Asianet Suvarna News Asianet Suvarna News

ಸುಳ್ಳು ಜಾತಿ ಪ್ರಮಾಣ ಪತ್ರ : ಬಿಜೆಪಿ ಅಭ್ಯರ್ಥಿ ವಿರುದ್ಧ ದೂರು

ಬಿಜೆಪಿ ಅಭ್ಯರ್ಥಿ ವಿರುದ್ಧ ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಆರೋಪದಡಿ ದೂರು ದಾಖಲಾಗಿದೆ. 

Complaint Against Hassan Town Municipality Election BJP Candidate snr
Author
Bengaluru, First Published Oct 30, 2020, 3:15 PM IST

 ಹಾಸನ (ಅ.30):  ತೀವ್ರ ಗೊಂದಲ ಸೃಷ್ಟಿಸಿದ್ದ ನಗರಸಭೆ ಅಧ್ಯಕ್ಷೀಯ ಚುನಾವಣೆ ಗುರುವಾರ ನಡೆದಿದೆ. ಆದರೆ ಫಲಿತಾಂಶವನ್ನು ಅನಿರ್ದಿಷ್ಟಾವಧಿ​ ಕಾಲಕ್ಕೆ ತಡೆಹಿಡಿಯಲಾಗಿದೆ!

ಅಧ್ಯಕ್ಷ ಸ್ಥಾನದ ಏಕೈಕ ಅಭ್ಯರ್ಥಿ ಬಿಜೆಪಿಯ ಆರ್‌.ಮೋಹನ್‌ ಅವರ ಮೇಲೆ ಜೆಡಿಎಸ್‌ ಸುಳ್ಳು ಜಾತಿ ಪ್ರಮಾಣಪತ್ರ ನೀಡಿರುವ ಸಂಬಂಧ ಚುನಾವಣಾಧಿಕಾರಿಯೂ ಆದ ಎಸಿ ಜಗದೀಶ್‌ ಅವರಿಗೆ ದೂರು ನೀಡಿದೆ. ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನದ ಆಯ್ಕೆಯನ್ನು ತಡೆ ಹಿಡಿಯುವಂತೆ ಚುನಾವಣಾ ಅಧಿಕಾರಿ ಜಗದೀಶ್‌ ವಿರುದ್ಧ ಜೆಡಿಎಸ್‌ ಬೆಂಬಲಿತ ನಗರಸಭೆ ಸದಸ್ಯರು ಧರಣಿ ಮಾಡಿ ಮಾತಿನ ಚಕಮಕಿ ನಡೆಸಿದರು. ಹಾಸನ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಚುನಾವಣಾ ಪ್ರಕ್ರಿಯೆ ನಡೆಯಿತು.

ಗುರುವಾರ ಬೆಳಗ್ಗೆ 11 ಗಂಟೆಯವರೆಗೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅಧ್ಯಕ್ಷೀಯ ಮೀಸಲಾತಿ ಪ್ರಕಾರ ಬಿಜೆಪಿ ಬೆಂಬಲಿತ 34ನೇ ವಾರ್ಡಿನ ನಗರಸಭೆ ಸದಸ್ಯ ಆರ್‌.ಮೋಹನ್‌ ಮಾತ್ರ ಅರ್ಹರಾಗಿದ್ದು, ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 1 ಗಂಟೆ ವೇಳೆಗೆ ಸದಸ್ಯರ ಜೊತೆ ಚುನಾವಣಾಧಿಕಾರಿ ಜಗದೀಶ್‌ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು. ಈ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಹಾಗೂ ವಕೀಲರಾದ ಎಸ್‌.ದ್ಯಾವೇಗೌಡ ಮತ್ತು ಶ್ರೀಕಾಂತ್‌ ಇತರರು ಬಿಜೆಪಿ ಬೆಂಬಲಿತ 34ನೇ ವಾರ್ಡಿನ ನಗರಸಭೆ ಸದಸ್ಯ ಆರ್‌. ಮೋಹನ್‌ ನಕಲಿ ಜಾತಿಪ್ರಮಾಣ ಪತ್ರ ಸೃಷ್ಟಿಸಿದ್ದಾರೆ. ಹಾಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಮನವಿ ಮಾಡಿದರು.

'ಸಿದ್ದರಾಮಯ್ಯ, ದೇವೇಗೌಡ್ರೇ ಪ್ರಚಾರಕ್ಕೆ ಹೋದ್ಮೇಲೆ ನಾನು ಹೋಗದಿದ್ರೆ ತಪ್ಪಾಗುತ್ತೆ' ...

ಒಂದೇ ನಾಮಪತ್ರ:  ಚುನಾವಣಾ ಆಯೋಗ ಘೋಷಿಸಿದ ಪ್ರಕಾರ 34ನೇ ವಾರ್ಡ್‌ನ ಮೋಹನ್‌ ಮಾತ್ರ ನಾಮಪತ್ರ ಸಲ್ಲಿಸಲು ಅರ್ಹರಾಗಿದ್ದರಿಂದ ಮೋಹನ್‌ 2 ಜತೆ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರಗಳ ಪರಿಶೀಲನೆ ನಂತರ ಚುನಾವಣಾಧಿಕಾರಿ ಜಗದೀಶ್‌ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ 34ನೇ ವಾರ್ಡಿನ ನಗರಸಭೆ ಸದಸ್ಯ ಆರ್‌.ಮೋಹನ್‌ ಎರಡು ನಾಮಪತ್ರವನ್ನು ಸಲ್ಲಿಸಿದ್ದು, ಎರಡು ನಾಮಪತ್ರಗಳು ಕೂಡ ಸಮರ್ಪಕವಾಗಿವೆ. ಒಬ್ಬರೇ ಅಭ್ಯರ್ಥಿ ಎರಡು ನಾಮಪತ್ರಗಳನ್ನು ಸಲ್ಲಿಸಿರುವುದರಿಂದ ಒಂದೇ ನಾಮಪತ್ರವೆಂದು ಪರಿಗಣಿಸಲಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ 29ನೇ ವಾರ್ಡಿನ ಮಂಗಳಾ ಎಂಬುವರು ಮಾತ್ರ ನಾಮಪತ್ರ ಸಲ್ಲಿಸಿರುವುದಾಗಿ ಹೇಳಿದರು. ಆದರೂ ಉಪಾಧ್ಯಕ್ಷ ಚುನಾವಣೆಯನ್ನು ಮುಂದೂಡಲಾಗಿದೆ.

ಜೆಡಿಎಸ್‌ ಯಡವಟ್ಟಿನಿಂದ ಕೈ ತಪ್ಪುವುದೆ ಉಪಾಧ್ಯಕ್ಷ ಸ್ಥಾನ?

ನಗರಸಭೆ ಅಧ್ಯಕ್ಷ ಸ್ಥಾನ ಎಸ್‌.ಟಿ. ಸ್ಥಾನಕ್ಕೆ ನಿಗದಿಯಾಗಿರುವುದರಿಂದ ಬಿಜೆಪಿಯವರಿಗೆ ಆ ಸ್ಥಾನ ಒಲಿಯುವ ಸಾಧ್ಯತೆಗಳಿವೆ. ಆದರೆ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್‌ ನಾಮಪತ್ರ ಸಲ್ಲಿಸಲು ಸಾಧ್ಯವಾಗದೆ ಇರುವುದರಿಂದ ಆ ಸ್ಥಾನವೂ ಕೈ ತಪ್ಪುವ ಆತಂಕ ಜೆಡಿಎಸ್‌ಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಬಿಜೆಪಿಯಿಂದ ಮಂಗಳಾ ಪ್ರದೀಪ್‌ ನಾಮಪತ್ರ ಸಲ್ಲಿಸಿರುವುದರಿಂದ ಜೆಡಿಎಸ್‌ನವರಿಗೆ ತಳಮಳ ಉಂಟಾಗಿದೆ. ಈ ಸ್ಥಾನವೂ ಕೂಡ ಕೈ ತಪ್ಪಿ ಹೋಯಿತೆ ಎಂಬ ಶಂಕೆ ಇದೆ.

