ಮೈಸೂರು ಏರ್ಪೋರ್ಟ್‌ ವಿಸ್ತರಣೆ ತ್ವರಿತ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ನಿರ್ದೇಶನ

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತವಾಗಿ ಆಗದೆ ಕುಂಟುತ್ತಿರುವ ಬಗ್ಗೆ ಕೇಂದ್ರದ ಮತ್ತು ರಾಜ್ಯದ ಅಧಿಕಾರಿಗಳನ್ನು ಮುಖ್ಯಮಂತ್ರಿ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ. 

CM Siddaramaiah directs for speedy action on Mysuru Airport expansion

ಬೆಂಗಳೂರು (ಜ.12): ‘ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತ ಅನುಷ್ಠಾನಕ್ಕಾಗಿ ಕೇಂದ್ರ ಸಚಿವರ ಭೇಟಿ, ಮೈಸೂರು ನಗರ ಹಾಗೂ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣ, ಕೊಳಚೆ ನೀರು ಸಂಸ್ಕರಣೆ ಯೋಜನೆಗೆ ಸಿದ್ಧಪಡಿಸಿರುವ 670 ಕೋಟಿ ರು. ಡಿಪಿಆರ್‌ ಅನ್ನು ಸಂಪುಟದ ಮುಂದಿಡುವುದು, ಶಿಥಿಲಗೊಂಡಿರುವ ದೇವರಾಜ ಅರಸು ಮಾರುಕಟ್ಟೆ ತೆರವು, ದಳವಾಯಿ ಕೆರೆ ಹಾಗೂ ಕುಕ್ಕರಳ್ಳಿ ಕೆರೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದು...’ ಇವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರು ಅಭಿವೃದ್ಧಿ ವಿಚಾರವಾಗಿ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಸಂಸದರು ಹಾಗೂ ವಿಧಾನ ಪರಿಷತ್‌ ಸದಸ್ಯರೊಂದಿಗೆ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಮಹತ್ವದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳು.

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತವಾಗಿ ಆಗದೆ ಕುಂಟುತ್ತಿರುವ ಬಗ್ಗೆ ಕೇಂದ್ರದ ಮತ್ತು ರಾಜ್ಯದ ಅಧಿಕಾರಿಗಳನ್ನು ಮುಖ್ಯಮಂತ್ರಿ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ. ಯೋಜನೆಯಡಿ ಇನ್ನೂ 46 ಎಕರೆ ಭೂಸ್ವಾಧೀನ ಆಗಬೇಕಿದೆ. ಈಗಾಗಲೇ 111 ಎಕರೆ ಭೂಸ್ವಾಧೀನಕ್ಕೆ ಪಾವತಿ ಮಾಡಲಾಗಿದೆ. ಇನ್ನೂ 95 ಎಕರೆ ಪಾವತಿ ಆಗಬೇಕಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಮುಖ್ಯಮಂತ್ರಿ ಅವರು ಈ ಬಗ್ಗೆ ಕೇಂದ್ರದ ಸಚಿವರಿಗೆ ವಿವರವಾದ ಪತ್ರ ಬರೆಯಲು ಮತ್ತು ತ್ವರಿತ ಅನುಷ್ಠಾನ ಕುರಿತು ಕೇಂದ್ರ ವಿಮಾನಯಾನ ಸಚಿವರನ್ನು ಜ.15 ರಂದು ಭೇಟಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಿದರು.

ರೈತರ ಬೇಡಿಕೆಗಳಿಗೂ ಮಣಿಯದ ಕೇಂದ್ರ ಸರ್ಕಾರ: ಸಿದ್ದರಾಮಯ್ಯ ಕಿಡಿ

ಮೈಸೂರು ನಗರ ಹಾಗೂ ಹೊಸದಾಗಿ ನಿರ್ಮಿಸಲಾಗಿರುವ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣ, ಕೊಳಚೆ ನೀರು ಸಂಸ್ಕರಣೆ ಯೋಜನೆ ಜಾರಿಗೆ ಸಿದ್ಧಪಡಿಸಿರುವ 670 ಕೋಟಿ ರು. ವೆಚ್ಚದ ಡಿಪಿಆರ್‌ ಹಾಗೂ ಅಂಬೇಡ್ಕರ್‌ ಭವನ ಕಾಮಗಾರಿಯನ್ನು 23.83 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಳಿಸುವ ಯೋಜನೆಯನ್ನು ಬರುವ ಸಚಿವ ಸಂಪುಟದ ಮುಂದೆ ಮಂಡಿಸಿ. ಸಾಲಿಗ್ರಾಮ ತಾಲೂಕಿನಲ್ಲಿ 50 ಕೋಟಿ ರು. ವೆಚ್ಚದಲ್ಲಿ ತಾಲೂಕು ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ, ಪಿರಿಯಾಪಟ್ಟಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ. ಫಿಲ್ಮ್‌ ಸಿಟಿ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗನೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಲ್ಲದೆ, ಶಿಥಿಲ ಸ್ಥಿತಿಯಲ್ಲಿರುವ ದೇವರಾಜ ಅರಸು ಮಾರುಕಟ್ಟೆ ತೆರವುಗೊಳಿಸಲು ಕ್ರಮ ಕೈಗೊಳ್ಳಿ. ಲಾನ್ಸ್‌ಡೌನ್‌ ಕಟ್ಟಡ ಕೂಡ ಶಿಥಿಲಗೊಂಡಿರುವುದರಿಂದ ಅದನ್ನೂ ತೆರವುಗೊಳಿಸಿ ಕಾನೂನು ತೊಡಕು ಬಗೆಹರಿಸಿಕೊಂಡು ಅದೇ ಮಾದರಿಯಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲು ಸೂಚಿಸಿದರು. ದಳವಾಯಿ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಿ ಅಭಿವೃದ್ಧಿಪಡಿಸಲು ಸಿದ್ಧಪಡಿಸಿರುವ 25 ಕೋಟಿ ರು. ಪ್ರಸ್ತಾವನೆಗೆ ಆದಷ್ಟು ಬೇಗ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಿ. ಕೆರೆ ಅಭಿವೃದ್ಧಿ ಶುಲ್ಕ ಬಳಸಿಕೊಂಡು ಕುಕ್ಕರಳ್ಳಿ ಕೆರೆ ಪುನಶ್ಚೇತನ ಕಾರ್ಯ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದ್ದಾರೆ.

