ಖಾಸಗಿ ಕೊಳವೆ ಬಾವಿ ಮಾಲೀಕರ ಜಮೀನಿಗೆ ಜಿಲ್ಲಾಧಿಕಾರಿಗಳ ಭೇಟಿ
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಕ್ರವಾರ ಬೆಳಿಗ್ಗೆ ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತುಮಕೂರು : ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಕ್ರವಾರ ಬೆಳಿಗ್ಗೆ ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ 15 ದಿನಗಳ ಹಿಂದೆ ತೀವ್ರತರವಾದ ನೀರಿನ ಸಮಸ್ಯೆ ಎದುರಾಗಿದ್ದ ಮಧುಗಿರಿ ತಾಲೂಕು ಸಿದ್ದಾಪುರ ಗ್ರಾಮ ಪಂಚಾಯಿತಿಯ ವಡೇರಹಳ್ಳಿ ಹಾಗೂ ಜಡೆಗೊಂಡನಹಳ್ಳಿ, ಮರುವೇಕೆರೆ ಗ್ರಾಮ ಪಂಚಾಯಿತಿ ಬನವೇನಹಳ್ಳಿ, ಹೊಸಕೆರೆ, ಮಿಡಿಗೇಶಿ, ಬೇಡತ್ತೂರು ಗ್ರಾಮ ಪಂಚಾಯತಿಯ ಕ್ಯಾತಗೊಂಡನಹಳ್ಳಿ ಗ್ರಾಮಗಳಿಗೆ ಅವರು ಭೇಟಿ ನೀಡಿ ನೀರಿನ ಸಮಸ್ಯೆ ತಲೆದೋರದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಖಾಸಗಿ ಕೊಳವೆ ಬಾವಿ ಮಾಲೀಕರ ಜಮೀನಿಗೆ ಭೇಟಿ:
ಮೊದಲಿಗೆ ಬೆಳಿಗ್ಗೆ 6.50 ಗಂಟೆಗೆ ವಡೇರಹಳ್ಳಿಯ ಗೋವಿಂದರಾಜು ಅವರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಾಡಿಗೆ ಆಧಾರದ ಮೇಲೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಒಪ್ಪಿಗೆ ನೀಡಿರುವ ಗೋವಿಂದರಾಜು ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಬಾಡಿಗೆ ಆಧಾರದ ಮೇಲೆ ಕೊಳವೆ ಬಾವಿ ನೀರನ್ನು ನೀಡುವ ಮಾಲೀಕರಿಗೆ ಮಾಹೆಯಾನ 18 ರಿಂದ 20ಸಾವಿರ ರು. ಗಳನ್ನು ಪಂಚಾಯಿತಿಯಿಂದ ಪಾವತಿ ಮಾಡಲಾಗುವುದೆಂದು ತಿಳಿಸಿದರು.
ಜಿಲ್ಲೆಯನ್ನು ಬರಪೀಡಿತವೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ನಿರ್ದೇಶಿಸಿದರಲ್ಲದೆ ಜಾನುವಾರುಗಳ ಮೇವಿಗಾಗಿ ಹೆಚ್ಚುವರಿ ಮೇವಿನ ಕಿಟ್‌ಗಳನ್ನು ನೀಡಿ ಮೇವು ಉತ್ಪಾದಿಸುವಂತೆ ರೈತರ ಮನವೊಲಿಸಬೇಕೆಂದು ಸೂಚನೆ ನೀಡಿದರು.
ಬನವೇನಹಳ್ಳಿಗೆ ಭೇಟಿ:
ನಂತರ ಬನವೇನಹಳ್ಳಿ ಗ್ರಾಮಕ್ಕೆ ಕೊಳವೆಬಾವಿ ನೀರು ನೀಡುತ್ತಿರುವ ಭಾಗ್ಯಮ್ಮ ಅವರ ಜಮೀನಿಗೆ ಭೇಟಿ ನೀಡಿ ನೀರಿನ ಇಳುವರಿ ಬಗ್ಗೆ ಪರಿಶೀಲಿಸಿದರು. ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಒದಗಿಸಲು ನಿರಂತರ ಜ್ಯೋತಿ ಅಡಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಬೆಸ್ಕಾಂ ಎಂಜಿನಿಯರ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಸ್ಥಳದಲ್ಲಿ ನೆಲಕ್ಕೆ ತಾಗುವಂತಿದ್ದ ವಿದ್ಯುತ್ ತಂತಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಸುರಕ್ಷತೆ ದೃಷ್ಟಿಯಿಂದ ಕೂಡಲೇ ಸರಿಯಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಜಗಧೀಶ್ ಅವರು ಕಾರ್ಯತತ್ಪರರಾಗಿ ವಿದ್ಯುತ್ ತಂತಿಯನ್ನು ನೆಲಕ್ಕೆ ತಾಗದಂತೆ ಅಳವಡಿಸುವ ಕೆಲಸ ನಿರ್ವಹಿಸಿದರು.
