ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದ 'ಕೈ' ನಾಯಕ
ಮುಸಲ್ಮಾನರನ್ನು ಕಡೆಗಣಿಸಿದ ಕಾಂಗ್ರೆಸ್| 1947ರಲ್ಲಿ ಸರ್ಕಾರದಲ್ಲಿ 65 ಮಂದಿ ಮುಸ್ಲಿಂ ಸಮುದಾಯದ ನಾಯಕರಿದ್ದರು| 2021ರಲ್ಲಿ 25 ಮಂದಿ ನಾಯಕರು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿ ಇಲ್ಲ| ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ಸಮುದಾಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಯಾವೊಬ್ಬ ನಾಯಕರಿಲ್ಲ: ಸಿ.ಎಂ. ಇಬ್ರಾಹಿಂ|
ಮುದ್ದೇಬಿಹಾಳ(ಫೆ.01): ಕಾಂಗ್ರೆಸ್ ಪಕ್ಷದಲ್ಲಿ ಮುಸಲ್ಮಾನರಿಗೆ ಸೂಕ್ತ ಸ್ಥಾನಮಾನವಿಲ್ಲ. ಕಳೆದ 72 ವರ್ಷಗಳಿಂದಲೂ ಮುಸ್ಲಿಂ ಸಮುದಾಯದ ನಾಯಕರನ್ನು ಕಡೆಗಣಿಸುತ್ತಲೇ ಬಂದಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯಾಧ್ಯಕ್ಷ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ.
ಪಟ್ಟಣದ ಹುಡ್ಕೋ ಬಡಾವಣೆಯ ಟಾಪ್ ಇನ್ ಟೌನ್ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ನಡೆದ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಮತ್ತು ಸಿ.ಎಂ. ಇಬ್ರಾಹಿಂ ಅವರ ಸ್ವಾಭಿಮಾನಿ ಬಳಗದ ಸಂಯುಕ್ತ ಆಶ್ರಯದ ಬಾಗಲಕೋಟೆ ವಿಜಯಪುರ ಉಭಯ ಜಿಲ್ಲೆಯ ಮುಸ್ಲಿಂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
1947ರಲ್ಲಿ ಸರ್ಕಾರದಲ್ಲಿ 65 ಮಂದಿ ಮುಸ್ಲಿಂ ಸಮುದಾಯದ ನಾಯಕರಿದ್ದರು. 2021ರಲ್ಲಿ 25 ಮಂದಿ ನಾಯಕರು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಆಯಾ ಸಮುದಾಯದ ನಾಯಕರಾಗಿ ಸಮುದಾಯದ ಧ್ವನಿ ಎತ್ತಲು ನಾಯಕರಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಯಾರೊಬ್ಬ ನಾಯಕರೂ ಇಲ್ಲ. ಹೀಗಾಗಿ ಮುಸ್ಲಿಂ ಸಮುದಾಯದ ಎಲ್ಲ ನಾಯಕರ ಕಾರ್ಯಕರ್ತರ ನಿರ್ಧಾರ ಸಂಗ್ರಹಿಸಿ ಮುಂದಿನ ನಡೆಯನ್ನು ಶೀಘ್ರದಲ್ಲಿ ತಿಳಿಸುತ್ತೇನೆ ಎಂದರು.
'ರಾಜ್ಯದಿಂದ ಆಯ್ಕೆಯಾದ 26 ಮಂಗಳಮುಖಿಯರಿಗೆ ಮೋದಿಯನ್ನ ಪ್ರಶ್ನಿಸುವ ತಾಕತ್ತು ಇಲ್ಲ'
ರಾಜಕೀಯವಾಗಿ ನಾನು ಎಲ್ಲ ಪಕ್ಷದ ನಾಯಕರೊಂದಿಗೆ ಚೆನ್ನಾಗಿದ್ದೇನೆ. ಯಾರೂಂದಿಗೂ ವಿಶ್ವಾಸ ಕಳೆದುಕೊಂಡಿಲ್ಲ. ಹಾಗಂತ ನನ್ನ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ಕಾಂಗ್ರೆಸ್ ಪಕ್ಷದ ವಿರುದ್ಧ ನನಗೆ ಸಿಟ್ಟಿಲ್ಲ. ನೋವಿದೆ, ನಮ್ಮ ಹಕ್ಕುಗಳಿಗೆ ನಾನು ಧ್ವನಿ ಎತ್ತಿದ್ದೇನೆ ನಮ್ಮ ಸಮುದಾಯಕ್ಕೆ ಸಿಗಬೇಕಾದ ಹಕ್ಕಿಗಾಗಿ ಪಕ್ಷದಿಂದ ಆಚೆ ಬರುವ ನಿರ್ಧಾರ ಮಾಡಿದ್ದೇನೆ ಎಂದರು.
ನನಗೆ ಮುಸ್ಲಿಂ ಸಮುದಾಯದ ಜನರು ಪ್ರೀತಿಸುವ ಎರಡರಷ್ಟು ಜನ ಲಿಂಗಾಯತ, ನಾಯಕ, ದಲಿತಬ, ಕುರುಬ, ಹಿಂದುಳಿದ ಜನರು ಪ್ರೀತಿಸುತ್ತಾರೆ. ಇಬ್ರಾಹಿಂ ಸಾಹೇಬರ ನೀವು ಕೈಗೊಳ್ಳುವ ನಿರ್ಧಾರ ಸರಿಯಾಗಿರ್ತದೆ ನಾವು ನಿಮ್ಮ ಜೊತೆಗೆ ಇದ್ದೇನೆ ಎಂದು ಹೇಳುತ್ತಾರೆ. ಹೀಗಾಗಿ ಎಲ್ಲರ ನಿರ್ಧಾರ ಸಂಗ್ರಹಿಸಿ ತೀರ್ಮಾನ ಕೈಗೂಳ್ಳಲಿದ್ದೇನೆ ಎಂದರು.
ಇಂದಿರಾ ಕ್ಯಾಂಟೀನ್ ಬಗ್ಗೆ ಸಿದ್ದರಾಮಯ್ಯನವರಿಗೆ ತಿಳಿಸಿದವನೇ ನಾನು. ಆ ಯೋಜನೆಯಿಂದ ಬಡವರಿಗೆ ತುಂಬಾ ಸಹಾಯವಾಯಿತು. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಾರೆ ಅಂತ ತಿಳಿದು ಅವರನ್ನು ಬಾದಾಮಿಯಲ್ಲಿ ನಿಲ್ಲಿಸಿ ಅವರ ಗೆಲುವಿಗೆ ಶ್ರಮಿಸಿದ್ದೇನೆ. ಆದರೇ ಅದೇ ಸಿದ್ರಾಮಯ್ಯನವರು ನನ್ನನ್ನು ಕಡೆಗಿಣಸಿದ್ದು ಬೇಜಾರಾಗುವಂತೆ ಮಾಡಿದೆ ಎಂದರು.
ಕಳೆದ 72 ವರ್ಷಗಳಿಂದ ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನೂ ಸಹ ನೀಡಿಲ್ಲ. ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಗಳಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡ ಎಂ.ಸಿ .ಮುಲ್ಲಾ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಇಬ್ರಾಹಿಂ ಅವರನ್ನು ಕಡೆಗಣಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಇತರೆ ಸಮುದಾಯದ ಮುಖಂಡರಿಗೆ ಎಲ್ಲ ರಾಜ್ಯದ ಉಸ್ತುವಾರಿ ನೀಡಿದ್ದಾರೆ. ಆದರೆ ಮುಸ್ಲಿಂ ನಾಯಕರಿಗೆ ಯಾವುದೇ ಸ್ಥಾನ ಮಾನ ಜವಾಬ್ದಾರಿ ನೀಡಿಲ್ಲ ಎಂದು ಆರೋಪಿಸಿದರು.
ಬಿಜೆಪಿಗೆ ಎಲ್ಲ ಸಮುದಾಯದ ಜನರು ಮತ ನೀಡುತ್ತಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಶೇ. 99ರಷ್ಟುಮತ ಮುಸ್ಲಿಂ ಸಮುದಾಯದವರು ನೀಡುತ್ತಾರೆ. ಕಾಂಗ್ರೆಸ್ ಜೀವಂತವಾಗಿದೆ ಎಂದರೆ ಅದು ಮುಸ್ಲಿಂ ಮತಗಳಿಂದ, ಮುಸ್ಲಿಂ ಮತಗಳೇ ಕಾಂಗ್ರೆಸ್ ಪಕ್ಷದ ಆಕ್ಸಿಜನ್ ಇದ್ದಂತೆ ಎಂದರು.
ಪಂಚಮಸಾಲಿಯವರು ಮೀಸಲಾತಿಗಾಗಿ ಮಠದ ಸ್ವಾಮಿಗಳೂಂದಿಗೆ ಹೋರಾಟ ಮಾಡುತ್ತಿದ್ದಾರೆ, ಕುರುಬ ಜನಾಂಗದವರು ಎಸ್‌ಟಿ ಮೀಸಲಾತಿಗಾಗಿ ಅವರ ಕುಲ ಗುರುಗಳೂಂದಿಗೆ ಹೋರಾಟ ಮಾಡುತ್ತಿದ್ದಾರೆ, ಆದರೆ ನಮ್ಮ ಮುಸ್ಲಿಂ ಸಮುದಾಯದ ಹಕ್ಕಿಗಳಿಗಾಗಿ ಯಾವ ನಾಯಕರೂ ಯಾವ ಮೌಲ್ವಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಜಬ್ಬರ್ ಕಲಬುರಗಿ, ಎಂ.ಎಚ್. ಹಾಲಣ್ಣನವರ, ಉಸ್ಮಾನ ಗಣಿ, ಎಸ್.ಎಂ. ಪಾಟೀಲ (ಗಣಿಯಾರ), ರಸೂಲ್ ದೇಸಾಯಿ, ಎಂ.ಎಚ್. ಕ್ವಾರಿ ಮಾತನಾಡಿದರು. ಎಂ.ಟಿ. ಮುಲ್ಲಾ, ಎಲ್.ಎಂ. ನಾಯ್ಕೋಡಿ, ಎಂ.ಎಸ್. ಹತ್ತಿ, ಎಸ್.ಎಂ. ಗಣಿ, ಕೆ.ಬಿ. ದೊಡಮನಿ, ಅಲ್ಲಾಭಕ್ಷ ಢವಳಗಿ, ಕಾಶಿಮ್ ಪಟೇಲ್ ಮೂಕಿಹಾಳ, ಅಬ್ದುಲ್ ರಹಮಾನ್ ನಮಾಜ ಕಟ್ಟಿ, ಎಂ.ಆರ್. ಮುಲ್ಲಾ, ಸದ್ದಾಂ ಕುಂಟೋಜಿ, ಮಹ್ಮದ ರಫೀಕ ಶಿರೂಳ, ಮಹಿಬೂಬ ಕುಂಟೋಜಿ, ಪುರಸಭೆ ಸದಸ್ಯ ರಿಯಾಜಮ್ಮದ ಢವಳಗಿ ಅನೇಕರಿದ್ದರು. ಕೆ.ಎಂ. ರಿಸಾಲ್ದಾರ್ ಪ್ರಾಸ್ತಾವಿಕ ಮಾತನಾಡಿದರು.ಎಚ್.ಆರ್. ಬಾಗವಾನ ಸ್ವಾಗತಿಸಿದರು. ಅಲ್ಲಾಭಕ್ಷ ಖಾಜಿ, ನಾಥ್ ಇರ್ಪಾನ್ ದೇಸಾಯಿ ಕುರಾನ್ ಪಠಿಸಿದರು. ಜಹಾಂಗೀರ್ ಮುಲ್ಲಾ ವಂದಿಸಿದರು.