ರಾತ್ರಿಯಿಂದಲೂ ಉಪಾಧ್ಯಕ್ಷ ಸ್ಥಾನಕ್ಕೆ ಚರ್ಚೆ

ಉಪಾಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳು ಇದ್ದಿದ್ದರಿಂದ ಆಯ್ಕೆ ಮಾಡುವುದರಲ್ಲಿ ಜೆಡಿಎಸ್‌ ಪಕ್ಷದ ಮುಖಂಡರು ವಿಫಲರಾದ ಹಿನ್ನೆಲೆಯಲ್ಲಿ ಹಲವು ಚರ್ಚೆಗಳು ನಡೆದವು. ಅಂತಿಮವಾಗಿ ಇಂದು ಬೆಳಗ್ಗೆ ರೇವಣ್ಣ ಅವರು ಮೊದಲ 5 ತಿಂಗಳಿಗೆ ನಗರಸಭೆ ಮಾಜಿ ಉಪಾಧ್ಯಕ್ಷ ಇರ್ಷಾದ್‌ ಪಾಷ ಅವರ ಪತ್ನಿಗೆ ನೀಡಲು ತೀರ್ಮಾನಿಸಲಾಯಿತು. ನಂತರ 10 ತಿಂಗಳಿಗೆ 15ನೇ ವಾರ್ಡಿನ ಅಶ್ವಿನಿ ಮಹೇಶ್‌, ಉಳಿದ ಸದಸ್ಯರಿಗೆ ತಲಾ 5 ತಿಂಗಳಿನಂತೆ ಅಧಿ​ಕಾರ ಹಂಚಿಕೆ ಮಾಡಿದ್ದರು.

ಜೆಡಿಎಸ್‌ ಸದಸ್ಯರ ಅಸಮಾಧಾನ

ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಬಗ್ಗೆ ಮಾಹಿತಿಯೇ ಇಲ್ಲ ಎಂದು ನಿಮ್ಮ ಸಿಬ್ಬಂದಿ ಹೇಳಿದ್ದಾರೆ. ಆದರೆ ಹಠಾತ್‌ ಹೇಗೆ ನಾಮಪತ್ರ ಸೃಷ್ಟಿಯಾಗಿದೆ ಎಂದು ಚುನಾವಣಾಧಿಕಾರಿಗಳಿಗೆ ಜೆಡಿಎಸ್‌ ಸದಸ್ಯರು ಪ್ರಶ್ನೆ ಮಾಡಿದರು. ಈ ವೇಳೆ ಎಲ್ಲ ಜೆಡಿಎಸ್‌ ಬೆಂಬಲಿತ ಸದಸ್ಯರು ಅಧಿಕಾರಿಗಳ ಮುಂದೆ ನಿಂತರೆ ಕೆಲ ಮಹಿಳಾ ಸದಸ್ಯರು ಅಲ್ಲೆ ಧರಣಿ ಕುಳಿತರು. ನಾಮಪತ್ರ ಸಲ್ಲಿಸಲು ಮತ್ತೆ ಕಾಲಾವಕಾಶ ಕೊಡಬೇಕು ಎಂದು ಸದಸ್ಯರು ಹಠ ಮಾಡಿದರು. ಆದರೆ ಚುನಾವಣಾಧಿಕಾರಿಗಳು ಇದ್ಯಾವುದಕ್ಕೂ ಜಗ್ಗದೆ ನಿಮ್ಮ ಬೇಡಿಕೆಗೆ ಕಾನೂನು ಒಪ್ಪುವುದಿಲ್ಲ ಎಂದು ಹೇಳಿದರು. ಸಿಟ್ಟಿಗೆದ್ದ ಜೆಡಿಎಸ್‌ ಸದಸ್ಯರು ಮಾತನಾಡಿ, ಚುನಾವಣಾಧಿಕಾರಿಗಳಾಗಿ ನೀವು ಒಂದು ಪಕ್ಷದ ಪರವಾಗಿ ಕೆಲಸ ಮಾಡಬಾರದು. ನಿಮ್ಮ ವಿರುದ್ಧವೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು.

Follow Us:
Download App:
  • android
  • ios