* ನನ್ನ ಸಂಪುಟ ಕ್ರಿಯಾಶೀಲವಾಗಿದೆ, ಪುನರ್‌ ರಚನೆ ಚಿಂತನೆ ಇಲ್ಲ: ಬಿಎಸ್‌ವೈ* ಸಂಪುಟ ವಿಸ್ತರಣೆ ಬಗ್ಗೆ ಅಥವಾ ಸಚಿವರನ್ನು ಕೈ ಬಿಡುವ ಬಗ್ಗೆ ಚಿಂತನೆ ನಡೆದಿಲ್ಲ*  ಸುಮಲತಾ-ಕುಮಾರಸ್ವಾಮಿ ಈ ರೀತಿ ಕಚ್ಚಾಡುವುದು ಸರಿಯಲ್ಲ 

ಕಲಬುರಗಿ(ಜು.11): ಕೇಂದ್ರದ ರೀತಿ ರಾಜ್ಯದಲ್ಲಿ ಸಂಪುಟ ಪುನರ್‌ ರಚಿಸುವ ಚಿಂತನೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಂಪುಟ ಪುನರ್‌ ರಚನೆ ಸಾಧ್ಯತೆಗಳ ಕುರಿತ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.

ಕಲಬುರಗಿಯಲ್ಲಿ 47.10 ಕೋಟಿ ರು ವೆಚ್ಚದಲ್ಲಿ ‘ಲೋಕೋಪಯೋಗಿ ಭವನ’ ಸೇರಿ 181.85 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಹಾಗೂ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಈ ವಿಚಾರ ತಿಳಿಸಿದರು.

ನನ್ನ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಕ್ರಿಯಾಶೀಲವಾಗಿದೆ, ಅಭಿವೃದ್ಧಿ ಪರ ಚಿಂತನೆ ಸಾಗಿದೆ. ಹೀಗಾಗಿ ಸಂಪುಟ ಪುನರ್‌ ರಚನೆ ವಿಚಾರ ಅಗತ್ಯ ಈಗಂತೂ ಇಲ್ಲ. ಸಂಪುಟ ವಿಸ್ತರಣೆ ಬಗ್ಗೆ ಅಥವಾ ಸಚಿವರನ್ನು ಕೈ ಬಿಡುವ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದರು.

ಬಿಎಸ್‌ವೈ ಪಾಲಿಗೆ ವರವಾದ ಕೇಂದ್ರದ ಹೊಸ ಕ್ಯಾಬಿನೆಟ್‌: ಮೋದಿ ಟೀಂ ರಹಸ್ಯ!

ದಿ.ಅಂಬರೀಶ್‌ ಸ್ಮಾರಕ ಕುರಿತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ವಾಕ್ಸಮರ ನಡೆಯುತ್ತಿರುವ ಹೊತ್ತಲ್ಲೇ ಸಿಎಂ ಯಡಿಯೂರಪ್ಪ ಅವರು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ. ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಒಪ್ಪಿಗೆ ನೀಡಿರುವ ಬಗ್ಗೆ ನನಗೆ ಸಮಾಧಾನವಿದೆ ಎಂದರು.

ಜತೆಗೆ ಮಂಡ್ಯ ರಾಜ್ಯದ ಒಂದು ಭಾಗ. ಅದರ ಅಭಿವೃದ್ಧಿಗೂ ನಾವು ಒತ್ತು ಕೊಡಬೇಕು. ಅದನ್ನು ಬಿಟ್ಟು ಸುಮಲತಾ-ಕುಮಾರಸ್ವಾಮಿ ಈ ರೀತಿ ಕಚ್ಚಾಡುವುದು ಸರಿಯಲ್ಲ. ಎಲ್ಲರೂ ಸೋದರರಂತೆ ಬಾಳುವುದನ್ನು ಕಲಿಯಬೇಕು. ಅಲ್ಲಿನ ಅಭಿವೃದ್ಧಿಗೆ ಒಟ್ಟಾಗಿ ದುಡಿಯಬೇಕು ಎಂದು ಯಡಿಯೂರಪ್ಪ ಸಲಹೆ ಕೊಟ್ಟರು.