ಆಲಮಟ್ಟಿ[ಅ.4]: ಆಲಮಟ್ಟಿಯ ಲಾಲ್‌ ಬದದ್ದೂರ ಶಾಸ್ತ್ರೀ ಜಲಾಶಯಕ್ಕೆ ಅ. 5ರಂದು ಅಂದು ಬೆಳಗ್ಗೆ 10.45ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.

ಶಾಸಕ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಎರಡು ಜಿಲ್ಲೆಯ ಜನಪ್ರತಿನಿಧಿಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕೆಬಿಜೆಎನ್‌ಎಲ್‌ ಎಂಡಿ ಎನ್‌. ಜಯರಾಮ್‌, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಜಿಪಂ ಸಿಇಒ ವಿಕಾಸ್‌ ಸುರಳಿಕರ ಇತರ ಹಿರಿಯ ಅಧಿಕಾರಿಗಳು ಗುರು​ವಾರ ಭೇಟಿ ನೀಡಿ ಪರಿಶೀಲಿಸಿ​ದರು.

ಅ. 5ರಂದು ಬೆಳಗ್ಗೆ ಇಲ್ಲಿಯ ಪ್ರವಾಸಿ ಮಂದಿರದ ಹೊರ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಿಎಂ ಆಗಮನದ ಹಿನ್ನಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೆಬಿಜೆಎನ್‌ಎಲ್‌ ಅಧಿಕಾರಿಗಳು ಭಾರೀ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಾಗಲೇ ಆಮಂತ್ರಣ ಪತ್ರಿಕೆ ಮುದ್ರಿಸಿ ವಿತರಿಸಲಾಗುತ್ತಿದೆ. ಆಲಮಟ್ಟಿ ವಿವಿ​ಧೆಡೆ ಶಾಮಿಯಾನ, ಲೈಟಿಂಗ್‌ ಹಾಕಿ ಸ್ವಾಗತ ಕೋರಲಾಗುತ್ತಿದೆ. ಶಹನಾಯಿ ವಾದ್ಯ, ಮಂಗಳವಾದ್ಯವೂ ಇರಲಿದೆ.

ಎಸ್ಪಿ ಸೂಚನೆ ಮೇರೆಗೆ ಇಂದು ಇಡೀ ದಿನ ಹಾಗೂ ನಾಳೆ ಬೆಳಗಿನ ಅವಧಿಗೆ ಆಲಮಟ್ಟಿಯ ಎಲ್ಲ ಉದ್ಯಾನಗಳನ್ನು ಬಂದ್‌ ಮಾಡಲಾಗುತ್ತಿದೆ. ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ನಾಳೆ ಮಧ್ಯಾಹ್ನ 12ರ ನಂತರ ರಾಕ್‌, ಕೃಷ್ಣ, ಲವಕುಶ, ಮೊಘಲ್‌ ಉದ್ಯಾನ ಆರಂಭಿಸಲಾಗುತ್ತದೆ ಎಂದು ಆರ್‌ಎಫ್‌ಒ ಮಹೇಶ ಪಾಟೀಲ ತಿಳಿಸಿದ್ದಾರೆ.