ಮಂಗಳೂರು: ಸಮುದ್ರ ಮಧ್ಯೆ ನೌಕೆಯಲ್ಲಿ ಕುಸಿದುಬಿದ್ದ ಸಿಬ್ಬಂದಿ ರಕ್ಷಿಸಿದ ಕೋಸ್ಟ್‌ಗಾರ್ಡ್ ತಂಡ
ಸೈಬೀರಿಯಾದ ತೈಲ ಸಾಗಾಟ ನೌಕೆಯಲ್ಲಿ ಕುಸಿದು ಬಿದ್ದ ಸಿಬ್ಬಂದಿಯನ್ನು ಕೋಸ್ಟ್‌ಗಾರ್ಡ್ ತಂಡ ರಕ್ಷಿಸಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದೆ.
ಮಂಗಳೂರು(ಡಿ.28): ಮಂಗಳೂರು ಸಮುದ್ರದಲ್ಲಿ ಲಂಗರು ಹಾಕಿದ್ದ ಸೈಬೀರಿಯಾದ ತೈಲ ಸಾಗಾಟ ನೌಕೆಯಲ್ಲಿ ಕುಸಿದು ಬಿದ್ದ ಸಿಬ್ಬಂದಿಯನ್ನು ಕೋಸ್ಟ್‌ಗಾರ್ಡ್ ತಂಡ ರಕ್ಷಿಸಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದೆ. ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ)ನಿಂದ 9.5 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ತೈಲ ನೌಕೆಯಲ್ಲಿ ಸಿಬ್ಬಂದಿ ತೀವ್ರ ಅನಾರೋಗ್ಯಕ್ಕೆ ಒಳಗಾದ ಬಗ್ಗೆ ಕೋಸ್ಟ್ ಗಾರ್ಡ್‌ಗೆ ಮಧ್ಯರಾತ್ರಿ 12.30ರ ಸುಮಾರಿಗೆ ತುರ್ತು ಕರೆ ಬಂದಿತ್ತು. ಎಂಟಿ ಐವರಿ ರೇ ಹೆಸರಿನ ತೈಲ ನೌಕೆಯಲ್ಲಿದ್ದ ಸಿಬ್ಬಂದಿ ರಾತ್ರಿ ವಾಶ್ ರೂಮ್‌ನಲ್ಲಿದ್ದಾಗ ಏಕಾಏಕಿ ಕುಸಿದುಬಿದ್ದಿದ್ದರು. ಕೂಡಲೇ ನೌಕೆಯಲ್ಲಿದ್ದವರು ಕರ್ನಾಟಕ ಕೋಸ್ಟ್‌ಗಾರ್ಡ್‌ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಕೋಸ್ಟ್‌ಗಾರ್ಡ್ ಸಿಬ್ಬಂದಿ ಇಂಟರ್‌ಸೆಪ್ಟರ್ ಬೋಟ್‌ನಲ್ಲಿ ವೈದ್ಯರ ಸಹಿತ ತೈಲ ನೌಕೆ ಬಳಿಗೆ ತೆರಳಿದ್ದಾರೆ. ನಸುಕಿನ 2.10ರ ವೇಳೆಗೆ ನೌಕೆಯನ್ನು ತಲುಪಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಬ್ಬಂದಿಗೆ ತುರ್ತು ಚಿಕಿತ್ಸೆ ನೀಡಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
13 ದಿನಗಳ ಹಿಂದೆ ಈ ನೌಕೆ ದಕ್ಷಿಣ ಆಫ್ರಿಕಾದ ಲೈಬೇರಿಯಾದಿಂದ ಕೆಂಪು ಸಮುದ್ರ ಮೂಲಕ ಮಂಗಳೂರಿಗೆ ಆಗಮಿಸಿತ್ತು. ಎನ್‌ಎಂಪಿಎ ಒಳಗೆ ಪ್ರವೇಶಿಸಲು ಸಿಗ್ನಲ್ ಸಿಗದೇ ಇದ್ದುದರಿಂದ ಸಮುದ್ರ ಮಧ್ಯೆ ಲಂಗುರ ಹಾಕಿತ್ತು.