ಬೆಂಗಳೂರು(ಏ.23): ಕೋವಿಡ್‌ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿತಾಗಾರಗಳಿಗೆ ಶವ ಸಾಗಿಸುವ ಆ್ಯಂಬುಲೆನ್ಸ್‌ಗಳು ತಾಸುಗಟ್ಟಲೇ ಸರದಿಯಲ್ಲಿ ನಿಲ್ಲುತ್ತಿವೆ. ಹೀಗಾಗಿ ಶವಗಳನ್ನು ಇರಿಸಲು ಚಿತಾಗಾರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ.

ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಆಡಳಿತದತ್ತ ಕಾರ್ಯೋನ್ಮುಖರಾಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೆಂಗಳೂರು ಕೋವಿಡ್‌ ನಿರ್ವಹಣೆ ಕುರಿತು ನಗರದ ಸಚಿವರ ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ ಸಲಹೆ-ಸೂಚನೆ ನೀಡಿದರು. ಅಧಿಕೃತ ನಿವಾಸ ಕಾವೇರಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ಬೆಂಗಳೂರಿನ ಕೊರೋನಾ ಸ್ಥಿತಿಗತಿ, ಜಾರಿಗೆ ತಂದಿರುವ ಕಠಿಣ ಮಾರ್ಗಸೂಚಿ ಅನುಷ್ಠಾನ ಕುರಿತು ಮಾಹಿತಿ ಪಡೆದುಕೊಂಡರು.

ಚಿತಾಗಾರಗಳಿಗೆ ಶವಗಳನ್ನು ಸಾಗಿಸಲು ಆ್ಯಂಬುಲೆನ್ಸ್‌ಗಳ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಶವಗಳನ್ನು ಇರಿಸಲು ಚಿತಾಗಾರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ನೋಡೆಲ್‌ ಅಧಿಕಾರಿಗಳು ಆಯಾ ವಲಯದ ಕೋವಿಡ್‌ ನಿರ್ವಹಣೆಗೆ ಸಂಪೂರ್ಣ ಜವಾಬ್ದಾರರು. ಅವರು ಎಲ್ಲ ಸಮಸ್ಯೆಗಳ ಕುರಿತು ಸ್ಪಂದಿಸಬೇಕು. ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗೆ ಸ್ಥೈರ್ಯ ತುಂಬುವಂತೆ ಸೂಚಿಸಿದರು.

ಕೋವಿಡ್​ ಲಸಿಕೆ: ಮಹತ್ವದ ಹೆಜ್ಜೆ ಇಟ್ಟ ಯಡಿಯೂರಪ್ಪ ಸರ್ಕಾರ!

ನಗರದಲ್ಲಿ ಫೀವರ್‌ ಕ್ಲಿನಿಕ್‌ಗಳನ್ನು ಬಲಪಡಿಸಿ, ಜ್ವರ ಮತ್ತಿತರ ಲಕ್ಷಣ ಹೊಂದಿರುವವರ ಪರೀಕ್ಷೆ ಮತ್ತು ಸೂಕ್ತ ಮಾರ್ಗದರ್ಶನ ನೀಡಬೇಕು. ಇದರಿಂದ ಅಗತ್ಯ ಇರುವವರಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗುತ್ತದೆ. ಸಹಾಯವಾಣಿಗಳನ್ನು ಇನ್ನಷ್ಟುಬಲಪಡಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಹೋಮ್‌ ಐಸೋಲೇಷನ್‌ನಲ್ಲಿ ಇರುವವರ ಚಿಕಿತ್ಸೆ, ಟೆಲಿ ಕನ್ಸಲ್ಟೇಷನ್‌ ಒದಗಿಸಲು ಮತ್ತು ಅವರ ಮೇಲೆ ನಿಗಾವಹಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಗೆ ಹಾಸಿಗೆಗಳನ್ನು ಒದಗಿಸುವುದನ್ನು ಖಾತರಿಪಡಿಸಬೇಕು. ಆಯಾ ವಲಯಗಳ ಡಿಸಿಪಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೋವಿಡ್‌ ನಿರ್ವಹಣೆಯಲ್ಲಿ ಸಾಧ್ಯವಿರುವಲ್ಲಿ ಸ್ವಯಂ ಸೇವಕರ ನೆರವು ಪಡೆಯಬೇಕು ಎಂದು ತಿಳಿಸಿದರು.

ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಮಾತನಾಡಿ, ಬೆಂಗಳೂರು ನಗರದಲ್ಲಿ ಈಗಾಗಲೇ ಆಮ್ಲಜನಕ ಪೂರೈಕೆ ಮತ್ತು ಔಷಧ ಕೊರತೆಯ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಜತೆಗೆ ಲಸಿಕೆಗಳ ಕೊರತೆಯೂ ಇಲ್ಲ ಎಂದು ಸ್ಪಷ್ಪಪಡಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ, ಸಚಿವರಾದ ಆರ್‌.ಅಶೋಕ್‌, ಎಸ್‌.ಸುರೇಶ್‌ ಕುಮಾರ್‌, ವಿ.ಸೋಮಣ್ಣ, ಕೆ.ಗೋಪಾಲಯ್ಯ ಸೇರಿದಂತೆ ಇತರೆ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು.