ಗದಗ(ಏ.18): ರಾಜ್ಯದಲ್ಲಿ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲೆಗೊಂದು ಕೊರೋನಾ ಟೆಸ್ಟಿಂಗ್‌ ಲ್ಯಾಬ್‌ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಆಗ್ರಹಿಸಿದ್ದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಶಾಸಕ ಎಚ್‌.ಕೆ. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 23ರಂದೇ ಈ ವಿಷಯವಾಗಿ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿಗೆ ಒತ್ತಾಯಿಸಿದ್ದೆ, ಈ ವಿಚಾರವಾಗಿ ಮುಖ್ಯಮಂತ್ರಿಗೆ ಹಲವಾರು ಬಾರಿ ದೂರವಾಣಿ ಮೂಲಕವೂ ಗಮನಕ್ಕೆ ತಂದಿದ್ದೇನೆ. ಆದರೆ, ಶುಕ್ರವಾರ ಹುಬ್ಬಳ್ಳಿಯ ಕೆಎಂಸಿಯಲ್ಲಿ ಲ್ಯಾಬೋರೆಟರಿ ಪ್ರಾರಂಭಿಸಿದ್ದನ್ನು ಬಿಟ್ಟರೆ ಬೇರೆ ಎಲ್ಲಿಯೂ ಪ್ರಾರಂಭಿಸಿಲ್ಲ, ಇದು ಸರ್ಕಾರದ ಬೇಜವಾಬ್ದಾರಿ ಅನ್ನದೇನೆ ಇನ್ನೇನನ್ನಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ಶಂಕಿತರನ್ನು ಕರೆತಂದು PPE ಕಿಟ್‌ ಬೇಕಾಬಿಟ್ಟಿ ಬಿಸಾಡಿದ ಆ್ಯಂಬುಲೆನ್ಸ್‌ ಚಾಲಕ

ಜಿಲ್ಲೆಯಲ್ಲಿ ಈಗಾಗಲೇ 2 ಕೊರೋನಾ ಪಾಸಿಟಿವ್‌ ಪ್ರಕರಣ ಬಂದಿವೆ. ಸರ್ಕಾರ ಗದುಗಿಗೆ ಈ ವರೆಗೂ ಟೆಸ್ಟಿಂಗ್‌ ಕಿಟ್‌ ನೀಡದೇ ಇರುವುದು ದುರ್ದೈವ ಸಂಗತಿ. ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಮೂರು ಇಕ್ಯುಪ್‌ಮೆಂಟ್‌ಗಳಿವೆ. ಆದರೆ, ಇವತ್ತಿನ ವರೆಗೂ ಐಸಿಎಂನವರು ಪರವಾನಗಿ ನೀಡುತ್ತಿಲ್ಲ. ನೋಡೆಲ… ಆಫೀಸರ್‌ ನಿಷ್ಕಾಳಜಿಯ ಉತ್ತರ ನೀಡುತ್ತಿದ್ದಾರೆ. ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿ ಆಕಸ್ಮಿಕವಾಗಿ ಅಸು ನೀಗಿದ ಜನರ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕೆಲವರ ಟೆಸ್ವ್‌ ರಿಪೋರ್ಟ್‌ ಬರದೇ ಇರುವುದು. ಹೀಗಾದರೆ ಆಕಸ್ಮಿಕವಾಗಿ ಮೃತಪಟ್ಟಕುಟುಂಬಗಳ ಪರಿಸ್ಥಿತಿ ಏನಾಗಬೇಡ? ಇದಕ್ಕೆ ಸರ್ಕಾರ ಏನು ಉತ್ತರ ಕೊಡುತ್ತದೆ? ಎಂದು ಪ್ರಶ್ನಿಸಿದರು.

ಇನ್ನು ಪಿಪಿಇ ಕಿಟ್‌ಗಳು ರಾಜ್ಯದ ಎಲ್ಲ ಕಡೆಯೂ ಲಭ್ಯವಾಗುವಂತಾಗಲಿ. ಆಸ್ಪತ್ರೆಗಳು ಕೋವಿಡ್‌- 19 ಎದುರಿಸಲು ಸಿದ್ಧವಾಗಿರಲಿ ಎಂದು ಹಲವಾರು ಬಾರಿ ಹೇಳುತ್ತಲೇ ಬಂದಿದ್ದೇನೆ. ಆದರೆ, ಸರ್ಕಾರ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮೈಸೂರಿನಂಥ ಜಿಲ್ಲೆಯಲ್ಲಿ ಟೆಸ್ವ್‌ಗಳು 400 ರಷ್ಟು ಬಾಕಿ ಇವೆ ಎಂದರೆ ಏನರ್ಥ? ಸರ್ಕಾರ ಎಷ್ಟು ಬೇಗ ಬೇಗ ಟೆಸ್ಟ್‌ ಮಾಡಬೇಕೋ ಅಷ್ಟೊಂದು ವೇಗದಲ್ಲಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲ ವಿಷಯವಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದರು.