Asianet Suvarna News Asianet Suvarna News

ಶಿರಾದಲ್ಲಿ ಸಂಪೂರ್ಣ ಬೆಳೆ ವಿಫಲ: ಚಿದಾನಂದ್ ಎಂ.ಗೌಡ

ಶಿರಾ ತಾಲೂಕಿನಲ್ಲಿ ರೈತರು ಬಿತ್ತಿದ್ದ ಬೆಳೆ ಸಂಪೂರ್ಣ ವಿಫಲವಾಗಿದ್ದು, ಹೆಚ್ಚಿನ ಬರ ಪರಿಹಾರವನ್ನು ರೈತರಿಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಒತ್ತಾಯಿಸಿದರು.

Complete crop failure in Shira: Chidanand M. Gowda snr
Author
First Published Oct 8, 2023, 7:37 AM IST

  ಶಿರಾ: ಶಿರಾ ತಾಲೂಕಿನಲ್ಲಿ ರೈತರು ಬಿತ್ತಿದ್ದ ಬೆಳೆ ಸಂಪೂರ್ಣ ವಿಫಲವಾಗಿದ್ದು, ಹೆಚ್ಚಿನ ಬರ ಪರಿಹಾರವನ್ನು ರೈತರಿಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಒತ್ತಾಯಿಸಿದರು.

ಗುಳಿಗೇನಹಳ್ಳಿ, ನ್ಯಾಯಗೆರೆ, ಬೋರಸಂದ್ರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಕೇಂದ್ರ ಬರ ಅದ್ಯಯನ ತಂಡ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ರೈತರ ಜೊತೆಗಿದ್ದು, ಸ್ಥಳ ವೀಕ್ಷಣೆಗೆ ಬಂದ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳಿಗೆ ರೈತರು ಅನುಭವಿಸುತ್ತಿರುವ ಕಷ್ಟ ಹಾಗೂ ಬಿತ್ತಿರುವ ಬೆಳೆಗೆ ಆಗಿರುವಾಗ ನಷ್ಟ ಕುರಿತು ಮನವರಿಕೆ ಮಾಡಿದರು.

ಸತತ ಮಳೆ ವೈಫಲ್ಯದಿಂದ ರೈತರು ಸಂಕಷ್ಟದಲ್ಲಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆ ತಾಲೂಕಿನ ಹಲವಾರು ಗ್ರಾಮಗಳ ರೈತರ ಜಮೀನುಗಳಿಗೆ ತಾವೇ ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ. ರೈತರ ವಾಸ್ತವ ಅರಿತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದ್ದರಿಂದ, ಬರ ವರದಿಯನ್ನು ಶೀಘ್ರ ಸಲ್ಲಿಸಿ ಪರಿಹಾರ ಘೋಷಿಸುವುದರ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದರು.

ಕೇಂದ್ರದ ಅಶೋಕ್ ಕುಮಾರ್, ಕಿರಣ್ ಚೌದ್ರಿ, ಕಿರಣ್ ಕುಮಾರ್, ಜಿಲ್ಲಾಧಿಕಾರಿಗಳಾದ ಶ್ರೀನಿವಾಸ್, ಜಿ.ಪಂ. ಸಿಇಓ ಪ್ರಭು, ಉಪ ವಿಭಾಗಧಿಕಾರಿ, ರಿಷಿ ಆನಂದ್, ತಹಸೀಲ್ದಾರ್ ಮುರುಳೀಧರ, ಕೃಷಿ ಅಧಿಕಾರಿಗಳು ಇದ್ದರು.

ಬರಪೀಡಿತ ತಾಲೂಕು ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ

ಕೊರಟಗೆರೆ: ತುಮಕೂರನ್ನು ಬರ ಪೀಡಿತ ಜಿಲ್ಲೆ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕು ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ತಾಲೂಕಿನ ಬೈರೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತು.

ಕೇಂದ್ರದಿಂದ ಆಗಮಿಸಿರುವ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್, ಎಂಎನ್‌ಸಿಎಫ್‌ಸಿಯು ಉಪನಿರ್ದೇಶಕ ಕರಣ್‌ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್‌ಕುಮಾರ್, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀನಿವಾಸರೆಡ್ಡಿ ಅವರನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ. ಸಿಇಒ ಪ್ರಭು ಅವರನ್ನು ಸ್ವಾಗತಿಸಿದರು.

ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್ ನೇತೃತ್ವದ ತಂಡ ತಾಲೂಕಿನಲ್ಲಿ ಬರ ಅಧ್ಯಯನ ನಡೆಸಿತು. ತಂಡವು ಮೊದಲಿಗೆ ಬೈರೇನಹಳ್ಳಿ ಗ್ರಾಮದ ನಾಗೇಂದ್ರಕುಮಾರ್, ರೈತರ ಜಮೀನಿಗೆ ಭೇಟಿ ನೀಡಿ 1.20 ಎಕರೆ ಪ್ರದೇಶದಲ್ಲಿ ಬೆಳೆದ ಶೇಂಗಾ ಬೆಳೆ ಮತ್ತು ಸುತ್ತಲಿನ ರೈತರ ಜಮೀನಿನಲ್ಲಿ ತೊಗರಿ, ಜೋಳ, ರಾಗಿ, ಮುಸುಕಿನ ಜೋಳ ಬೆಳೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ರೈತ ನಾಗೇಂದ್ರಕುಮಾರ್ ಅವರ ಜಮೀನಿನಲ್ಲಿ ನೀರಿಲ್ಲದೆ ಒಣಗಿದ್ದ ಶೇಂಗಾ ಬೆಳೆ ವೀಕ್ಷಿಸಿದರು, ಭಾಗ್ಯಮ್ಮ ಅವರ ಜಮೀನಿನಲ್ಲಿಯೂ ಒಣಗಿದ ಬೆಳೆ ಕಂಡು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಬರ ಅಧ್ಯಯನ ತಂಡವು ಭೇಟಿ ನೀಡಿದ ವೇಳೆ ರೈತ ಸಂಘದ ಅಧ್ಯಕ್ಷ ಸಿದ್ದರಾಜು, ತಾಲೂಕಿನ ರೈತರು ತಮ್ಮ ಅಳಲು ತೋಡಿಕೊಂಡು ಬೆಳೆ ನಷ್ಟ ಪರಿಹಾರ ನೀಡುವಂತೆ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್‌ ಅವರ ಬಳಿ ಮನವಿ ಪತ್ರದ ಸಲ್ಲಿಸಿದರು.

ಕೇಂದ್ರದ ಬರ ಅಧ್ಯಯನದ ಅಧಿಕಾರಿಗಳ ತಂಡ ಭೇಟಿ ನೀಡಿದ ವೇಳೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಿಇಒ ಪ್ರಭು, ತಾ.ಪಂ ಇಒ ದೊಡ್ಡಸಿದ್ದಯ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ಪೋಲಿಸ್ ಇಲಾಖೆಯ ಸಿಪಿಐ ಸುರೇಶ್, ಸಬ್‌ಇನ್ಸ್‌ಪೆಕ್ಟರ್‌ ಚೇತನ್‌ ಕುಮಾರ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬಾಕ್ಸ್ ಸುದ್ದಿ: ಕೇಂದ್ರ ಸರ್ಕಾರ ಎಕರೆಗೆ 7 ಸಾವಿರ ನಿಗಧಿಪಡಿಸದೆ, ಅದನ್ನು 25 ಸಾವಿರ ರು. ಗೆ ಹೆಚ್ಚಿಸಬೇಕೆಂದು ಕೇಂದ್ರದ ಬರ ಅಧ್ಯಯನ ತಂಡದ ಅಧಿಕಾರಿಗಳಲ್ಲಿ ರೈತರೆಲ್ಲರೂ ಮನವಿ ಮಾಡಿಕೊಂಡಿದ್ದೇವೆ, ಸಾಲ ಮಾಡಿ, ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಕೃಷಿ ಮಾಡಿದ್ದಾರೆ, ಆದರೆ, ಈ ಬಾರಿ ಮಳೆಯು ಕೈಕೊಟ್ಟಿದೆ ಆದ್ದರಿಂದ, ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸಿ ರೈತರಿಗೆ ನೆರವಾಗಬೇಕೆಂದು ಮನವಿ ಮಾಡುತ್ತೇವೆ.

-ಸಿದ್ದರಾಜು, ತಾ.ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ

Follow Us:
Download App:
  • android
  • ios