ಬೆಳೆ ವಿಮೆ ನಷ್ಟಪರಿಹಾರ ರೈತರ ಖಾತೆಗೆ ಜಮಾ
ಬೆಳೆ ನಷ್ಟ ಅನುಭವಿಸಿದ ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಮೈಸೂರು (ಸೆ.09): ಬೆಳೆ ವಿಮೆ ನಷ್ಟಪರಿಹಾರವನ್ನು ಸೆ.8 ರಿಂದ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರಿಂದ ಮಂಗಳವಾರ ಮನವಿಪತ್ರ ಸ್ವೀಕರಿಸಿ ಮಾನತನಾಡಿದ ಅವರು, ಈ ಭರವಸೆ ನೀಡಿದರು.
ರಾಜ್ಯದ ರೈತರು ಬೆಳೆವಿಮೆ ಹಣ ಕಟ್ಟಿದ್ದರೂ ಬೆಳೆ ನಷ್ಟಪರಿಹಾರ ಎರಡು ವರ್ಷಗಳಿಂದ ಜಮಾ ಆಗಿಲ್ಲ. ವಿಮಾ ಕಂಪನಿಗಳು ಆಕರ್ಷಕ ಮಾತುಗಳನ್ನಾಡಿ ವಿಮಾ ಹಣ ಕಟ್ಟಿಸಿಕೊಂಡು, ಬೆಳೆ ನಷ್ಟವಾದರೆ ಪರಿಹಾರ ನೀಡಲು ನಿರ್ಲಕ್ಷ್ಯ ತೋರಿಸುತ್ತವೆ. ಹಿಂದಿನ ವರ್ಷದ ಬೆಳೆ ನಷ್ಟಪರಿಹಾರ ಸುಮಾರು 600 ಕೋಟಿ ರು. ಬರಬೇಕಿದೆ, ರೈತರು ಕೊರೋನಾ ಸಂಕಷ್ಟದಿಂದ ನಲುಗಿದ್ದಾರೆ. ಆದ್ದರಿಂದ ಕೂಡಲೇ ಈ ಹಣ ಬಿಡುಗಡೆ ಮಾಡಬೇಕು ಎಂದು ಶಾಂತಕುಮಾರ್ ಆಗ್ರಹಿಸಿದರು.
ರೈತರ ಮನೆಗಳಲ್ಲಿ ವಾಸ್ತವ್ಯ : ಸಚಿವ ಬಿ.ಸಿ.ಪಾಟೀಲ್ ...
ಕಬ್ಬು ಬೆಳೆಯನ್ನು ಫಸಲ್ ಭೀಮಾ ವ್ಯಾಪ್ತಿಗೆ ಸೇರಿಸಬೇಕು. ಕಬ್ಬು ಬೆಳೆ ನಷ್ಟವಾದರೂ ಪರಿಹಾರ ನೀಡಬೇಕು. ಬೆಲೆ ಕುಸಿತವಾಗಿರುವುದರಿಂದ ಬಿಳಿಜೋಳವನ್ನು ಸರ್ಕಾರವೇ ಖರೀದಿಸಬೇಕು ಎಂದು ಒತ್ತಾಯಿಸಿದರು.
ಬಿ.ಸಿ.ಪಾಟೀಲ್ ಮಾತನಾಡಿ, ಬೆಳೆ ನಷ್ಟಪರಿಹಾರ ಹಣ ಹಾವೇರಿ ಜಿಲ್ಲೆಯಲ್ಲಿ ಬಿಡುಗಡೆಯಾಗಿದೆ. ಇತರೆಡೆಯೂ ಜಮಾ ಮಾಡಲಾಗುತ್ತಿದೆ. ಬಿಳಿ ಜೋಳ ಖರೀದಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿ ಮಾಡಬಾರದು ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಗಮನಕ್ಕೆ ತರಲಾಗುವುದು ಎಂದರು.
ರೈತರ ಬೆಳೆಗೆ ನೀಡುವ ಸಾಲದ ಮಾನದಂಡ‚ ಬದಲಿಸಬೇಕು ಎಂದು ಕೂಡ ರೈತರು ಆಗ್ರಹಿಸಿದರು.