ಅರಸೀಕೆರೆ(ಸೆ.12): ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಪಕ್ಷವನ್ನು ಬಲಪಡಿಸುವ ಕಾರ್ಯ ಮಾಡುತ್ತಿದ್ದು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಗಿದ್ದೇನೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಕಾರ್ಯ ಮಾಡುವುದಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್‌ ಹೇಳಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅರಸೀಕೆರೆಯಲ್ಲಿ ವರಿಷ್ಠರ ಆದೇಶದಂತೆ ಪಕ್ಷ ಸಂಘಟನೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದು, ಸ್ವಾತಂತ್ರ್ಯ ನಂತರ ಒಮ್ಮೆ ಮಾತ್ರ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಬಳಿಕ ಪಕ್ಷಕ್ಕೆ ನಿರೀಕ್ಷಿತ ಯಶಸ್ಸು ದೊರೆತಿಲ್ಲ. ಇದನ್ನು ಮನಗಂಡು ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ 2023 ವಿಧಾನಸಭಾ ಚುನಾವಣಾ ವೇಳೆಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು. ಕಾರ್ಯಕರ್ತರು ಅಪೇಕ್ಷೆ ಪಟ್ಟು, ವರಿಷ್ಠರು ಆಶೀರ್ವದಿಸಿದರೆ ಮಾತ್ರ ನಾನು ಅಭ್ಯರ್ಥಿಯಾಗಲು ಸಿದ್ಧ, ವರಿಷ್ಠರ ಯಾವುದೇ ತೀರ್ಮಾನಕ್ಕೆ ನಾನು ಬದ್ಧ ಎಂದರು.

ಸರ್ಕಾರದಿಂದಲೇ ಹೈ ಡ್ರಾಮಾ : ಸಂಸದ ಸುರೇಶ್ ಬಾಂಬ್

ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದ ಈ ಕ್ಷೇತ್ರವನ್ನು ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ನೀಡಿದ ಜನಪರ ಕಾರ್ಯಕ್ರಮಗಳನ್ನು ಮನೆ-ಮನೆಗೆ ತಲುಪಿಸಿ ಬಸವ ವಸತಿ ಯೋಜನೆಯಲ್ಲಿ 4000 ಮನೆ ಹೊನವಳ್ಳಿ ಏತ ನೀರಾವರಿ ನಗರ ಕುಡಿಯುವ ನೀರು ಬಹುಗ್ರಾಮ ಯೋಜನೆಯಡಿ ಪ್ರತಿ ಹಳ್ಳಿಗೆ ಕುಡಿಯುವ ನೀರು ನಗರ ಒಳಚರಂಡಿ ಯೋಜನೆಯ ಮೂಲಕ ಸಾವಿರಾರು ಕೋಟಿ ಅನುದಾನ ನೀಡಿ ಬೇರೆ ಪಕ್ಷದ ಶಾಸಕರಿದ್ದರೂ ತಾರತಮ್ಯ ಮಾಡದೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದು ಅದನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುವುದಾಗಿ ಹೇಳಿದರು.

ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಇದುವರೆಗೆ ಪರಿಹಾರ ನೀಡದ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ಈಗಾಗಲೇ ಸಂಬಂಧಪಟ್ಟಅ​ಧಿಕಾರಿಗಳೊಂದಿಗೆ ಎರಡು ಭಾರಿ ಮಾತುಕತೆ ನಡೆಸಿದ್ದು, ಶೀಘ್ರದಲ್ಲೆ ಪರಿಹಾರ ದೊರಕಿಸುವ ಕಾರ್ಯ ಮಾಡಲಾಗುವುದು ಎಂದರು.