ಖಾಸಗಿ ಕೊಳವೆ ಬಾವಿಯಲ್ಲಿ ನೀರಿನ ಇಳುವರಿ ಕಡಿಮೆಯಾಗಿ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಪಿಡಿಒ ಸವಿತಾ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜಡೆಗೊಂಡನಹಳ್ಳಿಯಲ್ಲಿ ಹೊಸ ಮೋಟಾರ್ ಅಳವಡಿಕೆ:
ಜಡೆಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ನೀರಿನ ಸಮಸ್ಯೆಯಾಗಬಾರದೆಂಬ ದೃಷ್ಟಿಯಿಂದ ಹಾಲಿ ಇರುವ ಕೊಳವೆ ಬಾವಿಗೆ ೧೫ ಎಚ್‌ಪಿ (ಅಶ್ವಶಕ್ತಿ) ಸಾಮರ್ಥ್ಯದ ಪಂಪ್ ಮೋಟರ್ ಅಳವಡಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೇಶ್ವರಪ್ಪ ಮಾಹಿತಿ ನೀಡಿದರು.
ಹೊಸಕೆರೆಯಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಮನವಿ:
ತರುವಾಯ ಹೊಸಕೆರೆ ಗ್ರಾಮದಲ್ಲಿರುವ ಕೊಳವೆ ಬಾವಿಯಲ್ಲಿ ಒಂದು ಗಂಟೆ ನೀರು ಬಂದು ನಿಂತು ಹೋಗುತ್ತಿದ್ದು, ಗ್ರಾಮದಲ್ಲಿ ಈಗಿನಿಂದಲೇ ನೀರಿಗೆ ಹಾಹಾಕಾರ ಉದ್ಭವಿಸಿದೆ. ಹೊಸ ಬೋರ್‌ವೆಲ್ ಕೊರೆಸಿ ಕೊಡಬೇಕು ಇಲ್ಲವೇ ಹೊಸಕೆರೆ ಗ್ರಾಮದ ಕೆರೆ ಪಕ್ಕದಲ್ಲಿರುವ ಗುಡ್ಡದ ಮೇಲೆ ಹೊಸದಾಗಿ ನೀರಿನ ಟ್ಯಾಂಕ್ ನಿರ್ಮಿಸಿ ಕೆರೆ ನೀರನ್ನು ಟ್ಯಾಂಕಿಗೆ ಭರ್ತಿ ಮಾಡಿ ಪೂರೈಕೆ ಮಾಡುವುದರಿಂದ ಹೊಸಕೆರೆ ಗ್ರಾಮದಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಇದರಿಂದ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಪಂಚಾಯತಿ ಸದಸ್ಯ ಎನ್. ರಂಗಪ್ಪ ಹಾಗೂ ಗ್ರಾಮಸ್ಥರು ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿ ಹೊಸ ಕೊಳವೆ ಬಾವಿ ಕೊರೆಸುವ ಮುನ್ನ ಭೂವಿಜ್ಞಾನಿಗಳಿಂದ ಪರೀಕ್ಷಿಸಿ ಅವರು ಸೂಚಿಸಿ ಜಲಬಿಂದುವಿನಲ್ಲಿಯೇ ಕೊರೆಸಬೇಕು ಎಂದು ಸಲಹೆ ನೀಡಿದರು. ಈಗಾಗಲೇ ತುರ್ತು ಕುಡಿಯುವ ನೀರಿನ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಯನ್ನು ಹಾಗೂ ಹೊಸದಾಗಿ ಬೋರ್‌ವೆಲ್ ಕೊರೆಯಲು ಜಲ ಬಿಂದುವನ್ನು ಗುರುತಿಸಿರುವ ಸ್ಥಳವನ್ನು ಪರಿವೀಕ್ಷಣೆ ಮಾಡಿದರು.
ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಚುನಾವಣೆ ಘೋಷಣೆಯಾದ ನಂತರವೂ ಜನರಿಗೆ ನೀರಿನ ತತ್ವಾರ ಉಂಟಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಕ್ಯಾತಗೊಂಡನಹಳ್ಳಿಯಲ್ಲಿ ಕೊಳವೆ ಬಾವಿ ವೀಕ್ಷಣೆ:
ಕ್ಯಾತಗೊಂಡನಹಳ್ಳಿ ಗ್ರಾಮದಲ್ಲಿ ಪಂಚಾಯತಿ ವತಿಯಿಂದ ಕೊರೆಯಲಾಗಿರುವ ಕೊಳವೆ ಬಾವಿಯಲ್ಲಿ ನೀರಿನ ಉತ್ತಮ ಇಳುವರಿ ಹೊಂದಿರುವ ಬಗ್ಗೆ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರವೀಶ್, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್, ಪಿಡಿಒಗಳಾದ ದಿವಾಕರ್, ಶಿವಕುಮಾರ್ ಹಾಗೂ ರಂಗನಾಥ್, ಮಿಡಿಗೇಶಿ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜು, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದನಗೌಡ, ಪಶುವೈದ್ಯಾಧಿಕಾರಿ ಡಾ. ಮಂಜುನಾಥ್, ತಹಸೀಲ್ದಾರ್ ಸಿಗ್ಬವುತುಲ್ಲಾ ಸೇರಿದಂತೆ ಮತ್ತಿತರ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.