೇ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್‌-72 ದಿಂದ ಏರ್‌ಬಸ್‌ 320 ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಸಹ ಭರದಿಂದ ಸಾಗಿದ್ದು, ಒಟ್ಟು 347.92 ಕೋಟಿಗಳ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಗಾಗಿ 222.92 ಕೋಟಿಗಳು ಹಾಗೂ ಎರಡನೇ ಹಂತದ ಕಾಮಗಾರಿಗೆ 125 ಕೊಟಿಗಳನ್ನು ನಿಗದಿಪಡಿಸಲಾಗಿದ್ದು, ಎಟಿಆರ್‌-72 ವಿಮಾನಗಳ ಹಾರಾಟಕ್ಕಾಗಿ 95 ಕೋಟಿ ಹಾಗೂ ಏರ್‌ಬಸ್‌-320 ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸಿರುವುದರಿಂದ ಹೆಚ್ಚುವರಿಯಾಗಿ 127.92 ಕೋಟಿಗಳ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಹೇಳಿದರು.

ಮೊದಲನೇ ಹಂತದಲ್ಲಿ 222.92 ಕೋಟಿಗಳಲ್ಲಿ ರನ್‌ವೇ, ಟ್ಯಾಕ್ಸಿ ವೇ, ಎಪ್ರಾನ್‌, ಇಸೋಲೇಶನ್‌ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಪೆರಿಪೆರಲ್‌ ರಸ್ತೆಗಳು ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ದಿಪಡಿಸಲಾಗುತ್ತಿದೆ. ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ, ಟರ್ಮಿನಲ್‌ ಬಿಲ್ಡಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಕಲ್ಯಾಣ ಕ್ರಾಂತಿ ಮಾಡದೇ ಜನರಿಗೆ ಕಾಂಗ್ರೆಸ್‌ ಮೋಸ: ಸಚಿವ ಗೋವಿಂದ ಕಾರಜೋಳ

ನಿಸರ್ಗ ಸಂಪತ್ತಿನಿಂದ ಕೂಡಿರುವ ವಿಜಯಪುರ ಜಿಲ್ಲೆಯಲ್ಲಿ ಸಂಪನ್ಮೂಲ, ಹವಾಮಾನ, ನೀರು ಹೀಗೆ ಎಲ್ಲ ರೀತಿಯ ವ್ಯವಸ್ಥೆ ಇದೆ. ವಿಮಾನ ನಿಲ್ದಾಣ ಸ್ಥಾಪನೆಯಿಂದಾಗಿ ಉದ್ಯಮಪತಿಗಳು ಬೇರೆ-ಬೇರೆ ಸ್ಥಳಗಳಿಂದ ಕೆಲವೇ ಗಂಟೆಗಳಲ್ಲಿ ವಿಜಯಪುರ ತಲುಪಲು ಸಾಧ್ಯವಾಗುತ್ತದೆ, ಹೀಗಾಗಿ ಈ ನಿಲ್ದಾಣ ಸ್ಥಾಪನೆಯಿಂದ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ದೊರಕಿ ಉದ್ಯೋಗ ಸೃಜನೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ವಿಜಯಪುರ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಮೊದಲಾದ ಬೆಳೆಗಳಿಗೆ ಹೆಸರುವಾಸಿ, ಈ ಎಲ್ಲ ಬೆಳೆಗಳನ್ನು ರಫ್ತು ಮಾಡಲು ಹಾಗೂ ವಿಶ್ವದ ಶ್ರೇಷ್ಠ ಸ್ಮಾರಕಗಳನ್ನು ಸಂದರ್ಶಿಸಲು ಪ್ರವಾಸಿಗರಿಗೆ ವಿಮಾನ ನಿಲ್ದಾಣ ಅನುಕೂಲವಾಗಲಿದ್ದು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಲೋಕೋಪಯೋಗಿ ಇಲಾಖೆ ಕಾರ್ಯ ನಿವಾಹಕ ಅಭಿಯಂತರ ರಾಜು ಮುಜುಂದಾರ, ಸಹಾಯಕ ಅಭಿಯಂತರ ರೇವಣ್ಣ ಮಸಳಿ, ಗುತ್ತಿಗೆದಾರ ಸಿ.ಬಿ.ಆಲೂರ, ಪ್ಯಾಕೇಜ್‌-2 ಪ್ರಾಜೆಕ್ಟ್ ಮ್ಯಾನೇಜರ್‌ ಸರವಣನ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios