Asianet Suvarna News Asianet Suvarna News

Chikkamagaluru: ಬಂಜಾರ ಸಮುದಾಯದ ಏಳಿಗೆಗೆ ಬದ್ಧ: ತಾಂಡಾ ನಿಗಮದ ಅಧ್ಯಕ್ಷ ಪಿ.ರಾಜೀವ್

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಸಾಮಾಜಿಕ ಸಂವಾದ ಕಾರ್ಯಕ್ರಮ ನಡೆಯಿತು. ಬಂಜಾರ ಸಮುದಾಯ ಸಮಸ್ಯೆಗಳು, ಸೌಲಭ್ಯಗಳು, ಸರ್ಕಾರದಿಂದ ನೀಡುವ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. 

Committed to the prosperity of the banjara community says tanda president p rajeev gvd
Author
Bangalore, First Published Jun 7, 2022, 12:43 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.07): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಸಾಮಾಜಿಕ ಸಂವಾದ ಕಾರ್ಯಕ್ರಮ ನಡೆಯಿತು. ಬಂಜಾರ ಸಮುದಾಯ ಸಮಸ್ಯೆಗಳು, ಸೌಲಭ್ಯಗಳು, ಸರ್ಕಾರದಿಂದ ನೀಡುವ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಸಾಮಾಜಿಕ ಸಂವಾದ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯ ಮುಖಂಡರು ಸೇರಿದಂತೆ ಜನರು ಭಾಗವಹಿಸಿದ್ದರು. ಬಂಜಾರ ಸಮುದಾಯವನ್ನು ಸಮಾಜದಲ್ಲಿ ಒಗ್ಗೂಡಿಸುವ ಚಿಂತನೆ ಹಾಗೂ ಪ್ರಯತ್ನ ನಿರಂತರವಾಗಿರಲಿದ್ದು, ಸಮುದಾಯದ ಅಸ್ತಿತ್ವವನ್ನು ಬಲಗೊಳಿಸುವ ಮೂಲಕ ಅದರ ಏಳಿಗೆಗೆ ಬದ್ಧನಾಗಿದ್ದೇನೆ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಪಿ.ರಾಜೀವ್  ಇದೇ ಸಮಯದಲ್ಲಿ ಹೇಳಿದರು. 

ನಿಗಮದ ಅನುದಾನ ಸಮಾಜಕ್ಕೆ ಪೂರಕವಾಗುವಂತಹ ಕಾರ್ಯಕ್ಕೆ: ಸಂವಾದದಲ್ಲಿ ಸಮುದಾಯದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪಿ.ರಾಜೀವ್ ಸಮುದಾಯದ ಶ್ರೇಯೋಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಕರ್ನಾಟಕದಲ್ಲಿ ಬಂಜಾರ ಸಮುದಾಯದ 22 ಲಕ್ಷ ಜನರಿದ್ದು, ಶೇ.99 ರಷ್ಟು ಜನ ಹಿಂದುಳಿದಿದ್ದಾರೆ. ಸಮುದಾಯದ ರಾಜಕೀಯ ಅಸ್ತಿತ್ವ ಬಲಗೊಳಿಸುವ ಕಾರ್ಯ ಅವಶ್ಯಕವಾಗಿದ್ದು, ಸಮುದಾಯದ ರಾಜಕೀಯ ಸಂವೇದನಾಶೀಲತೆಯನ್ನು ಗುರುತಿಸಿ ರಾಜಕೀಯ ಜಾಗೃತಿ ಮೂಡಿಸುವ ಪ್ರಯೋಗಗಳನ್ನು ಮಾಡುವ ಮೂಲಕ ಸಮುದಾಯದಲ್ಲಿ ಜವಬ್ದಾರಿಯುತ ಸ್ಥಾನದಲ್ಲಿರುವವರು ಸಮಾಜದಲ್ಲಿ ಸಮುದಾಯದ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. 

ನಮ್ಮ ಹಳೆಯ ಚಡ್ಡಿಗಳನ್ನು ಕಳಿಸಿಕೊಡುತ್ತೇವೆ: ಕಾಂಗ್ರೆಸ್ ನಾಯಕರ ವಿರುದ್ದ ಸಿ.ಟಿ.ರವಿ ವಾಗ್ದಾಳಿ

