CM Siddaramaiah Emotional at HY Meti Funeral ಬಾಗಲಕೋಟೆ ಶಾಸಕ ಎಚ್‌ವೈ ಮೇಟಿ ಅವರ ಅಂತ್ಯಸಂಸ್ಕಾರವು ಅವರ ಹುಟ್ಟೂರಿನಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಮೇಟಿಯವರನ್ನು ಆತ್ಮೀಯ ಸ್ನೇಹಿತ ಎಂದು ಸ್ಮರಿಸಿದರು.

ಬಾಗಲಕೋಟೆ (ನ.5): ಉಸಿರಾಟದ ಸಮಸ್ಯೆಯಿಂದ ಮಂಗಳವಾರ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದ ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ, ಸಂಸದ ಎಚ್‌ವೈ ಮೇಟಿ ಅಂತ್ಯಸಂಸ್ಕಾರ ಬುಧವಾರ ಹುಟ್ಟೂರಲ್ಲಿ ನಡೆಯಿತು. ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಆತ್ಮೀಯನನ್ನು ಕಳೆದುಕೊಂಡು ಭಾವುಕರಾಗಿದ್ದಂತೆ ಕಂಡರು. ಮೃತದೇಹಕ್ಕೆ ಹೂಗುಚ್ಛ ಇರಿಸಿದ ಬಳಿಕ ಮಾತನಾಡಿದ ಅವರು, ಮೇಟಿಗೆ ಮೇಟಿನೇ ಸಾಟಿ. ಅದರಂತೆ ಬದುಕಿದ ವ್ಯಕ್ತಿ ಅವರು' ಎಂದು ಹೇಳಿದರು.

ಮೇಟಿ ಬಹಳ ದೊಡ್ಡ ವಿದ್ಯಾವಂತ ಅಲ್ಲ. ರಾಜಕೀಯ ತತ್ವಗಳನ್ನು ಅನುಸರಿಸುತ್ತಿದ್ದರು. ಜನರ ಸಂಪರ್ಕ ಸದಾ ಹೆಚ್ಚು ಮಾಡಿಕೊಳ್ಳುತ್ತಿದ್ದರು. ಕುರುಬರಾಗಿ ಹುಟ್ಟಿದರೂ ಜಾತ್ಯಾತೀತ ವ್ಯಕ್ತಿಯಾಗಿದ್ದರು. ಎಲ್ಲ ಜಾತಿ ಧರ್ಮದವರನ್ನು ಪ್ರೀತಿಯಿಂದ ಕಾಣುವ ವ್ಯಕ್ತಿ‌. ನನಗೆ ಹೊಳೆಬಸುಶೆಟ್ಟಿ ಕರೆ ಮಾಡಿ ಮೇಟಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ತಿಳಿಸಿದರು. ನನ್ನ ಜೊತೆ ಚೆನ್ನಾಗಿಯೇ ‌ಮಾತಾಡಿದರು. ವೈದ್ಯರು ನನಗೆ ರಿಕವರಿ ಆಗುತ್ತಾರೆ ಎಂದಿದ್ದರು. ನಾನು ‌ನಂಬಿದೆ .ನಂತರ ಮೈಸೂರಿಗೆ ಹೋದೆ ಎಂದು ಹೇಳಿದರು.

ನನಗೆ ಫೋನ್‌ ಮಾಡಿ ಅವರಿಗೆ ಆರೋಗ್ಯ ಗಂಭೀರವಾಗಿದೆ ಎಂದರು. ನೇರವಾಗಿ ಆಸ್ಪತ್ರೆಗೆ ಹೋದೆ ಅಷ್ಟರಲ್ಲಿ ಮೃತರಾದರು. ನನಗೆ ತಡೆಯಲಾರದ ದುಃಖ ಬಂತು. ಅವರ ಸಾವಿನಿಂದ ನನಗೆ ರಾಜಕೀಯವಾಗಿ ದೊಡ್ಡ ನಷ್ಟವಾಗಿದೆ. ಅಷ್ಟೊಂದು ನಿಷ್ಠಾವಂತ ವ್ಯಕ್ತಿ ಅವರು. ನಾನು ಏನೇ ಹೇಳಿದರೂ ಮಾಡ್ತಿದ್ದರು. ನಾವು 1996 ರಲ್ಲಿ ಸರ್ವೆ ಮಾಡಿಸಿದ್ದೆವು. ಮೇಟಿಯವರನ್ನು ನಿಲ್ಲಿಸಿದರೆ ಗೆಲ್ತಾರೆ ಅಂತ ಬಂತು. ಆಗ ನಾನು ಲೋಕಸಭೆಗೆ ನಿಲ್ಲಬೇಕು ಅಂದೆ ಆಯಿತು ಅಂದ್ರು. ನಾನು ಹೇಳಿದ್ದಕ್ಕೆ ಚಕಾರ ಎತ್ತದೆ ನಿಂತರು. ಆದರೆ ಹಿಂದೆ ನನಗೆ ಇಂಗ್ಲಿಷ್ ಹಿಂದಿ ಬರೋದಿಲ್ಲ ಏನು ಮಾಡ್ಲಿ ಅಂದಿದ್ದರು. ಆದರೆ ಗೆದ್ದು ತೋರಿಸಿದರು ಎಂದರು.

ಈ ಸಾರಿ ಗೆದ್ದ ಬಳಿಕವೇ ನಮ್ಮ ನಡುವೆ ಅಂತರವಿತ್ತು

ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಕುರುಬನಾಗಿ ಗೆಲ್ಲೋದು ಕಷ್ಟ. ಆದರೂ ಮೇಟಿಯವರು ಗೆದ್ದರು. ಸಂಭಾವಿತ ರಾಜಕಾರಣಿ ಅಂದರೆ ಅತಿಶಯೋಕ್ತಿಯಲ್ಲ‌ ವೈರಿಗಳ ಜೊತೆಗೂ ಚೆನ್ನಾಗಿ ಇರುತ್ತಿದ್ದರು. ಪಂಚಾಯಿತಿ ಚೇರ್ಮನ್ ಆಗಿ ಮುಂದೆ ಮಂತ್ರಿ ಆಗೋದು ಅಷ್ಟು ಸಾಮಾನ್ಯವಲ್ಲ. ಈ ಸಾರಿ ಗೆದ್ದ ಮೇಲೆ ಹೆಚ್ಚು ನನ್ನ ಬಳಿ ಬರ್ತಿರಲಿಲ್ಲ. ಬಹಳ ಅಪರೂಪಕ್ಕೆ ಬರ್ತಿದ್ದರು. ಮುಖ್ಯ ಕೆಲಸ ಇದ್ದರೆ ಮಾತ್ರವೇ ನನ್ನ ಬಳಿ ಬರುತ್ತಿದ್ದರು. ವೈಯಕ್ತಿಕವಾಗಿ ನನಗೆ ಬಹಳ ನಷ್ಟ ವಾಗಿದೆ. ಫಾಲೋವರ್ಸ್‌ನಲ್ಲಿ ಮೇಟಿಯವರು ಆಗ್ರಗಣ್ಯರು. ಬಹಳ ದುರಾಸೆ ಇದ್ದ ವ್ಯಕ್ತಿಯಲ್ಲ. ಅಪ್ರಾಮಾಣಿಕ ವ್ಯಕ್ತಿಯಲ್ಲ. ಆಸ್ತಿ ಮಾಡುವ ಗುಣ ಹೊಂದಿದವರಲ್ಲ‌. ಅವರ ಕಳೆದುಕೊಂಡು ಬಾಗಲಕೋಟೆ ಬಡವಾಗಿದೆ‌. ನನಗೆ ಬಹಳ ದುಃಖ ತರಬೇಕಾದರೆ. ಅವರ ಕುಟುಂಬಕ್ಕೆ ಅಭಿಮಾನಿಗಳಿಗೆ ಹೇಗಾಗಬೇಕು. ದೇವರು ಅವರ ಅಗಲಿಕೆ ಸಹಿಸುವ ಶಕ್ತಿ ಕೊಡಲಿ. ಅವರಿಗೆ ಭಗವಂತ ಚಿರಶಾಂತಿ ಕೊಡಲಿ. ಹುಟ್ಟು ಆಕಸ್ಮಿಕ ಸಾವು ಖಚಿತ ಎರಡದ ಮಧ್ಯದ ಜೀವನ ಸಾರ್ಥಕ ಮಾಡಿಕೊಂಡಿದ್ದಾರಾ ಅದು ಮುಖ್ಯ. ಮೇಟಿಯವರು ತಮ್ಮ ಜೀವನ ಸಾರ್ಥಕ‌ ಮಾಡಿಕೊಂಡಿದ್ದಾರೆ.‌ ಮೇಟಿಗೆ ಮೇಟಿನೆ ಸಾಟಿ ಅಂತವರನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಬಾಗಲಕೋಟೆಯಲ್ಲಿ ಮೆಡಿಕಲ್‌ ಕಾಲೇಜಿಗೆ ಕಾರಣ ಮೇಟಿ

ಭಾಷಣದ ಮುಗಿದ ಬಳಿಕ ಮತ್ತೆ ವಾಪಸ್ ಮೈಕ್ ಪಡೆದು ಸಿದ್ದರಾಮಯ್ಯ ಭಾಷಣ ಮಾಡಿದರು. ಮೆಡಿಕಲ್ ಕಾಲೇಜು ಆಗಬೇಕು ಅಂದಿದ್ದರು. ಅದನ್ನ ಬಜೆಟ್ ನಲ್ಲೂ ಘೋಷಣೆ ಮಾಡಿದ್ದೆ. ಪಾಪ ಬದುಕಿರಬೇಕಿತ್ತು ಮೆಡಿಕಲ್ ಕಾಲೇಜು ಆಗಬೇಕಿತ್ತು. ನಾನು ಸ್ವಲ್ಪ ವಿಳಂಬ ಮಾಡಿದೆ. ಬಾಗಲಕೋಟೆಯಲ್ಲಿ ಮೆಡಿಕಲ್ ಆಗೋಕೆ ಮೇಟಿ ಕಾರಣ. ಮೆಡಿಕಲ್ ಕಾಲೇಜು ಮಾಡೇ ಮಾಡುತ್ತೇವೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕೂಡಾ ಮಾಡುತ್ತೇನೆ. ಆದರೆ, ಮೇಟಿ ಬದುಕಿರಬೇಕಿತ್ತು, ಅವ್ರಿದ್ದಾಗಲೇ ಶಂಕು ಸ್ಥಾಪನೆ ಆಗಬೇಕಿತ್ತು. ಮೇಟಿ ಅವ್ರ ಬಹಳ ದಿನಗಳ ಕನಸಾಗಿತ್ತು. ಅವರ ಆಸೆಯಂತೆ ಮೆಡಿಕಲ್ ಕಾಲೇಜು ಮಾಡಿದ್ದೇವೆ. ಟೆಂಡರ್ ಆದ ಕೂಡಲೆ ಗುದ್ದಲಿ ಪೂಜೆ, ಶಂಕು ಸ್ಥಾಪನೆ ಮಾಡುತ್ತೇವೆ. ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಆಗೋಕೆ ಮೇಟಿಯೇ ಕಾರಣ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದರು.

ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ಎಚ್‌ವೈ ಮೇಟಿ ಅವರ ಅಂತ್ಯಕ್ರಿಯೆ ಸ್ವಗ್ರಾಮ ತಿಮ್ಮಾಪೂರದಲ್ಲಿ ನಡೆಯಿತು. ಕುರುಬ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ತಂದೆ ತಾಯಿಗಳ ಸಮಾಧಿ ಪಕ್ಕದಲ್ಲೇ ನೆರವೇರಿದ ಎಚ್.ವೈ.ಮೇಟಿ ಅವರ ಅಂತ್ಯಕ್ರಿಯೆ ನಡೆಯಿತು. ಸಿಎಂ ಸಿದ್ದರಾಮಯ್ಯ ಸಚಿವರಾದ ಎಂ.ಬಿ‌.ಪಾಟೀಲ್, ಸತೀಶ ಜಾರಕಿಹೊಳಿ, ಭೈರತಿ ಸುರೇಶ್, ಮಹಾದೇವಪ್ಪ ಮತ್ತು ಪುತ್ರ ಯತೀಂದ್ರ ಸಾಥ್ ನೀಡಿದರು.