ಉಡುಪಿ ಪ್ರವಾಸದಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೋಮು ಸೌಹಾರ್ದತೆಯ ಅಪರೂಪದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಮಾನವೀಯ ಕಾರ್ಯವನ್ನು ಸಚಿವರು ಶ್ಲಾಘಿಸಿ, ತಕ್ಷಣವೇ ಆ ತಾಯಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಘಟನೆಯ ಬಗ್ಗೆ ಬರೆದುಕೊಂಡಿದ್ದಾರೆ. ಕೋಮು ಸೌಹಾರ್ದತೆಯೇ ನಮ್ಮ ಭಾರತದ ಅಸ್ತಿತ್ವ ಎಂಬ ಶೀರ್ಷಿಕೆ ಜೊತೆ ಉಡುಪಿಯಲ್ಲಿ ತಮ್ಮನ್ನು ಸಂಪರ್ಕಿಸಿದ ಮೂವರು ಮಹಿಳೆಯರ ಬಗ್ಗೆ ಸಚಿವರು ಬರೆದುಕೊಂಡಿದ್ದಾರೆ.

ಅತ್ಯಂತ ಅಪರೂಪದ ಘಟನೆ: ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿಯ ಪ್ರವಾಸದಲ್ಲಿದ್ದಾಗ ಭಾರತದ ನೈಜ ಸಾಮರಸ್ಯ ಮತ್ತು ಮಾನವೀಯತೆಗೆ ಸಾಕ್ಷಿಯಾಗುವಂತಹ ಒಂದು ಅತ್ಯಂತ ಅಪರೂಪದ ಘಟನೆ ಜರುಗಿತು. ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿಯಾದ ಗಿರಿಜಾ ಶೆಟ್ಟಿಗಾರ್ ಎಂಬ ಬಡ ವಿಧವೆ ಮಹಿಳೆಗೆ 1989 ರಲ್ಲೇ ನಿವೇಶನ ಮಂಜೂರಾಗಿದ್ದರೂ, ತಾಂತ್ರಿಕ ಅಡಚಣೆಗಳಿಂದಾಗಿ ಇಂದಿಗೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅತ್ಯಂತ ಭಾವುಕ ಸಂಗತಿಯೆಂದರೆ, ಈ ಹಿಂದು ತಾಯಿಯ ಪರವಾಗಿ ಧ್ವನಿಯೆತ್ತಿ, ಅವರಿಗೆ ನ್ಯಾಯ ಕೊಡಿಸಬೇಕೆಂದು ಕಣ್ಣೀರು ಹಾಕುತ್ತಾ ನನ್ನ ಬಳಿ ನೆರವು ಕೇಳಿಕೊಂಡು ಬಂದಿದ್ದು ನೆರೆಮನೆಯ ಮುಸ್ಲಿಂ ಮಹಿಳೆಯರು!
ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುವವರು ಸಮಾಜದಲ್ಲಿ ಗೋಡೆಗಳನ್ನು ಕಟ್ಟುತ್ತಿದ್ದರೆ, ಇಂತಹ ಸಾಮಾನ್ಯ ಜನರೇ ನಮ್ಮ ದೇಶದ ನಿಜವಾದ ಸೌಹಾರ್ದತೆಯ ರಾಯಭಾರಿಗಳು. ಈ ಮುಸ್ಲಿಂ ಸಹೋದರಿಯರ ಕಾಳಜಿಯನ್ನು ಕಂಡು “ಇದು ನೋಡಿ ನಮ್ಮ ಹೆಮ್ಮೆಯ ಭಾರತ” ಎಂದು ನನಗೆ ಹೆಮ್ಮೆ ಎನಿಸಿತು.
ಇದನ್ನೂ ಓದಿ: Bengaluru: ಮನೆಯಲ್ಲಿರುವ ಹಳೆ ಬಟ್ಟೆ, ಹಾಸಿಗೆ,ಸೋಫಾ, ಚಪ್ಪಲಿ ಸಂಗ್ರಹಕ್ಕೆ ಆ್ಯಪ್
ಮಾನವೀಯತೆಯೊಂದೇ ಪರಮ ಧರ್ಮ
ಬಡತನ ಮತ್ತು ಕಷ್ಟಗಳಿಗೆ ಯಾವುದೇ ಧರ್ಮವಿರುವುದಿಲ್ಲ, ಮಾನವೀಯತೆಯೊಂದೇ ಪರಮ ಧರ್ಮ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಷ್ಟದಲ್ಲಿರುವ ಆ ತಾಯಿಗೆ ಕಾನೂನುಬದ್ಧವಾಗಿ ಭೂಮಿಯ ವಾಸ್ತವ್ಯ ದೊರಕಿಸಿಕೊಟ್ಟು, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಸಮಾಜದಲ್ಲಿ ದ್ವೇಷ ಬಿತ್ತುವವರು ಸಾಮಾನ್ಯ ಜನರ ಈ ಪ್ರೀತಿ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ನೋಡಿ ಕಲಿಯಬೇಕಿದೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವುದು ಮತ್ತು ಇಂತಹ ಸೌಹಾರ್ದತೆಯನ್ನು ಎತ್ತಿಹಿಡಿಯುವುದೇ ನಮ್ಮ ಸರ್ಕಾರದ ಮುಖ್ಯ ಆಶಯವಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಹಣದಲ್ಲಿ ರೊಟ್ಟಿ ಕೇಂದ್ರ ಆರಂಭಿಸಿ ಸ್ವಾವಲಂಬಿ ಬದುಕಿನತ್ತ ಕುಷ್ಟಗಿಯ ಮಹಿಳೆಯರು


