ಬೆಂಗಳೂರು [ಡಿ.20]:  ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಪೆಟಿಎಂ ಮೂಲಕ ಸ್ಮಾರ್ಟ್‌ ಕಾರ್ಡ್‌ ರೀಚಾರ್ಜ್ ಸೇವೆ ಒದಗಿಸಿದ್ದರೂ ಅನೇಕ ವೇಳೆ ನೆಟ್‌ವರ್ಕ್ ಸಮಸ್ಯೆಯಿಂದ ಪೇಟಿಎಂ ಪಾವತಿಯಾಗದೇ ಇರುವುದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ಬೈಯಪ್ಪನಹಳ್ಳಿ- ಮೈಸೂರು ರಸ್ತೆ(ನೇರಳೆ ಮಾರ್ಗ) ಮತ್ತು ನಾಗಸಂದ್ರ- ಯಲಚೇನಹಳ್ಳಿ (ಹಸಿರು ಮಾರ್ಗ) ಮಾರ್ಗದ 40 ನಿಲ್ದಾಣಗಳಲ್ಲಿ ಪೇಟಿಎಂ ಮೂಲಕ ಸ್ಮಾರ್ಟ್‌ಕಾರ್ಡ್‌ ರೀಚಾರ್ಜ್ ಮಾಡಿಸಿಕೊಳ್ಳುವ ಅವಕಾಶವನ್ನು ಮೆಟ್ರೋ ಪ್ರಯಾಣಿಕರಿಗೆ ಪ್ರಾಯೋಗಿಕವಾಗಿ ನೀಡಿದೆ. ಸರದಿ ಸಾಲಿನಲ್ಲಿ ನಿಂತು ಪ್ರಯಾಣಿಕರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಮತ್ತು ನಗದು ರಹಿತ ವ್ಯವಹಾರದಿಂದ ಅತೀ ಕಡಿಮೆ ಸಮಯದಲ್ಲಿ ಸುಲಭವಾಗಿ ಸ್ಮಾರ್ಟ್‌ಕಾರ್ಡ್‌ ರೀಚಾರ್ಜ್ ಸೌಲಭ್ಯ ಒದಗಿಸುವ ಉದ್ದೇಶ ಬಿಎಂಆರ್‌ಸಿಎಲ್‌ನದ್ದು.

ಕ್ರೆಡಿಟ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ ಬಳಸಿ ಹಣ ಪಾವತಿ ಮಾಡುವುದಕ್ಕಿಂತ ಪೇಟಿಎಂ ಮೂಲಕ ಸುಲಭವಾಗಿ ಹಣ ಪಾವತಿ ಸಾಧ್ಯ. ಅಲ್ಲದೇ ಸ್ಮಾರ್ಟ್‌ ಕಾರ್ಡ್‌ನಲ್ಲಿ ಕನಿಷ್ಠ 50 ರು.ರೀಚಾರ್ಜ್ ಇರಲೇಬೇಕು ಎಂಬ ನಿಯಮ ನಮ್ಮ ಮೆಟ್ರೋ ಸಂಸ್ಥೆಯಾಗಿದ್ದು ಆಗಿದೆ. ಹೀಗಾಗಿ ಅನಿವಾರ್ಯವಾಗಿ 50 ರು. ಕನಿಷ್ಠ ಮೊತ್ತವನ್ನು ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ಪ್ರಯಾಣಿಕರು ರೀಚಾಜ್‌ರ್‍ ಮಾಡಿಸಲೇಬೇಕಿದೆ. ಆದ್ದರಿಂದ ಪೇಟಿಯಂ ಹೆಚ್ಚು ಅನುಕೂಲಕವಾಗಿದ್ದರೂ ನೆಟ್‌ವರ್ಕ್ ಸಮಸ್ಯೆ ಬಾಧಿಸುತ್ತಿದೆ.

ಹೊಸ ವರ್ಷಕ್ಕೆ ಮೆಟ್ರೋದಿಂದ ಗುಡ್ ನ್ಯೂಸ್..

