* ಕ್ರೈಸ್ತ ಪ್ರಾರ್ಥನಾ ಮಂದಿರದ ಬಾಗಿಲು ಒಡೆದು ಅಕ್ರಮ ಪ್ರವೇಶ * ದ.ಕ ಜಿಲ್ಲೆಯ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ನಡೆದಿದೆ* ಭಗವಾಧ್ವಜ ಹಾರಿಸಿ ಹನುಮಂತನ ಫೋಟೋ ಇಟ್ಟು ದುಷ್ಕೃತ್ಯ
ಮಂಗಳೂರು(ಮೇ.06): ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಶಿಲುಬೆ ಹಾನಿಗೈದು ದುಷ್ಕೃತ್ಯ ಮೆರೆದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ನಡೆದಿದೆ.
"
ಇಲ್ಲಿನ ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಹೆಸರಿನ ಕ್ರೈಸ್ತ ಪ್ರಾರ್ಥನಾ ಮಂದಿರದ ಬಾಗಿಲು ಒಡೆದು ಅಕ್ರಮ ಪ್ರವೇಶ ಮಾಡಿ ಶಿಲುಬೆಗೆ ಹಾನಿ ಮಾಡಿದ ಕಿಡಿಗೇಡಿಗಳು ಬಳಿಕ ಭಗವಾಧ್ವಜ ಹಾರಿಸಿ ಹನುಮಂತನ ಫೋಟೋ ಇಟ್ಟು ದುಷ್ಕೃತ್ಯ ಮೆರೆದಿದ್ದಾರೆ. ಪ್ರಾರ್ಥನಾ ಮಂದಿರದ ದಾಖಲೆಗಳನ್ನು ಸಂಗ್ರಹಣೆ ಮಾಡಿಟ್ಟಿದ್ದ ಗೋಡ್ರೇಜ್ ಗೂ ಹಾನಿ ಎಸಗಿದ್ದು, ಕಿಡಿಗೇಡಿಗಳ ದಾಂಧಲೆ ವಿರುದ್ದ ಪ್ರಾರ್ಥನಾ ಮಂದಿರದ ಪಾದ್ರಿ ಫಾ| ಜೋಸ್ ವರ್ಗಿಸ್ ಕಡಬ ಠಾಣೆಗೆ ದೂರು ನೀಡಿದ್ದಾರೆ. 30 ವರ್ಷಗಳಿಂದ ಕಟ್ಟಡದ ತೆರಿಗೆ ಕಟ್ಟುತ್ತಿದ್ದು, ಪ್ರಾರ್ಥನಾ ಮಂದಿರ ಅಧಿಕೃತ ಅಂತ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಕಡಬ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನಾಸ್ಥಳಕ್ಕೆ ಹಿಂದೂಪರ ಸಂಘಟನೆಗಳ ಪ್ರಮುಖರು ಭೇಟಿ ನೀಡಿದ್ದು, ಪ್ರಾರ್ಥನಾ ಮಂದಿರದ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದಾಗಿ ವಾದ ಮಾಡಿದ್ದಾರೆ. ತಕ್ಷಣ ಪ್ರಾರ್ಥನಾ ಮಂದಿರ ತೆರವುಗೊಳಿಸಲು ಹಿಂದೂ ನಾಯಕರು ಒತ್ತಾಯಿಸಿದ್ದು, ಜಿಲ್ಲಾಡಳಿತ ಪ್ರಾರ್ಥನಾ ಮಂದಿರ ತೆರವುಗೊಳಿಸದೇ ಇದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಪ್ರಾರ್ಥನಾ ಮಂದಿರ ಅಕ್ರಮವಾ?
ಸದ್ಯ ಹಿಂದೂ ಸಂಘಟನೆಗಳು ಅಕ್ರಮ ಪ್ರಾರ್ಥನಾ ಮಂದಿರ ಅಂತ ವಾದಿಸ್ತಿದೆ. ಆದ್ರೆ ದೂರು ಕೊಟ್ಟ ಪ್ರಾರ್ಥನಾ ಮಂದಿರದ ಫಾಸ್ಟರ್ ಇದೊಂದು ಅಧಿಕೃತ ಕಟ್ಟಡ ಅಂತಿದಾರೆ. ಚರ್ಚ್ ಕಟ್ಟಡಕ್ಕೆ ಕಳೆದ 30 ವರ್ಷಗಳ ಹಿಂದಿನಿಂದಲೂ ಕಟ್ಟಡದ ತೆರಿಗೆ ಪಾವತಿಸಿಕೊಂಡು ಬರುತಿದ್ದು, ಕಟ್ಟಡ ನಂಬರ್ 1/107 ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಪೇರಡ್ಕ ಕ್ರೈಸ್ತ ಪ್ರಾರ್ಥನಾ ಮಂದಿರವಾಗಿರುತ್ತದೆ. ಆದ್ದರಿಂದ ಕ್ರೈಸ್ತ ಪ್ರಾರ್ಥನ ಮಂದಿರಕ್ಕೆ ಅಕ್ರಮ ಪ್ರವೇಶ ಮಾಡಿ ಧಾರ್ಮಿಕ ಕಲಹ ಎಬ್ಬಿಸಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಚರ್ಚ್ ನ ವಿದ್ಯುತ್ ಬಲ್ಬ್ ಗಳನ್ನು ತೆಗೆದುಕೊಂಡು ಹೋಗಿರುವುದಲ್ಲದೇ ಚರ್ಚ್ ನಲ್ಲಿ ನೀರಾವರಿ ಉದ್ದೇಶಕ್ಕಾಗಿ ತೆರೆದ ಬಾವಿಗೆ ಅಳವಡಿಸಿಕೊಂಡಿದ್ದ 14 ಸಾವಿರ ಮೌಲ್ಯದ ನೀರಾವರಿ ಪಂಪ್ ಮತ್ತು ಪೈಪ್‌ಗಳನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿರುವುದಾಗಿ ದೂರಲಾಗಿದೆ. ಅಲ್ಲದೇ ವಿದ್ಯುತ್ ಕಂಬದಿಂದ ಕಟ್ಟಡಕ್ಕೆ ಹಾಕಿದ್ದ ಸರ್ವಿಸ್ ವಯರ್‌ಗಳನ್ನು ಕಟ್ ಮಾಡಿ ಮೀಟರ್ ಬಾಕ್ಸ್ ಗಳನ್ನು ಕೂಡ ಕಳವುಗೈದ ಬಗ್ಗೆ ದೂರಲಾಗಿದೆ.