ವಿಜಯಪುರ(ಡಿ.27): ಖೊಟ್ಟಿ ದಾಖಲೆ ಸೃಷ್ಠಿಸಿದ ಆರೋಪದ ಮೇಲೆ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ವಿರುದ್ಧ ದೂರು ದಾಖಲಾಗಿದೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಬೆಂಬಲಿಗರಾದ ಎಂ‌ ಆರ್ ಪಾಟೀಲ್ ಹಾಗೂ ಜೆಟ್ಟೆಪ್ಪ ರವಳಿ ವಿರುದ್ಧ ಇಂಡಿ‌ ಮಾಜಿ‌ ಶಾಸಕ ಡಾ. ಸಾರ್ವಭೌಮ‌ ಬಗಲಿ ಅವರ ಪುತ್ರ ಸಂಕೇತ ಬಗಲಿ ಅವರು ದೂರು ದಾಖಲಿಸಿದ್ದಾರೆ. 

ಏನಿದು ಪ್ರಕರಣ ? 

ಹತ್ತು ತಿಂಗಳ‌ ಹಿಂದೆ ನಡೆದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ನಡೆದ ಗೋಲ್‌ಮಾಲ್‌ ನಡೆದಿದೆ ಎಂದು ಸಂಕೇತ ಬಗಲಿ ಆರೋಪ ಮಾಡಿದ್ದಾರೆ.ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ಮಾಡುವಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಅವರ ಬೆಂಬಲಿಗರು ಸಂತೋಷ ಬಗಲಿ ಎಂಬ ಹೆಸರಲ್ಲಿ ಫೋರ್ಜರಿ ಸಹಿ ‌ಮಾಡಿದ್ದರು.  

2019 ರ ಫೆಬ್ರುವರಿ 24ರಂದು ಚುನಾವಣೆ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಕೆ ದಿನವಾದ ಫೆಬ್ರುವರಿ 18 ರಂದು ಅವಿರೋಧ ಆಯ್ಕೆ ಘೋಷಿಸಬೇಕಿತ್ತು. ಅದರ ಬದಲಾಗಿ ಫೆಬ್ರುವರಿ 19ರಂದು ಅವಿರೋಧ ಆಯ್ಕೆ ಘೋಷಣೆ ಆಗಿತ್ತು. ಎದುರಾಳಿ ಪೆನಲ್‌ನ ಸಂಕೇತ ಬಗಲಿ ಎಂಬುವರು ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರ ವಾಪಸ್ ಪಡೆಯದೇ ಇದ್ದರೂ ಸಹ ಅವರ ಸೂಚಕ ಸಂತೋಷ ಬಗಲಿ ಹೆಸರಲ್ಲಿ ಫೋರ್ಜರಿ ಸಹಿ‌ಮಾಡಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಸಂಕೇತ ಬಗಲಿ ಆರೋಪಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಬೆಂಬಲಿಗರು ನಾಮಪತ್ರ ವಾಪಸ್ ಪಡೆಯುವಂತೆ ಸಂತೋಷ ಬಗಲಿ ಅವರಿಗೆ ಒತ್ತಡ ಹಾಕಿದ್ದರು. ನಾಮಪತ್ರ ವಾಪಸ್ ಪಡೆಯದ ಕಾರಣ ಸೂಚಕರ ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಸಂಕೇತ ಬಗಲಿ ಆರೋಪಿಸಿದ್ದಾರೆ. ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.