ಸ್ವಾರ್ಥಕ್ಕಾಗಿ ಸಾರಿಗೆ ನೌಕರರ ಮುಷ್ಕರ, ಎಸ್ಮಾ ಜಾರಿ ಮಾಡುವ ಕುರಿತು ಚರ್ಚೆ: ಸಿಎಂ ಬಿಎಸ್‌ವೈ
ಖಾಸಗಿ ವಾಹನದವರಿಗೂ ಮನವಿ ಮಾಡುತ್ತೇವೆ. ಯಾರೂ ಪ್ರಯಾಣಿಕರಿಗೆ ಸುಲಿಗೆ ಮಾಡಬಾರದು| ಸಾರಿಗೆ ನೌಕರರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿದೆ| ಮುಷ್ಕರ ನಡೆಸುವುದನ್ನು ಕೈ ಬಿಟ್ಟು ಸಾರಿಗೆ ಸೇವೆ ನೀಡಬೇಕೆಂದು ಸಿಎಂ ಮನವಿ|
ಬೆಳಗಾವಿ(ಏ.07): ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ ಸರ್ಕಾರ 8 ಈಡೇರಿಸಿದೆ. ಸಾರಿಗೆ ನೌಕರರು ಹಠ ಮಾಡಿ ಮುಷ್ಕರ ಮಾಡುವುದು ಸರಿಯಲ್ಲ. ಮುಷ್ಕರ ಕೈ ಬಿಟ್ಟು ಸೇವೆಗೆ ಮರಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಈಗಾಗಲೇ ಜಿಲ್ಲಾ ಕೇಂದ್ರದಿಂದ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನದವರು ಪ್ರಯಾಣಿಕರ ಸುಲಿಗೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
6ನೇ ವೇತನ ಆಯೋಗ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಬಿಗ್ ಶಾಕ್ ಕೊಟ್ಟ ಸಿಎಂ
ಖಾಸಗಿ ವಾಹನದವರಿಗೂ ಮನವಿ ಮಾಡುತ್ತೇವೆ. ಯಾರೂ ಪ್ರಯಾಣಿಕರಿಗೆ ಸುಲಿಗೆ ಮಾಡಬಾರದು. ಸಾರಿಗೆ ನೌಕರರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿದೆ. ಮುಷ್ಕರ ನಡೆಸುವುದನ್ನು ಕೈ ಬಿಟ್ಟು ಸಾರಿಗೆ ಸೇವೆ ನೀಡಬೇಕೆಂದು ಸಿಎಂ ವಿನಂತಿಸಿಕೊಂಡರು. ಸಾರಿಗೆ ನೌಕರರು ಸ್ವಾರ್ಥಕ್ಕಾಗಿ ಮುಷ್ಕರ ನಡೆಸುತ್ತಿದ್ದಾರೆ. ಎಸ್ಮಾ ಜಾರಿ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ನಿನ್ನೆಯಿಂದ ಪಕ್ಷದ ಮುಖಂಡರು, ಹಿರಿಯರ ಮುಖಂಡರನ್ನು ಭೇಟಿಯಾಗಿದ್ದೇನೆ. ದಿ. ಸುರೇಶ ಅಂಗಡಿ ಅವರ ಹಿಂದಿನ ಅಭಿವೃದ್ಧಿ ಕಾರ್ಯಗಳು ನಮ್ಮ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರ ಕೈ ಹಿಡಿಯಲಿದೆ ಎಂದು ತಿಳಿಸಿದ್ದಾರೆ.
ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.