ಸಮುದಾಯದವರು ಜೀವನೋಪಾಯಕ್ಕೆ ರಾಜ್ಯದ ವಿವಿಧ ಭಾಗಗಳಿಗೆ ಗುಳೆ ಹೋಗುತ್ತಿದ್ದು ಅವರಿಗಾಗಿ ರಾಜ್ಯದ ನಾನಾಭಾಗದಲ್ಲಿ ಋತುಮಾನ ಶಾಲೆಗಳನ್ನು ಆರಂಭಿಸಲಾಗಿದೆ. ನಿಗಮದ ಅನುದಾನವನ್ನು ಕೇವಲ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಸೀಮಿತವಾಗಿರಸದೇ, ಸಮುದಾಯ ಭವನ, ಶಾಲೆ, ಗ್ರಂಥಾಲಯ ಹಾಗೂ ಸಮಾಜಕ್ಕೆ ಪೂರಕವಾಗುವಂತಹ ಕಾರ್ಯಗಳಿಗೆ ಹೆಚ್ಚು ಉಪಯೋಗಿಸಬೇಕು ಎಂದರು. ರೈತ ಉತ್ಪಾದಕ ಸಂಸ್ಥೆಗಳಲ್ಲಿ(ಎಫ್.ಪಿ.ಒ) ರೈತರು ಬೀಜ ಮತ್ತು ರಸಗೊಬ್ಬರವನ್ನು ನೇರವಾಗಿ ಕಾರ್ಖಾನೆಗಳಿಂದ ಖರೀದಿಸಬಹುದಾಗಿದ್ದು, ಬಂಜಾರ ಸಮುದಾಯದವರು ಎಫ್.ಪಿ.ಒಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ನಿಗಮದಿಂದಲೂ ಪ್ರತಿ ಎಫ್.ಪಿ.ಒ ಗೆ ರೂ.15 ಲಕ್ಷ ಅನುದಾನವನ್ನು ನೀಡಲಾಗುತ್ತಿದೆ ಎಂದರು.

ಪ್ರವಾಸಿ ತಾಣವಾಗಿ ಬಹದ್ದೂರು ಬಂದಾ ತಾಂಡಾ: ಬಂಜಾರ ಸಮುದಾಯದ ಕಲಾ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸುವ ಸಲುವಾಗಿ ಹಂಪಿ ಮತ್ತು ಗೋವಾ ರಸ್ತೆ ಮಾರ್ಗದಲ್ಲಿರುವ ಬಹದ್ದೂರು ಬಂದಾ ಎಂಬ ತಾಂಡಾವನ್ನು ಎಕೋ ತಾಂಡಾ ಹಳ್ಳಿಯಾಗಿ ಮಾರ್ಪಡಿಸಿ ವಿದೇಶಿಯರಿಗೆ ಸ್ಥಳೀಯ ಊಟದ ರುಚಿ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿಸುವ ಪ್ರವಾಸ ತಾಣವನ್ನಾಗಿ ಮಾಡುವ ಆಶಯವಿದ್ದು, ಸದ್ಯದಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದರು. ನಿಗಮಕ್ಕೆ ದೊರೆಯುವ ರೂ.70ಕೋಟಿ ಅನುದಾನದಲ್ಲಿ ರಾಜ್ಯದಲ್ಲಿರುವ 3300 ತಾಂಡಾಗಳಿಗೆ ತಲಾ 6 ರಿಂದ 7 ಲಕ್ಷ ದೊರೆಯಬಹುದು. ಇದರಿಂದ ಅಭಿವೃದ್ಧಿ ಕಾರ್ಯಗಳು ನಿಯಮಿತವಾಗಿರಲಿದೆ. ಆದರೆ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಗೆ ಸರ್ಕಾರ ನೀಡುವ  29, 000 ಕೋಟಿ ಹಣದಲ್ಲಿ ಬಂಜಾರ ಸಮುದಾಯದ ಪಾಲು ಇದೆ ಎಂಬುದನ್ನು ಅರಿತು ವಿವಿಧ ಉದ್ದಿಮೆಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಸಮುದಾಯದವರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. 

ಮಳೆಗಾಲ ಶುರು: 31 ಭೂಕುಸಿತ ಪ್ರದೇಶಗಳನ್ನು ಗುರುತಿಸಿದ ಚಿಕ್ಕಮಗಳೂರು ಜಿಲ್ಲಾಡಳಿತ

ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಜನಪ್ರತಿನಿಧಿಗಳು ಹಾಗೂ ಜನ ಸಾಮಾನ್ಯರ ನಡುವಿನ ಚರ್ಚೆಗಳು ಹಾಗೂ ಸಂವಾದ ಕಾರ್ಯಕ್ರಮಗಳು ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಈ ಸಂವಾದಗಳಿಗೆ ಜನ ಸಾಮಾನ್ಯರ ಸಮಸ್ಯೆಗಳನ್ನು ಗ್ರಹಿಸುವ ಶಕ್ತಿಯಿರುತ್ತದೆ ಎಂದರು. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಬಂಜಾರ ಭಾಷೆಯ ಏಳಿಗೆಗೆ ಬಂಜಾರ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು, ಸಮುದಾಯದ ಏಳಿಗೆಗೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಜಿಲ್ಲೆಯ ಬಂಜಾರ ಸಮುದಾಯ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ್, ಸಮುದಾಯ ಯುವ ಮುಖಂಡ ವಿನೋದ್ ಬಿ ನಾಯ್ಕ್  ಹಾಗೂ ಸಮುದಾಯದ ಇತರ ಮುಖಂಡರು ಭಾಗವಹಿಸಿದ್ದರು.

Follow Us:
Download App:
  • android
  • ios