ಗ್ರಾ.ಪಂ.​ ಕಚೇ​ರಿ​ಯಲ್ಲೂ ಈಗ ಕಾಫಿ ಗಿಡ ಲಭ್ಯ!

  • ಗ್ರಾ.ಪಂ.​ ಕಚೇ​ರಿ​ಯಲ್ಲೂ ಈಗ ಕಾಫಿ ಗಿಡ ಲಭ್ಯ!
  • ಮಕ್ಕಂದೂರು ಗ್ರಾ.ಪಂ.ನಲ್ಲಿ ಜಿಲ್ಲೆಯ ಮೊದಲ ನರ್ಸರಿ
  • ಪ್ರಕೃತಿ ಕೃಷಿ ಉತ್ಪಾದಕರಿಂದ 15 ಸಾವಿರ ಗಿಡಗಳ ನರ್ಸರಿ
Coffee plant available now in gramapanchaya kodagurav

ಮಡಿಕೇರಿ (ಜು.26) : ಇನ್ನು ಮುಂದೆ ಗ್ರಾಮ ಪಂಚಾಯಿತಿಯಲ್ಲೂ ಕೂಡ ಕಾಫಿ ಗಿಡ, ಕಾಳು ಮೆಣಸು ಬಳ್ಳಿ ಸೇರಿದಂತೆ ಹಲವು ಬಗೆಯ ತೋಟಗಾರಿಕೆ ಹಾಗೂ ಹಣ್ಣಿನ ಗಿಡಗಳು ದೊರಕಲಿವೆ. ಕೊಡಗು ಜಿಲ್ಲೆಗೆ ಪ್ರಥಮ ಎಂಬಂತೆ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮ ಪಂಚಾಯಿತಿಯಲ್ಲಿ ಸುಮಾರು 15 ಸಾವಿರ ಗಿಡಗಳನ್ನು ಮಾಡಲಾಗಿದ್ದು, ಸ್ಥಳೀಯ ರೈತರಿಗೆ ರಿಯಾಯಿತಿ ದರದಲ್ಲಿ ಗಿಡಗಳು ದೊರಕಲಿದೆ.

ಕೇಂದ್ರ ಸರ್ಕಾರ ಎನ್‌ಆ​ರ್‌​ಎ​ಲ್‌ಎಂ ಯೋಜನೆ(NRLM Mission)ಯು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಸಂಜೀವಿನಿ ಒಕ್ಕೂಟದಡಿಯಲ್ಲಿ ಒಗ್ಗೂಡಿಸಿ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಿ ಆರ್ಥಿಕವಾಗಿ ಸದೃಢಗೊಳಿಸುವ ಕೆಲಸ ಮಾಡುತ್ತಿದೆ.

Subsidy Electricity: ಕಾಫಿ ಬೆಳೆಗಾರಿಗೂ ಸಬ್ಸಿಡಿ ವಿದ್ಯುತ್‌: ಸಿಎಂ ಬೊಮ್ಮಾಯಿ

ಈ ನಿಟ್ಟಿನಲ್ಲಿ ಮಕ್ಕಂದೂರು ಗ್ರಾಮ ಪಂಚಾಯಿತಿಯಿಂದ ಪ್ರಕೃತಿ ಉತ್ಪಾದಕರ ಗುಂಪು ಮಾಡಲಾಗಿದ್ದು, ನರ್ಸರಿ ಮಾಡಲಾಗಿದೆ. ನರ್ಸರಿಯಲ್ಲಿ ಪ್ರಸ್ತುತ ತೀರ್ಥಹಳ್ಳಿ ಅಡಿಕೆ - 800, ಕಾಫಿ - ಡಾಪ್‌ರ್‍ -5000, ರೋಬೊಸ್ಟೊ - 2500, ಅರೇಬಿಕಾ ( ಚಂದ್ರಗಿರಿ ) -2000, ಕಾಚಂಪುಳಿ - 500, ನಿಂಬೆ - 200, ಬಟರ್‌ ಫä›ಟ್‌ (ಬೆಣ್ಣೆ ಹಣ್ಣು ) -1000, ಪನ್ನೀರು ಕರಿ ಮೆಣಸು - 1000 ಸೇರಿ ಒಟ್ಟು 14,200 ಗಿಡಗಳನ್ನು ಮಾಡಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(MGNREGA)ಯಡಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಸಹಯೋಗದಿಂದ, ಪ್ರಾಯೋಗಿಕ ನೆಲೆಯಲ್ಲಿ ಆಯ್ದ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟಗಳಿಗೆ ಇತ್ತೀಚೆಗೆ ತರಬೇತಿ ಕಾರ್ಯಾಗಾರವನ್ನು, ಹೊದ್ದೂರು ಗ್ರಾಮ ಪಂಚಾಯತಿಯ, ವಾಟೆಕಾಡು ಇಲಾಖಾ ಸಸ್ಯ ಕ್ಷೇತ್ರ ,ಸಾಮಾಜಿಕ ಅರಣ್ಯ ವಲಯದಲ್ಲಿ ನೀಡಲಾಗಿತ್ತು.

Chikkamagaluru ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು

ನರ್ಸರಿ ಕಾರ್ಯಾಚರಣೆ, ಗಿಡಗಳನ್ನು ಬೆಳೆಸುವ ವಿಧಾನ, ಅದರ ಸೂಕ್ತ ನಿರ್ವಹಣೆಯನ್ನು ಕಸಿ ಕಟ್ಟುವ ವಿಧಾನ, ಗೊಬ್ಬರಗಳ ಆಯ್ಕೆ ಹೀಗೆ ವಿವಿಧ ರೀತಿಯಲ್ಲಿ ಗಿಡಗಳನ್ನು ಅಭಿವೃದ್ಧಿಪಡಿಸುವ ಕುರಿತು ಪ್ರಾಯೋಗಿಕವಾಗಿ ನರ್ಸರಿ ಮಾಡುವ ಕುರಿತು ಉಪಯುಕ್ತ ಮಾಹಿತಿಯನ್ನು ತರಬೇತಿ ಕಾರ್ಯಾಗಾರದಲ್ಲಿ ಪಡೆದುಕೊಂಡಿದ್ದರು.

ಪ್ರಕೃತಿ ಕೃಷಿ ಉತ್ಪಾದಕರ ಗುಂಪು ತರಬೇತಿ ಪಡೆದ ಮಕ್ಕಂದೂರು ಗ್ರಾಮ ಪಂಚಾಯಿತಿಯ ಸಂಜೀವಿನಿ ಒಕ್ಕೂಟದ 12 ಜನ ಸದಸ್ಯರು ಪ್ರಕೃತಿ ಕೃಷಿ ಉತ್ಪಾದಕರ ಗುಂಪು ಎಂಬ ಹೆಸರಿನ ಮೂಲಕ ನರ್ಸರಿ ಮಾಡಿ ಒಗ್ಗೂಡಿದ್ದಾರೆ.

ಲೀಸ್‌ ಗೆ ಜಾಗ: ಗುಂಪಿನ ಸದಸ್ಯರೊಬ್ಬರ ಬರಡಾಗಿದ್ದ ಅರ್ಧ ಎಕರೆ ಜಮೀನನ್ನು ಉತ್ಪಾದಕರ ಗುಂಪಿನ ಮೂಲಕ ಲೀಸ್‌ಗೆ ಪಡೆದುಕೊಂಡು, ಕೊಡಗಿನಲ್ಲಿ ಪ್ರಥಮ ಎಂಬಂತೆ ಸಂಜೀವಿನಿ ಒಕ್ಕೂಟದ ಸದಸ್ಯರು ಒಗ್ಗೂಡಿ ಮಕ್ಕಂದೂರು ಗ್ರಾಮದ ಅರಮನೆ ಎಂಬ ಸ್ಥಳದಲ್ಲಿ ನರ್ಸರಿ ಮಾಡಿದ್ದಾರೆ.

ಮೊದಲ ಹಂತದಲ್ಲಿ ಬರಡಾಗಿದ್ದ ಭೂಮಿಯನ್ನು ಸ್ವಚ್ಛ ಗೊಳಿಸಿ ಸಮತಟ್ಟುಗೊಳಿಸಿ ಶೇಡ್‌ ನೆಟ್‌ ಬಳಸಿ , ಹಸಿರು ಮನೆಯನ್ನು ನಿರ್ಮಿಸಿದ್ದಾರೆ. ನಂತರ ಉತ್ತಮ ಗುಣಮಟ್ಟವುಳ್ಳ ತಳಿಯ ಬೀಜ ಹಾಗೂ ಒಳ್ಳಿಯನ್ನು ಆಯ್ದು ಸೂಕ್ತವಾದ ರೀತಿಯಲ್ಲಿ ಸಂಸ್ಕರಿಸುತ್ತಾರೆ. ನಂತರ ಪಾಲಿಥೈನ್‌ ಪ್ಲಾಸ್ಟಿಕ್‌ ಚೀಲವನ್ನು ಖರೀದಿಸಿ, ಒಣಗಿದ , ಶುದ್ಧೀಕರಣಗೊಂಡ ಉತ್ತಮ ಗುಣ ಮಟ್ಟದ ಮಣ್ಣು , ಮರಳು, ಸಾವಯವ ಗೊಬ್ಬರವನ್ನು ಆಯ್ದು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ಪ್ಲಾಸ್ಟಿಕ್‌ನಲ್ಲಿ ತುಂಬಿಸುವ ಕೆಲಸವನ್ನು ಶುರು ಮಾಡುತ್ತಾರೆ. ಕ್ರಮದಲ್ಲಿ ಸಂಸ್ಕರಿಸಿದ ಬೀಜ ಬಿತ್ತನೆಯನ್ನು ಮಾಡಿ ತಾತ್ಕಾಲಿಕ ಪಾತಿಯಲ್ಲಿ ವ್ಯವಸ್ಥಿತವಾಗಿ ಜೋಡಿಸಿ ನೀರನ್ನು ಅಗತ್ಯಕ್ಕೆ ತಕ್ಕಂತೆ ಒದಗಿಸಿ, ರೋಗ ಹಾಗೂ ಕೀಟ ಭಾದೆಯನ್ನು ನಿಯಂತ್ರಿಸಲು ಸಸ್ಯ ಸಂರಕ್ಷಣಾಕ್ರಮ ಅನುಸರಿಸುವ ಮೂಲಕ ಗಿಡಗಳ ಪೋಷಣೆಯಲ್ಲಿ ತೊಡಗಿದ್ದಾರೆ.

ವಿವಿಧ ಗಿಡ ಬೆಳೆಸುವ ಉದ್ದೇಶ ; ಮುಂದಿನ ದಿನಗಳಲ್ಲಿ ಕಾಳುಮೆಣಸು, ಕಾಫಿ, ಹಣ್ಣಿನ ಗಿಡಗಳು, ಅಲಂಕಾರಿಕ ಹೂವಿನ ಗಿಡಗಳು, ಅಡಕೆ, ಬಾಳೆ, ಏಲಕ್ಕಿ, ಕಾಂಚಂಪುಳಿ, ಬಟರ್‌ ಫä›ಟ್‌, ನಿಂಬೆ ಗಿಡ ಸೇರಿ ಹಲವು ಗಿಡಗಳ ನರ್ಸರಿ ಮಾಡಲು ಉದ್ದೇಶಿಸಲಾಗಿದೆ.

ಸಂಜೀವಿನ ಒಕ್ಕೂಟದ ಸದಸ್ಯರು ಪ್ರಕೃತಿ ಕೃಷಿ ಉತ್ಪಾದಕರ ಗುಂಪು ಎಂದು ಹೆಸರಿಟ್ಟು ಗ್ರಾ.ಪಂ.ನಿಂದ ನರ್ಸರಿ ಆರಂಭಿಸಿದ್ದೇವೆ. ಈಗಾಗಲೇ ತರಬೇತಿ ಪಡೆದು 12 ಮಂದಿ ನರ್ಸರಿ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ. ಕಾಫಿ, ಕಾಳುಮೆಣಸು ಸೇರಿ ವಿವಿಧ 15 ಸಾವಿರ ಗಿಡಗಳನ್ನು ಮಾಡಿದ್ದೇವೆ. ಮುಂದಿನ ಬಾರಿ ವಿವಿಧ ಹಣ್ಣಿನ ಗಿಡಗಳ ನರ್ಸರಿ ಕೂಡ ಮಾಡಲಾಗುವುದು.

-ಲೀಲಾವತಿ, ಕೃಷಿ ಸಖಿ, ಸಂಜೀವಿನಿ ಒಕ್ಕೂಟ ಮಕ್ಕಂದೂರು

ಗ್ರಾ.ಪಂ. ನಿಂದ ಸಂಜೀವಿನಿ ಒಕ್ಕೂಟದ ಸದಸ್ಯರು ಗಿಡಗಳ ನರ್ಸರಿ ಮಾಡಿದ್ದಾರೆ. ಅವರ ವೇತನ ಸೇರಿ ನರ್ಸರಿಗೆ 70 ಸಾವಿರ ರು. ಖರ್ಚಾಗಿದೆ. ಗಿಡಗಳನ್ನು ಸ್ಥಳೀಯರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ವಿವಿಧ ಗಿಡಗಳನ್ನು ಮಾಡಿ ನರ್ಸರಿಯನ್ನು ಮತ್ತಷ್ಟುಅಭಿವೃದ್ಧಿ ಪಡಿಸಲಾಗುವುದು.

-ದಿನೇಶ, ಪಿಡಿಒ, ಮಕ್ಕಂದೂರು ಗ್ರಾಮ ಪಂಚಾಯಿತಿ.

Latest Videos
Follow Us:
Download App:
  • android
  • ios