ನವೆಂಬರ್‌ ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಅವರಲ್ಲಿ ಶೇ.65ಕ್ಕೂ ಅಧಿಕ ಮಂದಿ ಸ್ಮಾರ್ಟ್‌ ಕಾರ್ಡ್‌ ಬಳಸಿದ್ದಾರೆ. ಪ್ರತಿ ದಿನ 3.7 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರೆ ಅವರಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ಪೇಟಿಎಂ ಬಳಸಿ ರೀಚಾರ್ಜ್ ಮಾಡುತ್ತಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏರ್‌ಟೆಲ್‌-ಜಿಯೋ ಜತೆಗೆ ಒಪ್ಪಂದ:

40 ಮೆಟ್ರೋ ನಿಲ್ದಾಣಗಳಲ್ಲಿ ಉತ್ತಮ ನೆಟ್‌ವರ್ಕ್ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್‌ ಜಿಯೋ ಮತ್ತು ಏರ್‌ಟೆಲ್‌ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಎತ್ತರಿಸಿದ ನಿಲ್ದಾಣ ಮತ್ತು ಮೆಟ್ರೋ ಮಾರ್ಗದಲ್ಲಿ ಏರ್‌ಟೆಲ್‌ ಮತ್ತು ಜಿಯೋ ನೆಟ್‌ವರ್ಕ್ ಉತ್ತಮವಾಗಿದೆ. ಆದರೆ, ನೆಲದಾಳದಲ್ಲಿ ಇರುವ ಮೆಜೆಸ್ಟಿಕ್‌- ಎಂ.ಜಿ.ರಸ್ತೆ ಮತ್ತು ಮೆಜೆಸ್ಟಿಕ್‌- ಮಾಗಡಿ ರಸ್ತೆ. ಮೆಜೆಸ್ಟಿಕ್‌- ನ್ಯಾಷನಲ್‌ ಕಾಲೇಜ್‌ ವರೆಗಿನ ಮಾರ್ಗಗಳಲ್ಲಿ ಜಿಯೋ ಟೆಲಿಕಾಂ ಸಂಸ್ಥೆಯ ನೆಟ್‌ವರ್ಕ್ ಮಾತ್ರ ಸಿಗುತ್ತದೆ. ಉಳಿದ ಟೆಲಿಕಾಂ ಸಂಸ್ಥೆಗಳು ಬಿಎಂಆರ್‌ಸಿಎಲ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ಈ ಸಂಸ್ಥೆಗಳ ನೆಟ್‌ವರ್ಕ್ ಕೆಲವು ಕಡೆಗಳಲ್ಲಿ ಸಿಕ್ಕರೂ, ಬಹುತೇಕ ಕಡೆಗಳಲ್ಲಿ ಸಿಗುವುದೇ ಇಲ್ಲ.

ಸರ್ವರ್‌ ಡೌನ್‌ ಸಮಸ್ಯೆ

ಮೆಟ್ರೋ ನಿಲ್ದಾಣಗಳಲ್ಲಿ ನಿರಂತರವಾಗಿ ನೆಟ್‌ವರ್ಕ್ ಲಭ್ಯವಾಗುವಂತೆ ಬಿಎಂಆರ್‌ಸಿಎಲ್‌ ಏರ್‌ಟೆಲ್‌ ಮತ್ತು ಜಿಯೋ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಎತ್ತರಿಸಿದ ಮೆಟ್ರೋ ಮಾರ್ಗ ಮತ್ತು ನಿಲ್ದಾಣಗಳಲ್ಲಿ ಬಹುತೇಕ ನೆಟ್‌ವರ್ಕ್ ಸಮಸ್ಯೆ ಇಲ್ಲ ಎನ್ನಬಹುದು. ಆದರೆ, ಕೆಲವು ಸಂದರ್ಭಗಳಲ್ಲಿ ಸರ್ವರ್‌ಡೌನ್‌ ಸಮಸ್ಯೆಯಿಂದ ನಿಗದಿತ ಅವಧಿಯಲ್ಲಿ ಪಾವತಿ ಸಾಧ್ಯವಾಗುತ್ತಿಲ್ಲ. ಇದರಿಂದ ಸ್ಮಾರ್ಟ್‌ಕಾರ್ಡ್‌ ರೀಚಾರ್ಜ್ ಆಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗದೆ ಆತಂಕ ಹೆಚ್ಚುತ್ತದೆ ಎಂಬುದು ಮೆಟ್ರೋ ಸ್ಮಾರ್ಟ್‌ಕಾರ್ಡ್‌ ಹೊಂದಿರುವ ನೇತ್ರಾವತಿ ಅವರ ಆರೋಪ.