ರಸ್ತೆ ಮೇಲ್ದರ್ಜೆಗೆ ಕ್ರಮ: ಮೈಸೂರು ನಗರದಲ್ಲಿ 46 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಲಾಗಿದೆ. ಐಟಿ ಪಾರ್ಕ್‌ ಸ್ಥಾಪನೆಗೆ ಕೋಚನಹಳ್ಳಿಯಲ್ಲಿ ಜಮೀನು ನೀಡುವ ಕುರಿತು ಕ್ರಮ, ಕೋಚನಹಳ್ಳಿಯಲ್ಲಿ ಕೆಐಎಡಿಬಿಗೆ 404 ಎಕರೆ ಭೂ ಸ್ವಾಧೀನ ಕುರಿತು ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು 13 ಕೋಟಿ ರು. ಯೋಜನೆ ಸಿದ್ಧಪಡಿಸಲಾಗಿದೆ ಎಂಬುದು ಸೇರಿ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಇದೇ ವೇಳೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಹೊಸ ಬಡಾವಣೆಗಳ ಅವ್ಯವಸ್ಥೆ: ಶಾಸಕರು, ಅಧಿಕಾರಿಗಳಿಗೆ ಸಿಎಂ ಕ್ಲಾಸ್‌: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ನೂರಾರು ಹೊಸ ಬಡಾವಣೆಗಳಲ್ಲಿ ಮೂಲಭೂತ ಸವತ್ತುಗಳ ಕೊರತೆ, ಕಳಪೆ ನಿರ್ವಹಣೆ ಹಾಗೂ ನೀರು-ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೆ ಇರುವ ಕುರಿತು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಾತೀತವಾಗಿ ಎಲ್ಲ ಸ್ಥಳೀಯ ಶಾಸಕರನ್ನೂ ಪ್ರಶ್ನಿಸಿದ ಘಟನೆ ನಡೆದಿದೆ. ಹೊಸ ಬಡಾವಣೆಗಳಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕರು ಸಭೆಯಲ್ಲಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಇದಕ್ಕೆ ಸಿಟ್ಟಾದ ಮುಖ್ಯಮಂತ್ರಿ ಅವರು, ಅಲ್ರೀ 20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ. ಆದ್ರೂ ಯಾಕಿಂಗಾಯ್ತು? ಇಷ್ಟೆಲ್ಲಾ ಅವ್ಯವಸ್ಥೆ ಯಾಕಾಯ್ತು? ಯಾಕೆ ಅವ್ಯವಸ್ಥೆ ಆಗಲು ಬಿಟ್ಟಿದ್ದೀರಿ ಎಂದು ಪಕ್ಷಾತೀತವಾಗಿ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಿದರು.

ನಾನು ಯಾರಿಗೂ ರಸ್ತೆಗೆ ನನ್ನ ಹೆಸರಿಡಿ ಎಂದು ಹೇಳಿಯೇ ಇಲ್ಲ: ಸಿದ್ದರಾಮಯ್ಯ

ಹೊಸ ಬಡಾವಣೆ ಮಾಡುವಾಗ ವಿದ್ಯುತ್‌ ಸಂಪರ್ಕ, ರಸ್ತೆ, ಒಳಚರಂಡಿ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುವುದು ಬಡಾವಣೆ ಅಭಿವೃದ್ಧಿ ಮಾಡುವವರ ಜವಾಬ್ದಾರಿ. ಬಳಿಕ ಅದನ್ನು ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕಾಗಿತ್ತು. ಆದರೆ ಇಂಥ ಸುಮಾರು 950 ಬಡಾವಣೆಗಳನ್ನು ಹಸ್ತಾಂತರಿಸದಿರುವುದರಿಂದ ಸಮಸ್ಯೆ ಮುಂದುವರೆದಿದೆ ಎಂದು‌ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಅವರು, ಕನಿಷ್ಠ ಮೂಲಸೌಕರ್ಯ ಒದಗಿಸದೆ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ಹೇಗೆ ನೀಡುತ್ತಿದ್ದೀರಿ? ಇನ್ನು ಮುಂದೆ ಈ ರೀತಿಯಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ನಗರಪಾಲಿಕೆ, ಮುಡಾ ಕುರಿತಾಗಿ ಪ್ರತ್ಯೇಕ ಸಭೆ ಕರೆಯಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

Latest Videos
Follow Us:
Download App:
  • android
  • ios