ಹಾವೇರಿ(ಮೇ.03): ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆ ಶುರುವಾಗಿದ್ದು, ಮತ್ತಷ್ಟು ವಿನಾಯಿತಿ ಇರುವ ಲಾಕ್‌ಡೌನ್‌ 3.0ದತ್ತ ದಾಪುಗಾಲಿಟ್ಟಿದೆ. ಸಾರ್ವಜನಿಕ ಸಾರಿಗೆ ಬಿಟ್ಟರೆ ಬಾಕಿ ಎಲ್ಲ ವಹಿವಾಟು ಜಿಲ್ಲೆಯಲ್ಲಿ ಆರಂಭವಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರೀನ್‌ಝೋನ್‌ ವ್ಯಾಪ್ತಿಯಲ್ಲಿ ಸೇರಿದೆ. ಇದರಿಂದ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಬಟ್ಟೆ, ಚಿನ್ನಾಭರಣ ಮಳಿಗೆ ಸೇರಿದಂತೆ ಎಲ್ಲ ಬಗೆಯ ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆದು ವ್ಯಾಪಾರ ಆರಂಭಿಸಿವೆ. ಮೊಬೈಲ್‌, ಎಲೆಕ್ಟ್ರಾನಿಕ್ಸ್‌, ಕೃಷಿ ಸಲಕರಣೆಗಳು, ಬೀಜ ಗೊಬ್ಬರ ಮಾರಾಟ ಕೇಂದ್ರ ಸೇರಿದಂತೆ ಎಲ್ಲ ರೀತಿಯ ಅಂಗಡಿಗಳು ತೆರೆದಿವೆ. ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ಪಾರ್ಸಲ್‌ ಸೇವೆಗೆ ಮಾತ್ರ ಅವಕಾಶ ಇರುವುದರಿಂದ ಹೆಚ್ಚಿನ ಹೋಟೆಲ್‌ಗಳು ಇನ್ನೂ ತೆರೆದಿಲ್ಲ.

ಜೈಲು ಕ್ಯಾಂಟೀನ್‌ಗಾಗಿ ಕೈದಿಗಳಿಂದ ಹಣ ವಸೂಲಿ!

ವಾಹನ ಸಂಚಾರ ನಿರ್ಬಂಧಕ್ಕೆ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಸೀಜ್‌ ಮಾಡಿದ್ದ ಬೈಕ್‌ಗಳನ್ನು ದಂಡ ತುಂಬಿಸಿಕೊಂಡು ದಾಖಲೆ ಪರಿಶೀಲಿಸಿ ಮಾಲೀಕರಿಗೆ ವಾಪಸ್‌ ಕೊಡುತ್ತಿದ್ದಾರೆ. ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪುಗಟ್ಟಿನಿಲ್ಲುವವರಿಗೆ ಪೊಲೀಸರು ದಂಡ ವಿಧಿಸುವ ಪ್ರಕ್ರಿಯೆ ಶುರು ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ 3.0 ಆರಂಭಕ್ಕೆ ಇನ್ನೊಂದು ದಿನ ಬಾಕಿಯಿದ್ದು, ಸದ್ಯ ಕೊರೋನಾ ಭೀತಿಯಿಂದ ಜನ ನಿರಾಳರಾಗಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದ ನಗರ ಪ್ರದೇಶದಲ್ಲಿ ವ್ಯಾಪಾರ ಸ್ಥಗಿತಗೊಂಡು ಅಗತ್ಯ ಸಾಮಗ್ರಿ ಖರೀದಿಸಲಾಗದವರು ಈಗ ಪೇಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದುವರೆಗೆ ಇದ್ದ ಪೊಲೀಸರ ಭಯವೂ ಈಗ ಇಲ್ಲವಾಗಿದೆ. ರೆಡಿಮೇಡ್‌ ಗಾರ್ಮೆಂಟ್ಸ್‌, ಚಿನ್ನಾಭರಣ, ಮೊಬೈಲ್‌ ಅಂಗಡಿಗಳಲ್ಲಿ ವ್ಯಾಪಾರ ಅಲ್ಪಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಇನ್ನು ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಎಲ್‌ಐಸಿ ಕಚೇರಿಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ದೂರದವರೆಗೆ ಸರತಿಯಲ್ಲಿ ನಿಂತು ಜನ ಕಂತು ತುಂಬುತ್ತಿದ್ದಾರೆ.

ಕೃಷಿ ಚಟುವಟಿಕೆಯೂ ಆರಂಭವಾಗಿದ್ದು, ಅದಕ್ಕೆ ಪೂರಕವಾದ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ಸಾಗಿದೆ. ಬೀಜ ಗೊಬ್ಬರ ಖರೀದಿಗೆ ರೈತರು ಬರುತ್ತಿದ್ದಾರೆ. ಅಲ್ಲದೇ ಟ್ರ್ಯಾಕ್ಟರ್‌ ಬಿಡಿ ಭಾಗ ರಿಪೇರಿ ಗ್ಯಾರೇಜ್‌ಗಳು ಬಾಗಿಲು ತೆರೆದಿವೆ. ಕೊರೋನಾ ಮುಕ್ತ ಜಿಲ್ಲೆಯಲ್ಲಿ ನಿರಾಳತೆಯ ವಾತಾವರಣ ಕಂಡುಬಂದಿದ್ದು, ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ.