ನಿಗದಿತ ಅವಧಿಯೊಳಗೆ ಗುರಿ ಸಾಧಿಸಿ: ಸಂಸದ ಸೂಚನೆ
- ನಿಗದಿತ ಅವಧಿಯೊಳಗೆ ಗುರಿ ಸಾಧಿಸಿ: ಸಂಸದ ಸೂಚನೆ
- ಜಿಪಂನಲ್ಲಿ ಜಿಲ್ಲಾಮಟ್ಟದ ದಿಶಾ ಸಮಿತಿ ಸಭೆ
- ಪಿಎಂ ಆವಾಸ್ ಯೋಜನೆ ಮನೆ ಕಟ್ಟದವರಿಗೆ ಮತ್ತೊಂದು ಅವಕಾಶ ನೀಡಲು ಸಲಹೆ
ಶಿವಮೊಗ್ಗ (ಅ.19) : ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ, ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಕೇಂದ್ರ ಪುರಸ್ಕೃತ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ಪೂರ್ಣಗೊಳಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಣಕ್ಕಿಂತ ಹೃದಯ ಶ್ರೀಮಂತಿಕೆ ಗಳಿಸುವುದು ಶ್ರೇಷ್ಠ: ಬಿ.ವೈ. ರಾಘವೇಂದ್ರ
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಬಂದಿರುವ ಕಾರಣ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸ್ಮಾರ್ಚ್‌ಸಿಟಿ, ಪಾಲಿಕೆ ಮತ್ತು ಪಿಡಬ್ಲ್ಯುಡಿ ಸಮನ್ವಯ ಸಾಧಿಸಿ ಮುಚ್ಚಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ನಗರದ 5 ಕಡೆ ರೈಲ್ವೆ ಮೇಲ್ಸೆತುವೆ ಕಾಮಗಾರಿ ನಡೆಯುತ್ತಿದ್ದು, ಆ ಭಾಗದ ರಸ್ತೆಗಳಲ್ಲಿ ಗುಂಡಿ ಬಿದ್ದು ಜನ ಓಡಾಡಲು ಪೇಚಾಡುತ್ತಿದ್ದಾರೆ. ಪಾಲಿಕೆ ಆಯುಕ್ತರು ಈ ಭಾಗಗಳಲ್ಲಿ ಪರಿಶೀಲಿಸಿ, ಗುಂಡಿಗಳನ್ನು ಮುಚ್ಚಿಸಿ, ತಾತ್ಕಾಲಿಕ ನಿರ್ವಹಣೆ ಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು.
ನಗರದ ಉಷಾ ನರ್ಸಿಂಗ್ ಹೋಂ ಬಳಿ ಫ್ಲೈಓವರ್ ಮತ್ತು ಆರ್‌ಒಬಿ ಎರಡೂ ಕೆಲಸ ನಡೆಯುತ್ತಿವೆ. ಜನರಿಗೆ ತೊಂದರೆ ಆಗದಂತೆ ಒಂದೆಡೆ ಕ್ಲಿಯರೆನ್ಸ್ ನೀಡಿ ದ್ವಿಚಕ್ರ, ನಾಲ್ಕು ಚಕ್ರ ವಾಹನ ಓಡಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿ ಮನೆ ಕಟ್ಟದವರನ್ನು ಸಹ ಮನೆ ಆರಂಭಿಸದೇ ಇರುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಮನೆ ಕಟ್ಟದವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಮನೆ ಕಟ್ಟಲು ಇನ್ನೊಂದು ಅವಕಾಶ ನೀಡಬೇಕು. ಮನೆ ಕಟ್ಟದೇ ಹೋದಲ್ಲಿ ಅವರ ಹೆಸರನ್ನು ಕೈ ಬಿಡಬೇಕು. ಯಾಕೆಂದರೆ ಅವರ ಆಧಾರ್ ಲಿಂಕ್ ಆದ ಕಾರಣ ಅವರು ಬೇರೆ ಸೌಲಭ್ಯ ಪಡೆಯಲು ಸಹ ಅನಾನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ ಮಿಷನ್ ಯೋಜನೆ ಸಮರ್ಪಕವಾಗಿ ನಿರ್ವಹಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆ ಇರುವೆಡೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಹೊಳೆಬೆನವಳ್ಳಿ ಮತ್ತು ಬುಳ್ಳಾಪುರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿನ ಸಮಸ್ಯೆ ಕುರಿತು ಸಮಿತಿ ಸದಸ್ಯರು ತಿಳಿಸಿದ್ದಾರೆ. ಅಲ್ಲಿ ಆಗುತ್ತಿರುವ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳು ಅರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಶಾಸಕ ಕೆ.ಬಿ.ಅಶೋಕ್ ನಾಯ್‌್ಕ ಮಾತನಾಡಿ, ಉಷಾ ನರ್ಸಿಂಗ್ ಬಳಿ ನಡೆಯುತ್ತಿರುವ ಕಾಮಗಾರಿಯಿಂದ ಜನರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕು. ಹಾಗೂ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಬೇಕು ಎಂದು ತಿಳಿಸಿದರು.
