ತಾಲೂಕಿನ ಅರಕೆರೆ ಗ್ರಾಮದ ಬಳಿ ಮೈಸೂರು- ಹಾಸನ ರಾಷ್ಟ್ರೀಯ ಹೆದ್ದಾರಿಯ ಚಾಮರಾಜ ಬಲದಂಡೆ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಂಸದೆ ಸುಮಲತಾ ಅಂಬರೀಶ್‌ ಆದೇಶಿಸಿದರು.

ಕೆ.ಆರ್‌. ನಗರ (ಅ.21): ತಾಲೂಕಿನ ಅರಕೆರೆ ಗ್ರಾಮದ ಬಳಿ ಮೈಸೂರು- ಹಾಸನ ರಾಷ್ಟ್ರೀಯ ಹೆದ್ದಾರಿಯ ಚಾಮರಾಜ ಬಲದಂಡೆ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಂಸದೆ ಸುಮಲತಾ ಅಂಬರೀಶ್‌ ಆದೇಶಿಸಿದರು.

ಕೇಂದ್ರ ಸರ್ಕಾರದ ಎಫ್‌ಎಸ್‌ಡಿ (FDS) ಅನುದಾನದಡಿ . 1. 80 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಮತ್ತು ಈವರೆಗೆ ಆಗಿರುವ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ತನಗೆ ನೀಡಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ (Central Govt) ಅನುದಾನದಡಿ ಸೇತುವೆ ನಿರ್ಮಾಣ ಮಾಡುತ್ತಿದ್ದರೂ ಕಾಮಗಾರಿ ಆರಂಭಿಸುವಾಗ ನನ್ನ ಗಮನಕ್ಕೆ ತಂದಿಲ್ಲ ಹಾಗೂ ಪರಿಶೀಲನೆಗೆ ಬಂದಾಗಲೂ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ನಾನು ಕಾಮಗಾರಿ ಪರಿಶೀಲಿಸಲು ಮತ್ತು ಸಾರ್ವಜನಿಕರಿಗೆ ಸಮಸ್ಯೆ ಆಲಿಸಲು ಬಂದಾಗ ಶಿಷ್ಟಾಚಾರ ಪಾಲಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್‌, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾರ್ಕಂಡೇಯ ಸ್ವಾಮಿ, ಖಜಾಂಚಿ ಎ.ಜೆ. ನಂಜೇಶ್‌, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಹೊಸೂರು ಧರ್ಮ, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎನ್‌. ಪ್ರಸನ್ನಕುಮಾರ್‌, ಕಾಂಗ್ರೆಸ್‌ ಮುಖಂಡ ಮಹೇಶ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಇತರ ಮುಖಂಡರು ಇದ್ದರು.

ಬಿಗಿ ಭದ್ರತೆ:

ಕಳೆದ 6 ತಿಂಗಳ ಹಿಂದೆ ಸಂಸದರು ಕೆ.ಆರ್‌.ನಗರ ತಾಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದಾಗ ಜೆಡಿಎಸ್‌ ಕಾರ್ಯಕರ್ತರು ಮತ್ತು ಸುಮಲತಾ ಅವರ ಬೆಂಬಲಿಗರ ನಡುವೆ ವಾಗ್ವಾದ ನಡೆದು ನೂಕಾಟ ತಳ್ಳಾಟ ನಡೆದಿದ್ದರಿಂದ ಗುರುವಾರ ಸಾಲಿಗ್ರಾಮ ಪೊಲೀಸ್‌ ಇನ್‌ಸ್ಪೆಕ್ಟರ್‌ ಆರ್‌. ಶ್ರೀಕಾಂತ್‌ ನೇತೃತ್ವದಲ್ಲಿ ಸಂಸದರಿಗೆ ಭಾರಿ ಭದ್ರತೆ ಒದಗಿಸಲಾಗಿತು.

ಸುಮಲತಾ ಪಂಥಾಹ್ವಾನ : 

ಕಾಮಗಾರಿಯಲ್ಲಿ ಕಮೀಷನ್‌ ಪಡೆದಿದ್ದಾರೆಂಬ ಜೆಡಿಎಸ್‌ ಆರೋಪಕ್ಕೆ ತಿರುಗೇಟು ನೀಡಿರುವ ಸಂಸದೆ ಸುಮಲತಾ, ಜೆಡಿಎಸ್‌ ಶಾಸಕರಿಗೆ ಆಣೆ ಪ್ರಮಾಣಕ್ಕೆ ಪಂಥಾಹ್ವಾನ ನೀಡಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಂಸದೆ ಸುಮಲತಾ ಮತ್ತು ಬೆಂಬಲಿಗರು ಕಮಿಷನ್‌ ಪಡೆದಿದ್ದಾರೆ ಎಂಬ ಆರೋಪಕ್ಕೆ ಆಣೆ, ಪ್ರಮಾಣ ಮಾಡಲು ನಾನು ಸಿದ್ಧ ಎಂದು ಘೋಷಿಸಿದರು.

