ರೈತರಿಂದ ಪಡೆದುಕೊಳ್ಳುವ ಭೂಮಿಗೆ ಮುಂಚೆ ನಿಗದಿಯಾಗಿದ್ದ ಹಣಕ್ಕಿಂತ ದುಪ್ಪಟ್ಟು ಹಣ ನೀಡಲಾಗುವುದು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಚನ್ನಪಟ್ಟಣ (ಸೆ.11):  ಹಲವು ವರ್ಷಗಳಿಂದ ನನೆಗುದಿಗೆ ಬಿದಿದ್ದ ಎಲೆಕೇರಿ ರೈಲ್ವೆ ಮೇಲ್ಸೇತುವೆ ಕಾರ್ಯಕ್ಕೆ ಕೊನೆಗೂ ಮುಕ್ತಿ ದೊರೆತಿದ್ದು, ರಸ್ತೆಗೆ ಭೂ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡುವ ಸಂಬಂಧ ಇದ್ದ ವಿವಾದ ಬಗೆಹರಿದಿರುವುದಾಗಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಸ್ತೆ ನಿರ್ಮಾಣ ಕಾರ್ಯಕ್ಕೆ ಸ್ವಾಧೀ​ನಪಡಿಸಿಕೊಳ್ಳಲಾಗಿರುವ ಭೂಮಿಯ ಮಾಲೀಕರಿಗೆ ದುಪ್ಪಟು ಪರಿಹಾರ ಕೊಡಿಸಲಾಗುತ್ತಿದ್ದು, ಇದರೊಂದಿಗೆ ಕಾಮಗಾರಿಗೆ ಇದ್ದ ಅಡ್ಡಿ ಪರಿಹಾರ ವಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲೆಕೇರಿ ರಸ್ತೆಗೆ ಸ್ವಾ​ಧೀನಪಡಿಸಿಕೊಳ್ಳಲಾಗಿದ್ದ ನಗರಸಭೆ ವ್ಯಾಪ್ತಿಯ ಜಮೀನಿಗೆ ಹೊಸದಾಗಿ 1200 ರು.ನಿಂದ 1400 ರುಪಾಯಿ ವರೆಗೆ ಪ್ರತಿ ಚದರ ಅಡಿಗೆ ಪರಿಹಾರ ಮೊತ್ತ ನಿಗದಿಪಡಿಸಲಾಗಿದೆ. ಈ ಹಿಂದೆ ಈ ಭೂಮಿಗೆ ಚದರಡಿಗೆ 650 ರು.ನಿಂದ 700 ರುಪಾಯಿ ನಿಗದಿಪಡಿಸಲಾಗಿತ್ತು. ಈ ಪರಿಹಾರದ ಹಣ ಕಡಿಮೆ ಎಂದು ಭೂಮಾಲೀಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು ಎಂದು ತಿಳಿಸಿದ್ದಾರೆ.

ಬೆಳೆ ವಿಮೆ ನಷ್ಟಪರಿಹಾರ ರೈತರ ಖಾತೆಗೆ ಜಮಾ ...

ಈ ಸಂಬಂಧ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಉನ್ನತಾಧಿ​ಕಾರಿಗಳು ಮತ್ತು ಸರ್ಕಾರದೊಂದಿಗೆ ಚರ್ಚಿಸಿ ಈ ಪೂರಕ ರಸ್ತೆಗೆ ಒಟ್ಟಾರೆ 11.84 ಕೋಟಿ ರು. ಪರಿಹಾರವನ್ನು ಬಿಡುಗಡೆ ಮಾಡಿಸಲಾಗಿದೆ. ಈಗಾಗಲೇ 3 ಕೋಟಿ 16 ಲಕ್ಷ ರುಪಾಯಿಗಳ ಪರಿಹಾರ ಬಿಡುಗಡೆ ಆಗಿತ್ತು. ಹೆಚ್ಚುವರಿ 8 ಕೋಟಿ 84 ಲಕ್ಷ ರುಪಾಯಿಗಳ ಪರಿಹಾರ ಹಣ ಈಗ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಚನ್ನಪಟ್ಟಣ -ಎಲೆಕೇರಿ ರೈಲ್ವೇ ಸೇತುವೆಯ ಪೂರಕ ರಸ್ತೆಗೆ ಅವರಿಗೆ ಪ್ರತಿ ಚದರ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಕಾಮಗಾರಿ ಕೈಗೊಳ್ಳಲು 75 ಲಕ್ಷ ರುಪಾಯಿಗಳ ಪ್ರತ್ಯೇಕ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ ಎಂದು ಎಚ್ಡಿಕೆ ತಿಳಿಸಿದ್ದಾರೆ.

ರೈತರ ಮನೆಗಳಲ್ಲಿ ವಾಸ್ತವ್ಯ : ಸಚಿವ ಬಿ.ಸಿ.ಪಾಟೀಲ್‌ ...

ಬೆಂಗಳೂರು ಮೈಸೂರು ಮಾರ್ಗದಲ್ಲಿ ಅತಿ ಹೆಚ್ಚು ರೈಲುಗಳು ಸಂಚರಿಸುವುದರಿಂದ ಎಲೆಕೇರಿ ರೈಲ್ವೆ ಗೇಟ್‌ನಿಂದಾಗಿ ಪ್ರಯಾಣಿಕರಿಗೆ ಸಾಕಷ್ಟುಸಮಸ್ಯೆಯಾಗುತಿತ್ತು. ಈ ಭಾಗದ ಹತ್ತಾರು ಗ್ರಾಮದ ಜನತೆ ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದರು. ರೈಲ್ವೆ ಇಲಾಖೆ ಮೇಲ್ಸೇತುವೆ ನಿರ್ಮಿಸಿತ್ತಾದರೂ, ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಭೂಸ್ವಾ​ಧೀನ ಅಡ್ಡಿಯಾಗಿದ್ದ ಪರಿಣಾಮ ಸಮಸ್ಯೆಯಾಗಿತ್ತು. ಇದೀಗ ಈ ಸಮಸ್ಯೆ ಬಗೆಹರಿದಿದೆ ಎಂದು ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.