ಕಾಫಿ ಹೊಸ ಚಿನ್ನದ ಬೆಳೆ: ಕೇಂದ್ರ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್

ಕಾಫಿ ಹೊಸ ಚಿನ್ನದ ಬೆಳೆಯಾಗಿ ಗೋಚರಿಸುತ್ತಿದೆ. ಕಾಫಿ ಬೆಳೆಯಿಂದ ಸುಮಾರು 10 ಸಾವಿರ ಕೋಟಿ ಆದಾಯ ಕೇಂದ್ರ ಸರ್ಕಾರಕ್ಕೆ ಬರುತ್ತಿದೆ. ಬ್ರಿಟೀಷರು ಟೀ ಮಾರುಕಟ್ಟೆ ಸೃಷ್ಟಿಸಲು ಉಚಿತವಾಗಿ ಹಂಚುತ್ತಿದ್ದರು. ಇಂತಹ ಪ್ರಯತ್ನಗಳು ಕಾಫಿ ಬೆಳೆಯುವವರಿಂದ ನಡೆಯಬೇಕು. ನಿರಂತರ ಸಂಶೋಧನೆಯ ನಡೆಸುವ ಮೂಲಕ ಪ್ರಪಂಚದಲ್ಲೇ ಉತ್ತಮ ಕಾಫಿ ನಮ್ಮದಾಗಬೇಕು: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್ 
 

Coffee is the new golden crop Says Union Minister Piyush Goyal grg

ಸಕಲೇಶಪುರ(ಡಿ.24):  ಕಾಫಿ ಬೆಳೆಗಾರರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಪ್ರಮಾಣಿಕ ಪ್ರಯತ್ನ ನಡೆಯಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್ ಹೇಳಿದರು.

ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಹಮ್ಮಿಕೊಂಡಿದ್ದ ಕಾಫಿ ಕೃಷಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕಾಫಿ ಹೊಸ ಚಿನ್ನದ ಬೆಳೆಯಾಗಿ ಗೋಚರಿಸುತ್ತಿದೆ. ಕಾಫಿ ಬೆಳೆಯಿಂದ ಸುಮಾರು ೧೦ ಸಾವಿರ ಕೋಟಿ ಆದಾಯ ಕೇಂದ್ರ ಸರ್ಕಾರಕ್ಕೆ ಬರುತ್ತಿದೆ. ಬ್ರಿಟೀಷರು ಟೀ ಮಾರುಕಟ್ಟೆ ಸೃಷ್ಟಿಸಲು ಉಚಿತವಾಗಿ ಹಂಚುತ್ತಿದ್ದರು. ಇಂತಹ ಪ್ರಯತ್ನಗಳು ಕಾಫಿ ಬೆಳೆಯುವವರಿಂದ ನಡೆಯಬೇಕು. ನಿರಂತರ ಸಂಶೋಧನೆಯ ನಡೆಸುವ ಮೂಲಕ ಪ್ರಪಂಚದಲ್ಲೇ ಉತ್ತಮ ಕಾಫಿ ನಮ್ಮದಾಗಬೇಕು ಎಂದರು.

ಉಪಗ್ರಹದ ಸಹಾಯ:

ಸ್ಥಗಿತಗೊಂಡಿರುವ ಇನ್ಟೀಗ್ರೇಟಡ್ ಡೇವಲಫೆಂಟ್ ಯೋಜನೆ ಮರು ಆರಂಭಿಸಲಿದ್ದೇವೆ ಎಂದರು. ಸಬ್ಸಿಡಿಗಾಗಿ ೧೦೦ ಕೋಟಿ ಅನುದಾನದ ಬೇಡಿಕೆ ಇದ್ದು ಹಣಕಾಸು ಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲಿದ್ದೇನೆ. ಕಾಡಾನೆ ಸಮಸ್ಯೆಗೆ ಉಪಗ್ರಹದ ಸಹಾಯ ಪಡೆದು, ಆನೆ ತಜ್ಞ ಸುರೇಂದ್ರ ವರ್ಮಾ ನೇತೃತ್ವದಲ್ಲಿ ಸಮಿತಿ ರಚಿಸಿ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಹೆಚ್ಚಿನ ಬೆಳೆಗಾರರು ಕೆನಾರ ಬ್ಯಾಂಕ್‌ನಲ್ಲಿ ಸಾಲಮಾಡಿದ್ದು ಸಾಲಸುಸ್ತಿದಾರರ ಸಹಾಯಕ್ಕಾಗಿ ಡಿಸಂಬರ್ ೨೬,೨೭ರಂದು ಕಾಫಿ ಬೆಳೆಯುವ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು ಹಾಗೂ ಕೂಡಗಿನಲ್ಲಿ ಲೋಕ್‌ ಅದಾಲತ್ ನಡೆಸಲು ಸೂಚಿಸಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಉತ್ತಮ ಕಾಫಿಯಿಂದ ಉತ್ತಮ ದರ:

ಕಾಫಿ ಬೆಳೆಗಾರರಿಗೆ ಪ್ರಮುಖವಾಗಿ ಕಾಡುತ್ತಿರುವ ಕಾರ್ಮಿಕರ ಸಮಸ್ಯೆ ನಿವಾರಣೆಗಾಗಿ ಆಧುನಿಕ ಯಂತ್ರೋಪಕರಣಗಳ ಉಪಯೋಗ ಪಡೆಯಬೇಕು. ಸಣ್ಣ ಕಾಫಿ ಬೆಳೆಗಾರರು ಆಧುನಿಕ ಯಂತ್ರೋಪಕರಣಗಳ ಫಲ ಪಡೆಯಲು ಸಹಕಾರ ಇಲಾಖೆಯ ಮೂಲಕ ಗುಂಪು ಯೋಜನೆ ಜಾರಿಗೊಳಿಸಲಾಗುವುದು. ಉತ್ತಮ ಕಾಫಿ ಬೆಳೆದರೆ ಉತ್ತಮ ದರ ದೊರೆಯಲಿದೆ. ಆದ್ದರಿಂದ ಇಂತಹ ಪ್ರಯತ್ನದಲ್ಲಿ ಬೆಳೆಗಾರರು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಫಿ ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ಸಕ್ರಿಯ ನಡೆಯಿಂದಾಗಿ ಇಂದು ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬರಲು ಕಾರಣವಾಗಿದೆ. ಮಂಡಳಿಯ ಅಧ್ಯಕ್ಷರ ಮಾತುಗಳನ್ನು ಚಾಚುತಪ್ಪದೆ ಪಾಲಿಸಬೇಕು ಎಂದು ಮಂಡಳಿಯ ಕಾರ್ಯದರ್ಶಿಗೆ ಸೂಚಿಸಿದರು. ಕರ್ನಾಟಕ ಬೆಳೆಗಾರರ ಒಕ್ಕೂಟ ಸಮಸ್ಯೆ ನಿವಾರಣೆಗಾಗಿ ಉತ್ತಮ ಕೆಲಸ ಮಾಡುತ್ತಿದೆ ಕಾಫಿ ಬೆಳೆಗಾರರ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ನನ್ನನ್ನು ಭೇಟಿ ಮಾಡಬಹುದು ಎಂದರು.

ದೇವೇಗೌಡರ ಶ್ರಮವಿದೆ:

ಕೇಂದ್ರ ಉಕ್ಕು ಮತ್ತು ಗಣಿ ಸಚಿವ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, ಕಾಫಿ ಬೆಳೆ ಉತ್ತೇಜನಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವು ಕೇಂದ್ರ ಸರ್ಕಾರಿದಂದ ದೊರಕಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು. ಕಾಫಿ ಬೆಳೆಗಾರರ ಸಮಸ್ಯೆ ಅರಿವಿದೆ. ಕಾಫಿ ಬೆಳೆಯನ್ನು ಮುಕ್ತಮಾರುಕಟ್ಟೆಗೆ ತೆರೆದುಕೊಳ್ಳಲು ಎಚ್.ಡಿ ದೇವೇಗೌಡರ ಶ್ರಮವಿದೆ. ಕಾಫಿ ಬೆಳೆ ಮುಕ್ತಮಾರುಕಟ್ಟೆಗೆ ತೆರೆದುಕೊಂಡ ದಿನದಿಂದಲೂ ಬೆಳೆಗಾರರು ಹಲವು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೇಂದ್ರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಸಾಕಷ್ಟು ಸಮಸ್ಯೆಗಳು ಇಂದಿನವರೆಗೂ ಪರಿಹಾರ ದೊರಕಿರಲಿಲ್ಲ. ಆದರೆ, ಬೆಳೆಗಾರರ ಸಾಕಷ್ಟು ಸಮಸ್ಯೆಗಳಿಗೆ ಪ್ರಸಕ್ತ ಸರ್ಕಾರ ಸ್ಪಂದಿಸುತ್ತಿದೆ. ಕಾಡಾನೆ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಶ್ರೀಲಂಕಾ ಮಾದರಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸುವ ಬಗ್ಗೆ ಪ್ರಸ್ತಾವನೆ ಇದೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಾಕಿ ಉಳಿದಿರುವ ಹಲವು ಯೋಜನೆಗಳು ಪೂರ್ಣಗೊಳಿಸಲಾಗುವುದು ಎಂದರು.

೨೧ ಸಾವಿರ ಅರ್ಜಿಗಳು:

ಸಂಸದ ತೇಜಸ್ವಿಸೂರ್ಯ ಮಾತನಾಡಿ, ಕಾಫಿ ಬೆಳೆಗಾರರ ಪ್ರತಿ ಸಮಸ್ಯೆಗೂ ನಾನು ಸದಾ ಕೈಜೋಡಿಸುತ್ತಿದ್ದೇನೆ. ಹೊರಪ್ರಪಂಚಕ್ಕೆ ಕಾಫಿ ಬೆಳೆಗಾರರು ಶ್ರೀಮಂತರು ಎಂಬ ಭಾವನೆ ಇದೆ. ಆದರೆ, ಇದು ಸತ್ಯವಲ್ಲ, ದೇಶದಲ್ಲಿ ಕಾಫಿ ಬೆಳೆಯುವ ಶೇ. ೯೮ರಷ್ಟು ಬೆಳೆಗಾರರು ಸಣ್ಣ ಬೆಳೆಗಾರರಾಗಿದ್ದು ಇಂದಿಗೂ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಯಾವುದೇ ಸೌಲಭ್ಯಗಳು ಸಣ್ಣ ಬೆಳೆಗಾರರಿಗೆ ದೊರಕದಾಗಿದೆ. ಆದ್ದರಿಂದ, ಸೌಲಭ್ಯ ಕಲ್ಪಿಸುವ ವೇಳೆ ಇರುವ ತಾರತಮ್ಯ ನೀತಿಯನ್ನು ರದ್ದುಗೊಳಿಸಬೇಕು. ಸಬ್ಸಿಡಿಗಾಗಿ ೨೧ ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ನೀಡಿರುವುದು ೯೫ ಕೋಟಿ ಮಾತ್ರ. ಆದ್ದರಿಂದ ಇನ್ನೂ ೧೦೦ ಕೋಟಿ ಅನುದಾನ ನೀಡಬೇಕು ಎಂದರು. ಕಾಫಿ ಮಂಡಳಿ ಅಧ್ಯಕ್ಷರು ಕಾಫಿ ಬೆಳೆಗಾರರ ವಲಯದಿಂದ ಬಂದಿದ್ದರು ಇವರಿಗೆ ಮಂಡಳಿಯಲ್ಲಿ ಅಧಿಕಾರವೇ ಇಲ್ಲದಾಗಿದೆ. ಆದ್ದರಿಂದ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಇಂದು ಕಾಫಿತೋಟಗಳಿಗೆ ಕೆಲಸಕ್ಕೆಂದು ಅಸ್ಸಾಂನಿಂದ ಕಾರ್ಮಿಕರು ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಬಾಂಗ್ಲಾದೇಶದ ನುಸುಳುಕೋರರಾಗಿದ್ದಾರೆ. ಈ ಸಮಸ್ಯೆ ಗಂಭೀರವಾಗಿದ್ದು ಕೇಂದ್ರ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಕಾಡಾನೆ ಸಮಸ್ಯೆ ಕಾಫಿ ಬೆಳೆಗಾರರ ಜೀವಕ್ಕೆ ಮಾರಕವಾಗಿದೆ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ ಕಾಫಿ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಹಲವು ಸಮಸ್ಯೆಗಳ ಸುಳಿಯ ಮಧ್ಯೆ ಅನಿವಾರ್ಯವಾಗಿ ಕಾಫಿ ಬೆಳೆಯಲಾಗುತ್ತಿದೆ. ಈ ಬಾರಿ ಧಾರಣೆ ಇದೆ. ಆದರೆ, ಅತಿಯಾದ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಆದ್ದರಿಂದ, ಕಾಫಿ ಬೆಳೆ ಉಳಿಯಲು ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಬೇಕು ಎಂದರು.

ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ.ಎಚ್.ಟಿ ಮೋಹನ್‌ ಕುಮಾರ್ ಮಾತನಾಡಿ, ಕಾಫಿಯನ್ನು ಸರ್ಫಸಿ ಕಾನೂನಿಂದ ಹೊರಗಿಡಬೇಕು, ಆನೆಹಾವಳಿ ಶಾಶ್ವತ ಪರಿಹಾರ ಕಲ್ಪಿಸಬೇಕು, ಎನ್‌ಡಿಆರ್‌ಎಫ್‌ ಅನುದಾನವನ್ನು ೧೦ ರಿಂದ ೫೦ ಸಾವಿರಕ್ಕೆಏರಿಕೆ ಮಾಡಬೇಕು. ಡೀಮ್ಡ್‌ ಅರಣ್ಯದಿಂದ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಡೀಮ್ಡ್‌ ಅರಣ್ಯವನ್ನು ಕೈಬಿಡುವ ಮೂಲಕ ಕಂದಾಯ ಭೂಮಿಯನ್ನಾಗಿ ಘೋಷಿಸಬೇಕು. ಸೆಕ್ಷನ್ ೪ ಇತ್ಯರ್ಥಗೊಳಿಸಿಕೊಡಬೇಕು ಎಂದು ಕೇಂದ್ರ ಮಂತ್ರಿಗಳಲ್ಲಿ ಮನವಿ ಮಾಡಿದರು.

ಗಮನ ಸೆಳೆದ ಕೃಷಿ ವಸ್ತುಪ್ರದರ್ಶನ:

ಕಾಫಿ ಬೆಳೆಗಾರರ ಸಮಾವೇಶದಲ್ಲಿ ಆಯೋಜಿಸಲಾಗಿದ್ದ ಆಧುನಿಕ ಕೃಷಿ ಯಂತ್ರೋಪಕರಣಗಳ ವಸ್ತುಪ್ರದರ್ಶನವನ್ನು ಸಾವಿರಾರು ಮಂದಿ ಬೆಳೆಗಾರರು ವೀಕ್ಷಿಸಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಂಸದ ಶ್ರೇಯಸ್‌ ಪಟೇಲ್, ಸೋಮವಾರಪೇಟೆ ಶಾಸಕ ಮಂಥರ್‌ ಗೌಡ, ಬೇಲೂರು ಶಾಸಕ ಸುರೇಶ್, ಕಾಫಿಮಂಡಳಿ ಕಾರ್ಯದರ್ಶಿ ಡಾ. ಜಗದೀಶ್, ಸಂಭಾರ ಮಂಡಳಿ ಉಪಾಧ್ಯಕ್ಷ ಸತ್ಯ, ಮಾಜಿ ಶಾಸಕಿ ಮೋಟಮ್ಮ, ಮಾಜಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಎಚ್.ಎಂ ವಿಶ್ವನಾಥ್, ಲಿಂಗೇಶ್‌ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಸ್ತೂರಿ ರಂಗನ್ ವರದಿಯನ್ನು ಮರುಪರಿಶೀಲನೆಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಬೆಳೆಗಾರರ ವಲಯಕ್ಕೆ ಮಾರಕವಾಗಿರುವ ಈ ವರದಿಯನ್ನು ರದ್ದುಗೊಳಿಸಬೇಕು ಎಂದು ಸೋಮವಾರಪೇಟೆ ಶಾಸಕ ಮಂಥರ್‌ ಗೌಡ ಹೇಳಿದ್ದಾರೆ.  

ಭಾರತದ ಕಾಫಿಗೆ ವಿಶ್ವಮಟ್ಟದಲ್ಲಿ ಹೆಸರು ಗಳಿಸಲು ಇಂದಿನ ಕೇಂದ್ರ ವಾಣಿಜ್ಯ ಸಚಿವರು ಕಾರಣರಾಗಿದ್ದಾರೆ. ಕಾಫಿ ಬೆಳೆಗಾರರು ಎದುರಿಸುತ್ತಿರುವ ಹವಮಾನ, ಕಾಡಾನೆ ಸಮಸ್ಯೆ, ಮಾರುಕಟ್ಟೆ ಸೃಷ್ಟಿ, ಕಾರ್ಮಿಕರ ಅಭಾವ ತಪ್ಪಿಸುವ ನಿಟ್ಟಿನಲ್ಲಿ ಕಾಫಿ ಮಂಡಳಿ ಕೆಲಸ ಮಾಡುತ್ತಿದೆ. ಭಾರತದ ಕಾಫಿಯನ್ನು ವಿಶ್ವದ ಶ್ರೇಷ್ಠ ಕಾಫಿಯನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios