‘ರ‍್ಯಾಪಿಡ್ ಟೆಸ್ಟ್ ಕಡಿಮೆ ಮಾಡಿ, ಆರ್‌ಟಿಪಿಸಿಆರ್ ಹೆಚ್ಚಿಸಿ: ಸಿಎಂ ಯಡಿಯೂರಪ್ಪ
ಕೊರೋನಾ ಸೋಂಕು ಪತ್ತೆಗೆ ಆರ್‌ಟಿಪಿಸಿಆರ್ ಪರೀಕ್ಷೆ ಹೆಚ್ಚಿಸಿ| ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ| ಕೊರೋನಾ ಸೋಂಕಿತರಿಗೆ ಹಾಸಿಗೆ ಕೊಡಿಸುವುದಾಗಿ ಹೇಳಿ ಮಧ್ಯವರ್ತಿಗಳು ಕೊರೋನಾ ಸೋಂಕಿತರಿಂದ ಹಣ ಸುಲಿಗೆ| ಹೋಂ ಐಸೋಲೇಷನ್‌ನಲ್ಲಿ ಇರೋರ ಹೆಸರಲ್ಲಿ ನಕಲಿ ಬಿಲ್|
ಬೆಂಗಳೂರು(ಅ.15): ನಗರದಲ್ಲಿ ಹೋಂ ಐಸೊಲೇಷನ್‌ನಲ್ಲಿ ಇರುವವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಟೆಲಿಮಾನಿಟರಿಂಗ್ ಮೂಲಕ ನಿರಂತರವಾಗಿ ನಿಗಾ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಲಯ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ನಗರದಲ್ಲಿ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಕಡಿಮೆ ಮಾಡಿ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ಕೆಲವು ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ಹೆಚ್ಚಾಗಿ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಿ ಎಂದು ಹೇಳಿದರು.
ನಗರದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಲು ವಲಯ ಉಸ್ತುವಾರಿ ಅಧಿಕಾರಿಗಳು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಕರ್ನಾಟಕದಲ್ಲಿ ನಿಲ್ಲದ ಕೊರೋನಾ, ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ
ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮಾತನಾಡಿ, ಆಸ್ಪತ್ರೆಯಿಂದ ಮನೆಗೆ ಮರಳುವವರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿರುವ ಪ್ರಕರಣಗಳೂ ಇರುವುದರಿಂದ ಅವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ. ವಲಯವಾರು ಆರ್‌ಟಿಪಿಸಿಆರ್ ಪರೀಕ್ಷಾ ವರದಿ, ಮಾಸ್ಕ್ ಧರಿಸುವಿಕೆ ವರದಿಯನ್ನು ಪರಿಶೀಲಿಸಿದರಲ್ಲದೇ, ಹೋಂ ಐಸೊಲೇಷನ್ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಹಾಗೂ ಸಂಪರ್ಕ ಪತ್ತೆಗೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಸಂಪರ್ಕಕ್ಕೆ ಸಿಗದ ಸೋಂಕಿತರು: ಕೊರೋನಾ ಸೋಂಕು ಪರೀಕ್ಷೆ ವೇಳೆ ದೂರವಾಣಿ ಸಂಖ್ಯೆ, ವಿಳಾಸ ದೃಢಿಕರಣ ಸೇರಿದಂತೆ ಮೊದಲಾದ ದಾಖಲಾತಿ ಪಡೆಯಲಾಗುತ್ತಿದೆ. ಆದರೂ ಕೆಲವು ಸೋಂಕಿತರ ವಿಳಾಸ ತಪ್ಪಾಗಿ ನೀಡುತ್ತಿದ್ದಾರೆ. ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಹೇಳಿದರು.
ಆರ್‌ಆರ್ ನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ: ಆರ್.ಆರ್.ನಗರದಲ್ಲಿ ಪ್ರತಿ ಸೋಂಕಿತ ವ್ಯಕ್ತಿಗೆ ಕನಿಷ್ಠ 10 ಸಂಪರ್ಕ ಪತ್ತೆಯನ್ನು ಮಾಡಲಾಗುತ್ತಿದ್ದು, ಉಪಚುನಾವಣೆ ಇರುವುದರಿಂದ ಸಾಮಾಜಿಕ ಅಂತರ ನಿಯಮ ಕಾಪಾಡಲು ಪ್ರತ್ಯೇಕ ಕೋವಿಡ್ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್, ಉಪಮುಖ್ಯಮಂತ್ರಿ ಡಾ ಸಿ.ಎನ್.ಅಶ್ವತ್ಥ್ ನಾರಾಯಣ್, ಸಚಿವ ಎಸ್.ಟಿ.ಸೋಮಶೇಖರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಂ ಐಸೋಲೇಷನ್‌ನಲ್ಲಿ ಇರೋರ ಹೆಸರಲ್ಲಿ ನಕಲಿ ಬಿಲ್
ನಗರದಲ್ಲಿ ಕೊರೋನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸಲು ಮಧ್ಯವರ್ತಿಗಳು ಹುಟ್ಟಿಕೊಂಡಿರುವ ಹಾಗೂ ಹೋಂ ಐಸೋಲೇಷನ್‌ನಲ್ಲಿ ಇರುವವರ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸುವ ವಂಚನೆ ಜಾಲ ಕಾರ್ಯಪ್ರವೃತವಾಗಿರುವ ಬಗ್ಗೆ ವ್ಯಾಪಕ ದೂರುಗಳಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕೊರೋನಾ ಸೋಂಕಿತರಿಗೆ ಹಾಸಿಗೆ ಕೊಡಿಸುವುದಾಗಿ ಹೇಳಿ ಮಧ್ಯವರ್ತಿಗಳು ಕೊರೋನಾ ಸೋಂಕಿತರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ರೋಗಿಯ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನಕಲಿ ಬಿಲ್ ಸೃಷ್ಟಿ ವಂಚನೆ ಮಾಡುತ್ತಿರುವ ಬಗ್ಗೆಯೂ ದೂರು ಕೇಳಿ ಬರುತ್ತಿವೆ. ಈ ಬಗ್ಗೆ ನಿಗಾ ವಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.