ಪೇಟಿಎಂ ಪಾವತಿಯು ಪಿಆರ್‌ಎನ್‌ ಎಂಟು ಸಂಖ್ಯೆಯ ದೃಢೀಕರಣದೊಂದಿಗೆ ನಡೆಯುತ್ತದೆ. ನೆಟ್‌ವರ್ಕ್ ಉತ್ತಮವಾಗಿದ್ದರೆ ಕೇವಲ 10 ಸೆಕೆಂಡ್‌ಗಳಲ್ಲಿ ಪಾವತಿಯಾಗುತ್ತದೆ. ನೆಟ್‌ವರ್ಕ್ ಸಮಸ್ಯೆಯಿಂದ ಪಿಆರ್‌ಎನ್‌ ದೃಢೀಕರಣ ಸಂಖ್ಯೆ ಬರುವುದು ತಡವಾಗುತ್ತದೆ. ಇದರಿಂದ 10 ಸೆಕೆಂಡ್‌ಗಳಲ್ಲಿ ಆಗಬೇಕಾದ ಪಾವತಿ 5ರಿಂದ 10 ನಿಮಿಷ ತೆಗೆದುಕೊಳ್ಳುತ್ತದೆ. ಕೆಲವು ವೇಳೆ ಪಾವತಿ ವಿಫಲವಾದ ಉದಾಹರಣೆಗಳು ಕೂಡ ಸಾಕಷ್ಟುಇದೆ. ಜನ ದಟ್ಟಣೆ ಇರುವ ಮೆಟ್ರೋದಲ್ಲಿ ಅಧಿಕ ಸಾಮರ್ಥ್ಯದ ನೆಟ್‌ವರ್ಕ್ ಒದಗಿಸುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ ಕ್ರಮಕೈಗೊಳ್ಳಬೇಕು ಎನ್ನುವುದು ಮೆಟ್ರೋ ಪ್ರಯಾಣಿಕ ಸೂರ್ಯನಾರಾಯಣ್‌ ಅಭಿಪ್ರಾಯ.

ವೈಫೈ ಕನೆಕ್ಷನ್‌ ಸಾಧ್ಯವಾಗುತ್ತಿಲ್ಲ

ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಇರುವಂತೆ ಈ ಹಿಂದೊಮ್ಮೆ ಮೆಟ್ರೋ ರೈಲಿನಲ್ಲಿ ವೈಫೈ ಒದಗಿಸುವ ಬಗ್ಗೆ ಪ್ರಾಯೋಗಿಕ ಪ್ರಯತ್ನವನ್ನು ಮೆಟ್ರೋ ನಿಗಮ ಮಾಡಿತ್ತು. ಆದರೆ, ಪ್ರತಿ 5ರಿಂದ 7 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಮತ್ತು 10 ನಿಮಿಷದೊಳಗೆ ಮುಂದಿನ ನಿಲ್ದಾಣಗಳು ಬರುವುದರಿಂದ ವೈಫೈ ಕನೆಕ್ಷನ್‌ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ವೈಫೈ ಯೋಜನೆ ಯಶಸ್ವಿಯಾಗಲಿಲ್ಲ. ಆ ನಂತರ ಟೆಲಿಕಾಂ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ನೆಟ್‌ವರ್ಕ್ ವ್ಯವಸ್ಥೆ ಮಾಡಲಾಗಿದೆ. ಕೆಲವೊಮ್ಮೆ ಸರ್ವರ್‌ ಸಮಸ್ಯೆಯಿಂದ ನೆಟ್‌ವರ್ಕ್ ಸಮಸ್ಯೆ ಎದುರಾಗುವುದು ಸಾಮಾನ್ಯ. ಸರಿಪಡಿಸುವ ಬಗ್ಗೆ ಟೆಲಿಕಾಂ ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.