ಚತುಷ್ಪಥ ನಿರ್ಮಾಣ : ಮಾ.5ರೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸಿಂಹ ಸೂಚನೆ
ಮೈಸೂರು- ಕುಶಾಲನಗರ ಚತುಷ್ಪಥ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಚ್‌ರ್ ಮೊದಲ ಅಥವಾ ಎರಡನೇ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದು, ಆದಷ್ಟುಬೇಗ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು : ಮೈಸೂರು- ಕುಶಾಲನಗರ ಚತುಷ್ಪಥ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದು, ಆದಷ್ಟುಬೇಗ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು- ಬೆಂಗಳೂರು ದಶಪಥ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಧಾನಿ ಉದ್ಘಾಟಿಸುವರು. ಅದೇ ವೇಳೆ ಮೈಸೂರು- ಕುಶಾಲನಗರ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆ ಇದೆ ಎಂದರು.
20ಕ್ಕೆ ಟೆಂಡರ್ ಆರಂಭ:
ಮೈಸೂರು- ಕುಶಾಲನಗರವರೆಗಿನ (ಎನ್‌ಎಚ್- 275) 92 ಕಿ.ಮೀ. ಉದ್ದದ ನಾಲ್ಕು ಪಥವನ್ನು . 3,529 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. . 2,416 ಕೋಟಿಯನ್ನು ಕಾಮಗಾರಿ ನಿರ್ವಹಣೆಗೆ ಮತ್ತು . 1113 ಕೋಟಿಯನ್ನು ಭೂ ಸ್ವಾಧೀನಕ್ಕೆ ನಿಗದಿಪಡಿಸಲಾಗಿದೆ. ಫೆ. 20 ರಂದು ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಈ ಸಂಬಂಧ ಒಂದೂವರೆ ವರ್ಷದಿಂದ ನಿರಂತರವಾಗಿ ಸಭೆ ನಡೆಸಲಾಗಿದೆ. ಮಾ. 5 ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸುವಂತೆ ಕೋರುವ ಜೊತೆಗೆ ಸೂಚನೆಯನ್ನೂ ನೀಡುತ್ತಿದ್ದೇನೆ ಎಂದು ಪ್ರತಾಪ ಸಿಂಹ ತಿಳಿಸಿದರು.
ಮೈಸೂರು, ಹುಣಸೂರು, ತಾಲೂಕು ತಹಸಿಲ್ದಾರ್‌ಗಳು ಸಭೆಯಲ್ಲಿ ಹಾಜರಿದ್ದು, ಭೂ ಸ್ವಾಧೀನಕ್ಕೆ ಇರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಲಹೆ ಪಡೆದರು. ಹುಣಸೂರು ತಾಲೂಕಿನಲ್ಲಿರು ರಾಜ್ಯ ಅರಣ್ಯ ಪ್ರದೇಶಕ್ಕೆ ಗುರುವಾರ ಭೇಟಿ ನೀಡುವುದಾಗಿ ತಿಳಿಸಿದರು. ಗೋಮಾಳದಲ್ಲಿ ರೈತರು (ಹಂಗಾಮಿ ಸಾಗುವಳಿ ಪತ್ರ) ವ್ಯವಸಾಯ ಮಾಡುತ್ತಿದ್ದರೆ ಪರಿಹಾರವಿಲ್ಲದೇ ತೆರವು ಮಾಡಿಸುವಂತೆ ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್‌ಗೆ ಸೂಚಿಸಿದರು.
ಮೈಸೂರು-ಕುಶಾಲನಗರ ರಸ್ತೆ ಕಾಮಗಾರಿಗೆ ಅನುಕೂಲವಾಗುವಂತೆ ಕ್ವಾರಿ ಗುರುತಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮೀಸಲಿಡಬೇಕು. ಹುಣಸೂರು ತಾಲೂಕಿನಲ್ಲಿ ಖಾಸಗಿ ವ್ಯಕ್ತಿಗೆ ಕ್ವಾರಿ ಕೊಟ್ಟಿರುವುದನ್ನು ಹಿಂಪಡೆಯಬೇಕು ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಸಂಚಾರ ವಿಭಾಗದ ಪೊಲೀಸರು ವರ್ತುಲ ರಸ್ತೆಯ ಒಂದೇ ಸ್ಥಳದಲ್ಲಿ ಅಪಘಾತದಿಂದ ಐದಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದರೆ ಆ ಜಾಗವನ್ನು ಬ್ಲಾಕ್ ಸ್ಪಾಟ್‌ಗೆ ಸೇರಿಸಬೇಕು ಎಂದು ಸಂಸದ ಪ್ರತಾಪಸಿಂಹ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಇದೇ ತಿಂಗಳು ನಡೆಯಲಿರುವ ಸಭೆಗೆ ಅಪಘಾತ ಪ್ರಕರಣಗಳ ಬಗ್ಗೆ ನಿಖರ ಮಾಹಿತಿಯೊಂದಿಗೆ ಹಾಜರಾಗುವಂತೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಡಿಸಿಎಫ್ ಡಾ. ಬಸವರಾಜು, ಉಪ ವಿಭಾಗಾಧಿಕಾರಿ ರಕ್ಷಿತ್ ಮೊದಲಾದವರು ಇದ್ದರು.
-- ಸಮಸ್ಯೆ ಮುಕ್ತವಾಗಿ ಹೇಳಿಕೊಳ್ಳಿ--
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ಯಾವುದಾದರೂ ಸಮಸ್ಯೆಗಳಿದ್ದರೆ ಅದನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಅದನ್ನು ನಾವು ಪರಿಹರಿಸುತ್ತೇವೆ. ಮಾ. 5 ರೊಳಗೆ ನಾವು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕೊಡುತ್ತೇವೆ. ಯಾವ ಪ್ರಕರಣದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲವೋ ಅವುಗಳನ್ನೂ ವಶಕ್ಕೆ ಪಡೆಯಿರಿ. ಅವರು ನ್ಯಾಯಾಲಯಕ್ಕೆ ಹೋದರೆ ಅಲ್ಲಿಂದ ಬರುವ ನಿರ್ದೇಶನದಂತೆ ಮುಂದುವರಿಯೋಣ ಎಂದರು.