ಬೆಂಗಳೂರು [ಜು.18] :  ಸುಮಾರು ನಾನೂರು ವರ್ಷಕ್ಕೂ ಹಳೆಯದಾದ ‘ದೊಡ್ಡ ಆಲದ ಮರ’ ನಿರ್ವಹಣೆ ಮಾಡುವ ಸಲುವಾಗಿ ತೋಟಗಾರಿಕೆ ಇಲಾಖೆ, ಹಿರಿಯ ಪರಿಸರವಾದಿ ನ.ಯಲ್ಲಪ್ಪರೆಡ್ಡಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಕೇತೋಹಳ್ಳಿಯಲ್ಲಿ ಮೂರು ಎಕರೆ ಭೂಮಿಯಲ್ಲಿ ಹರಡಿಕೊಂಡಿರುವ ಸುಮಾರು 400 ವರ್ಷಗಳ ಪುರಾತನ ಆಲದ ಮರವನ್ನು ಉಳಿಸುವುದು, ಅದನ್ನು ಪೋಷಣೆ ಮಾಡುವುದು ಇಲಾಖೆಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ತಿಳಿಸಿದ್ದಾರೆ.

ಸಮಿತಿಯಲ್ಲಿ ಪರಿಸರ, ಕೃಷಿ ಹಾಗೂ ತೋಟಗಾರಿಕಾ ತಜ್ಞರು ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಸದಸ್ಯರಾಗಿರಲಿದ್ದು, ಮರದ ಇತಿಹಾಸವನ್ನು ಅಧ್ಯಯನ ಮಾಡಲಿದ್ದಾರೆ. ಮುಂದಿನ ಎಷ್ಟುವರ್ಷ ಮರ ಉಳಿಯಲಿದೆ. ಉಳಿಸುವುದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಕುರಿತು ಅಧ್ಯಯನ ಮಾಡಲಿದ್ದಾರೆ. ಅಲ್ಲದೆ, ಈ ಮರದ ಇತಿಹಾಸವನ್ನು ಪುಸ್ತಕ ರೂಪದಲ್ಲಿ ಹೊರತರಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.