Asianet Suvarna News Asianet Suvarna News

ಕೇಂದ್ರದ ಪರಿಸರ ಮಂಡಳಿ ಅನುಮತಿ ನೀಡಿದ್ರೆ ನಾಳೆಯಿಂದಲೇ ಕಳಸಾ ಬಂಡೂರಿ ಕಾಮಗಾರಿ ಆರಂಭ: ಸಿಎಂ ಸಿದ್ದು

ಬಸವಾದಿ ಶರಣರು ನುಡಿದಂತೆ ನಡೆದಂತ್ತವರು. ಅವರ ಹಾದಿಯಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದು: ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah talks Over Kalasa Banduri Project grg
Author
First Published Feb 24, 2024, 9:27 PM IST

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಫೆ.24):  ಮಹಾದಾಯಿ ಕಳಸಾ ಬಂಡೂರಿ ನಾಲಾ ಯೋಜನೆ ಈ ಭಾಗದ ಜನರ ಬಹುದಿನಗಳ ಕನಸಾಗಿದೆ. ಕೇಂದ್ರದ ಪರಿಸರ ಮಂಡಳಿ ಅನುಮತಿ ನೀಡಿದರೆ ನಾಳೆಯಿಂದಲೇ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಇಂದು(ಶನಿವಾರ) ಜಿಲ್ಲೆಯ ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಗ್ಯಾರೆಂಟಿ ಯೋಜನೆಗಳ ಸಮಾವೇಶ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಅತಿ ಕಿರಿಯ ವಯಸ್ಸಿಗೆ 'ಕಾಶ್ಮೀರಕ್ಕೆ ಸೋಲೋ ರೈಡ್' ಹೋಗಿಬಂದ ದಾಖಲೆ ಮುಡಿಗೇರಿಸಿಕೊಂಡ ಪ್ರತೀಕ್ಷಾ!

ಬಸವಾದಿ ಶರಣರು ನುಡಿದಂತೆ ನಡೆದಂತ್ತವರು. ಅವರ ಹಾದಿಯಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದು. 160 ಕೋಟಿ ಮಹಿಳೆಯರು ಶಕ್ತಿ ಯೋಜನೆ ಲಾಭ ಪಡೆದುಕೊಂಡಿದ್ದಾರೆ. 1.20 ಕೋಟಿ ಕುಟುಂಬಗಳಿಗೆ ತಿಂಗಳಿಗೆ 4 ರಿಂದ 5 ಸಾವಿರ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. 5 ಕೆ.ಜಿ. ಅಕ್ಕಿ ಹೊರತಾಗಿ ರೂ.170 ಹಣವನ್ನು ವಿತರಿಸಲಾಗುತ್ತಿದೆ. ಯುವ ನಿಧಿ ಯೋಜನೆಯಡಿ ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೋಮಾ ಪಾಸಾದವರಿಗೆ ರೂ. 1500 ಹಣ ನೀಡಲಾಗುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳು ಹಣ ಪಡೆಯುತ್ತಿದ್ದಾರೆ. 36 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಖರ್ಚು ಮಾಡಲಾಗಿದೆ. 3,71,383 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ 52 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ. ಬಜೆಟ್ ನಲ್ಲಿ ಕಳೆದ ಬಾರಿಗಿಂತ 43 ಸಾವಿರ ಕೋಟಿ ಹಣವನ್ನು ಹೆಚ್ಚಳ ಮಾಡಲಾಗಿದೆ. ರಾಜ್ಯ ಸುಭದ್ರವಾದರೆ ಕೇಂದ್ರ ಸುಭದ್ರವಾಗಿರಲಿದೆ. ಕೇಂದ್ರವು ಹೆಚ್ಚಿನ ಅನುದಾನ ನೀಡಿದರೆ ಸೇತುವೆ, ರಸ್ತೆ, ನೀರಾವರಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. 

ಇಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಲಾಗಿದೆ. ಶಂಕುಸ್ಥಾಪನೆ ಕಲ್ಲುಗಳನ್ನು ನೋಡಿದರೆ ಗೊತ್ತಾಗಲಿದೆ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂಬುದು. ಅಲ್ಲದೇ ಇಂದು 1385 ಜನ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ. ಎನ್.ಎಚ್. ಕೋನರೆಡ್ಡಿ ಅವರು ಹಿಂದಿನ ಅವಧಿಯಲ್ಲಿ ರೂ. 3 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರು. 2013 ರಿಂದ 2018 ರವರೆಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿತ್ತು. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ವಾರಸುದಾರರು ಎಂದು ತಿಳಿಸಿದರು. 

ಶಾಸಕರಾದ ಎನ್. ಎಚ್. ಕೋನರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನವಲಗುಂದ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅಂದಾಜು ರೂ. 200 ಕೋಟಿ ವೆಚ್ಚದಲ್ಲಿ 62 ಕಾಮಗಾರಿಗಳಿಗೆ  ಶಂಕುಸ್ಥಾಪನೆ, ಭೂಮಿ ಪೂಜೆ ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು. ಮಹಾದಾಯಿ ಕಳಸಾ ಬಂಡೂರಿ ಯೋಜನೆ ಈ ಭಾಗದ ಜನರ ಬಹು ದಿನಗಳ ಕನಸಾಗಿದೆ. ಅದನ್ನು ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಾಗಿದೆ. ಗ್ಯಾರಂಟಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ಶಕ್ತಿ ಯೋಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ 50 ಹೊಸ ಬಸ್ ಗಳನ್ನು ಒದಗಿಸಲಾಗಿದೆ. ಈ ಭಾಗದಲ್ಲಿ ಸುಮಾರು 118 ಕಿ.ಮೀ.ಗಳ 34 ಚಕ್ಕಡಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನು ಮಾಡಲು ಪಣ ತೊಟ್ಟಿದ್ದೇನೆ. 2 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಭಾಗದ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.  

ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಎಸ್. ಲಾಡ್ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. 3 ಲಕ್ಷಕ್ಕೂ ಅಧಿಕ ಜನರು ಗೃಹ ಜ್ಯೋತಿ ಯೋಜನೆ, 4,69,728 ಮಹಿಳೆಯರಿಗೆ ಗೃಹ ಲಕ್ಷ್ಮಿ, 7.39 ಕೋಟಿ ಮಹಿಳೆಯರು ಶಕ್ತಿ ಯೋಜನೆ, 3,37,117 ಜನರು ಅನ್ನಭಾಗ್ಯ ಯೋಜನೆ ಪ್ರಯೋಜನ ಪಡೆದುಕೊಂಡಿರುವರು. ರೂ. 58 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಲಾಗಿದೆ. ಆ ಮೂಲಕ ಭಾರತದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಚಕ್ಕಡಿ ರಸ್ತೆಗಳನ್ನು ಈ ಭಾಗದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ಅಚ್ಚುಕಟ್ಟಾದ ಬಡಾವಣೆ ನಿರ್ಮಿಸಲಾಗುತ್ತಿದೆ. ಈ ಭಾಗ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹೇಳಿದರು.

ಧಾರವಾಡ: ಬಿಟ್ಟಿ ಭಾಗ್ಯಗಳಿಗೆ ಸರ್ಕಾರದಲ್ಲಿದೆ ಹಣ, ನರೇಗಾ ಕಾರ್ಮಿಕರಿಗಿಲ್ಲ ವೇತನ..!

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 50 ಹೊಸ ಬಸ್ ಗಳಿಗೆ ಚಾಲನೆ ನೀಡಿದರು. ಅಣ್ಣಿಗೇರಿ ರಸ್ತೆಯಲ್ಲಿ 1335 ವಸತಿ ನಿವೇಶನಗಳನ್ನು 41 ಎಕರೆ 9 ಗುಂಟೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ವಸತಿ ಬಡಾವಣೆಗಳು ಹಾಗೂ ಇಬ್ರಾಹಿಮಪುರ ರಸ್ತೆಯಲ್ಲಿ ಹೆದ್ದಾರಿ ಮಾದರಿಯಲ್ಲಿ ಚಕ್ಕಡಿ ರಸ್ತೆಗಳ ನಿರ್ಮಾಣ ಮಾಡಿರುವುದನ್ನು ವೀಕ್ಷಿಸಿದರು. ಸಾಂಕೇತಿಕವಾಗಿ ವಿವಿಧ ಯೋಜನೆಗಳ  ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. 

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಹಾಗೂ ಹುಬ್ಬಳ್ಳಿ-ಧಾರವಾಡ ಶಾಸಕರಾದ ಅಬ್ಬಯ್ಯ ಪ್ರಸಾದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. 

Follow Us:
Download App:
  • android
  • ios