ಮಂಡ್ಯ[ಜೂ.18]: ಸಾಲಬಾಧೆಯಿಂದ ಬೇಸತ್ತಿದ್ದ ರೈತನೊಬ್ಬ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಪೂರ್ಣಾವಧಿ ಅಧಿಕಾರ ನಡೆಸಲು ಅವಕಾಶ ನೀಡಬೇಕು, ಅವರು ಸಂತೇಬಾಚಹಳ್ಳಿಯ ಕೆರೆಗಳನ್ನು ತುಂಬಿಸಬೇಕು, ನನ್ನ ಅಂತ್ಯಕ್ರಿಯೆಗೂ ಬರಬೇಕು ಎಂದು ವಿಡಿಯೋ ಹೇಳಿಕೆ ದಾಖಲಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ

ಕೆ.ಆರ್.ಪೇಟೆ ತಾಲೂಕಿನ ಅಘಲಯ ಗ್ರಾಮದ ಸುರೇಶ್ (50) ಆತ್ಮಹತ್ಯೆ ಮಾಡಿಕೊಂಡ ರೈತ. ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಅಂತ್ಯ ಸಂಸ್ಕಾರ ನಡೆದಿದೆ. ಆ ಬಳಿಕ ಮನೆಯವರು ಬಂದು ಸುರೇಶ್ ಅವರ ಮೊಬೈಲ್ ಅನ್ನು ಸುಮ್ಮನೆ ಪರಿಶೀಲಿಸಿದಾಗ ಸೆಲ್ಫೀ ವಿಡಿಯೋ ಬೆಳಕಿಗೆ ಬಂದಿದೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಗ್ರಾಮದಲ್ಲಿ ಸುಮಾರು ಎರಡೂವರೆ ಎಕರೆ ಜಮೀನು ಮತ್ತು ತೋಟ ಹೊಂದಿರುವ ಸುರೇಶ್ ತೋಟದ ಅಭಿವೃದ್ಧಿ ಹಾಗೂ ಬೆಳೆ ಅಭಿವೃದ್ಧಿಗಾಗಿ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಮ್ಮ ಪತ್ನಿ ಹೆಸರಲ್ಲಿ ಸಾಲ ಪಡೆದಿದ್ದರು. ಅಲ್ಲದೆ, ಬೇಸಾಯಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಕೈಗಡ ಮಾಡಿಕೊಂಡಿದ್ದರು. ಮಳೆ ಇಲ್ಲದೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಗ್ರಾಮದ ಕೆರೆಯೂ ತುಂಬಿರಲಿಲ್ಲ. ಇದರಿಂದ ತೋಟದಲ್ಲಿನ ತೆಂಗು, ಅಡಕೆ ಮರಗಳು ಒಣಗುತ್ತಿದ್ದವು. ಇದರಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತರೇ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: 

ರಾಮನಗರ: ಸಾಲಬಾಧೆಯಿಂದ ಕಂಗೆಟ್ಟು ಕೆ.ಆರ್.ಪೇಟೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಯಾವುದೇ ಕಾರಣಕ್ಕೂ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

"

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆ. ಆರ್.ಪೇಟೆಯ ರೈತನೊಬ್ಬ ಮುಖ್ಯಮಂತ್ರಿಗಳು ತನ್ನ ಅಂತ್ಯಸಂಸ್ಕಾರಕ್ಕೆ ಬರಬೇಕೆಂದು ವಿಡಿಯೋ ಹೇಳಿಕೆ ದಾಖಲಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ತಿಳಿಯಿತು. ಆ ರೈತನ ಕುಟುಂಬಕ್ಕೆ ಶಾಂತಿ ಸಿಗಲಿ. ಆ ಭಾಗಕ್ಕೆ ಹೋದಾಗ ನಾನು ಆ ರೈತನ ಮನೆಗೆ ಭೇಟಿ ಕೊಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.