.313 ಕೋಟಿ ವೆಚ್ಚದಲ್ಲಿ ಹೊಸನಗರ- ಮಾವಿನಕೊಪ್ಪ ಸಂಪರ್ಕಿಸುವ ನೇರ ರಸ್ತೆ ಯೋಜನೆಗೆ ಮಂಜೂರಾತಿ ನೀಡಿದ್ದು, ಈ ಯೋಜನೆ ಪೂರ್ಣಗೊಂಡ ನಂತರ ಹೊಸನಗರದಿಂದ ಕೊಲ್ಲೂರಿಗೆ ಕಡಿಮೆ ಅವಧಿಯಲ್ಲಿ ಪ್ರಯಾಣಿಸಬಹುದು. ಹೊಳೆಹೊನ್ನೂರಿನಿಂದ ಶಿವಮೊಗ್ಗ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಚಿತವಾಗಿ ಗ್ರಾಮೀಣ ಭಾಗಕ್ಕೆ ಇಂಟರ್‌ನೆಟ್ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರದ ಸುವರ್ಣ ಅವಕಾಶ ಅಂತರ್ಜಾಲ ಯೋಜನೆಯಡಿ ದೇಶದಲ್ಲಿ 4 ರಾಜ್ಯಗಳ ತಲಾ ಒಂದು ತಾಲೂಕುಗಳು ಆಯ್ಕೆಯಾಗಿವೆ. ಅದರಲ್ಲಿ ಮೊದಲನೆಯದಾಗಿ ಜಿಲ್ಲೆಯ ಸಾಗರ ತಾಲೂಕು ಆಯ್ಕೆ ಆಗಿರುವುದು ಸಂತಸದ ವಿಚಾರವಾಗಿದೆ. ಸಾಗರ ತಾಲೂಕಿನ ಪ್ರತಿ ಗ್ರಾಪಂಗಳ ವ್ಯಾಪ್ತಿಯಲ್ಲಿ 2000 ಸಂಪರ್ಕ ನೀಡುವ ಗುರಿ ಇದೆ. ಬೇಡಿಕೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. ಈ ಯೋಜನೆಯಡಿ ಉಚಿತ ಸಂಪರ್ಕ ಮತ್ತು ಮೋಡೆಮ್ ಸಹ ನೀಡಲಾಗುವುದು. ಮೊದಲ ಎರಡೂವರೆ ತಿಂಗಳು ಪ್ರತಿ ತಿಂಗಳಿಗೆ 110ರು. ಶುಲ್ಕ ವಿಧಿಸಲಾಗುತ್ತದೆ. ಇದೊಂದು ಅತ್ಯುತ್ತಮ ಯೋಜನೆಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ದಿಶಾ ಸಮಿತಿ ಸದಸ್ಯರಾದ ಷಣ್ಮುಖಪ್ಪ, ಸುರೇಶ್, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 30 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ಇದುವರೆಗೆ 21,63,672 ಮಾನವ ದಿನಗಳನ್ನು ಪೂರೈಸಿ ಶೇ72.12 ಭೌತಿಕ ಮತ್ತು ಶೇ.55.05 ಆರ್ಥಿಕ ಗುರಿ ಸಾಧಿಸಲಾಗಿದೆ
- ನಂದಿನಿ, ಯೋಜನಾ ನಿರ್ದೇಶಕಿ, ಜಿಪಂ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಯೋಜನೆಯಡಿ ಶೇ.99.95 ಪ್ರಗತಿ ಸಾಧಿಸಲಾಗಿದೆ. ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಮುಂಗಾರು ಹಂಗಾಮಿಗೆ 19859 ಅರ್ಜಿ ಸ್ವೀಕರಿಸಿ, 9841 ರೈತರ ಖಾತೆಗೆ ಕ್ಲೈಂ ಮೊತ್ತ ಜಮೆಯಾಗಿದ್ದು, ಒಟ್ಟು 691.07 ಲಕ್ಷ ಮೊತ್ತ ಜಮೆಯಾಗಿದೆ. ಹಿಂಗಾರು/ ಬೇಸಿಗೆ ಹಂಗಾಮಿಗೆ 374 ಅರ್ಜಿಗಳನ್ನು ಸ್ವೀಕರಿಸಲಾಗಿದೆ
- ಪೂರ್ಣಿಮಾ, ಕೃಷಿ ಜಂಟಿ ನಿರ್ದೇಶಕಿ
Shivamogga: 5 ಕೋಟಿ ವೆಚ್ಚದಲ್ಲಿ ಫ್ರೀಡಂ ಪಾರ್ಕ್ ಅಭಿವೃದ್ಧಿ: ಸಂಸದ ರಾಘವೇಂದ್ರ ಭರವಸೆ
‘ರಸಗೊಬ್ಬರ ಅವ್ಯವಸ್ಥೆ ತಡೆಗೆ ಗಮನಹರಿಸಿ’
ರೈತರು ಕೇಳಿದ ರಸಗೊಬ್ಬರದ ಜೊತೆ ಇತರೆ ರಾಸಾಯನಿಕ, ಗೊಬ್ಬರಗಳನ್ನು ಹೆಚ್ಚುವರಿಯಾಗಿ ಅಂಗಡಿಯವರು ನೀಡುತ್ತಿದ್ದು, ಇದರಿಂದ ರೈತರಿಗೆ ಹೊರೆಯಾಗುತ್ತಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ. ಕೃಷಿ ಜಂಟಿ ನಿರ್ದೇಶಕರು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಬೆಳೆ ಸಮೀಕ್ಷೆಯನ್ನು ತ್ವರಿತಗೊಳಿಸಿ, ಬೆಳೆ ವಿಮೆಯ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.
ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ, ಅಮೃತ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸ್ಮಾರ್ಚ್‌ಸಿಟಿ ಮಿಷನ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ, ಸರ್ವಶಿಕ್ಷ ಅಭಿಯಾನ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸೇರಿದಂತೆ ಎಲ್ಲ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ, ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು. ಕೇಂದ್ರ ಸರ್ಕಾರದಿಂದ ಇಲಾಖೆಗಳಿಗೆ ಯೋಜನೆಗಳ ಕುರಿತು ಬರುವ ಮಾಹಿತಿಯನ್ನು ತಮ್ಮ ಗಮನಕ್ಕೆ ತಂದು ಚರ್ಚಿಸುವಂತೆ ತಿಳಿಸಿದರು.