ನಾನೇನು ಪ್ರಮಾಣ ಮಾಡುವುದಾಗಿ ಕರೆದಿರಲಿಲ್ಲ. ಅವರೆ, ಕರೆದಿದ್ದರು. ನಾನು ಯಾವಾಗಲೂ ಸಿದ್ದಳಾಗಿದ್ದೇನೆ. ಅವರೇ ಸೇರಿಸಲಿ, ಶಾಸಕರು ಯಾರ್ಯಾರಿದ್ದಾರೋ ಎಲ್ಲರೂ ಬರಲಿ. ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಶಾಸಕರಾದ ಸಿ.ಎಸ್‌. ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ಸವಾಲು ಹಾಕಿದರು.

Mandya: ರಾಜಧನ ವಸೂಲಿ ಪರಿಣಾಮಕಾರಿಯಾಗಿಲ್ಲ: ಸಂಸದೆ ಸುಮಲತಾ

ಸೋಲುವುದೇ ಆದರೆ, ಏನು ಮಾಡಲು ಸಾಧ್ಯ?:

ಚುನಾವಣೆಗಳಲ್ಲಿ ಸೋತು ಸೋತು ಕೊನೆಗೊಮ್ಮೆ ಗೆದ್ದು ಬಂದಿದ್ದಾರೆ. ಇದೇ ಕೊನೆ ಎಂದು ತೀರ್ಮಾನಕ್ಕೆ ಬಂದಿರುವಾಗ ಯಾರು ಏನು ಮಾಡಲು ಸಾಧ್ಯ. ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಅದು ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಯಾರು ಏನು ಬೇಕಾದರೂ ಹೇಳಬಹುದು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಏನು ಮಾಡಿದ್ದಾರೆಂಬುದನ್ನು ಸಾಬೀತು ಪಡಿಸಲಿ:

ಭಾವನೆಗಳಲ್ಲಿ ಅಹಂಕಾರ ತುಂಬಿಕೊಂಡಿರುತ್ತೋ ಅಲ್ಲಿ ಇಂತಹ ಮಾತುಗಳು ಬರುತ್ತವೆ. ಅಲ್ಲಿ ವಿವೇಚನೆ ದೂರವಾಗಿರುತ್ತದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಜನರಿಗೆ ಗೊತ್ತಾಗಿದೆ. ನಾನು ಸಂಸದೆಯಾಗಿ ಅಧಿಕಾರಕ್ಕೆ ಬರುವ ಮುನ್ನ ಅವರು ಶಾಸಕರಾಗಿದ್ದರು. ಅವರದ್ದೇ ಸರ್ಕಾರ ಅಧಿಕಾರದಲ್ಲಿತ್ತು. ಅವರ ತಾಲೂಕಿನಲ್ಲಿ ಏನೇನು ಲೋಪದೋಷಗಳು, ಸಮಸ್ಯೆಗಳು ಇವೆ. ಅದಕ್ಕೆಲ್ಲಾ ಉತ್ತರ ಇಲ್ಲ. ಯಾವ್ಯಾವ ಯೋಜನೆಗಳನ್ನು ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಜಿಲ್ಲೆಯ ಅಭಿವೃದ್ಧಿಯನ್ನು ಹೇಗೆ ಮಾಡಿದ್ದಾರೆ ಎಂಬುದರ ಬಗ್ಗೆ ದಾಖಲೆ ಕೊಡಿ, ಆಡಳಿತ ಪಕ್ಷದಲ್ಲಿದ್ದವರು ನೀವು. ನಾನು ಯಾವ ಪಕ್ಷದಲ್ಲೂ ಇಲ್ಲ. ಪಕ್ಷೇತರ ಸಂಸದೆಯಾಗಿದ್ದೇನೆ. ಆದರೂ ನಾನೇನು ಈ ಜಿಲ್ಲೆಗೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದರ ಬಗ್ಗೆ ಪಟ್ಟಿಕೊಡುತ್ತೇನೆ ಎಂದು ಹೇಳಿದರು. ನಾನು ನನ್ನ ಕೆಲಸದ ಬಗ್ಗೆ ಚಿಂತನೆ ಮಾಡುತ್ತೇನೆಯೇ ಹೊರತು ರಾಜಕಾರಣದ ಬಗ್ಗೆ ಯೋಚನೆ ಮಾಡುವುದಿಲ್ಲ. ನನಗೆ, ನನ್ನ ಮಗನಿಗೆ, ಅಣ್ಣ-ತಮ್ಮನಿಗೆ
ಏನಾಗಬೇಕು ಎಂಬುದರ ಬಗ್ಗೆ ಯೋಚನೆ ಮಾಡಲ್ಲ. ಅಭಿವೃದ್ಧಿ ಪರವಾಗಿ ಚಿಂತನೆ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.