ದಾವೋಸ್‌[ಜ.22]:  ರಾಜ್ಯದಲ್ಲಿ ಕೃಷಿ ಕೇಂದ್ರಿತ ಉದ್ಯಮ ಸ್ಥಾಪನೆ ಮಾಡುವಂತೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಹಾಗೂ ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೂಡಿಕೆದಾರರಿಗೆ ಮನವಿ ಮಾಡಿದ್ದಾರೆ.

ಸ್ವಿಜರ್‌ಲೆಂಡ್‌ನ ದಾವೋಸ್‌ಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮ್ಮೇಳನದ ಸಮಾವೇಶದ ಮೊದಲ ದಿನವಾದ ಮಂಗಳವಾರ ವಿವಿಧ ಹೂಡಿಕೆದಾರರು ಮತ್ತು ಉದ್ಯಮಿಗಳ ಜತೆ ಅವರು ಚರ್ಚೆ ನಡೆಸಿದರು. ಸ್ವಿಜರ್‌ಲೆಂಡ್‌ ಮೂಲದ 2000 ವ್ಯಾಟ್‌ ಕಂಪನಿಯ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದ ವೇಳೆ, ರೈತರ ಆತ್ಮಹತ್ಯೆಯ ಪ್ರವೃತ್ತಿಯನ್ನು ತಡೆಯುವ ನಿಟ್ಟಿನಲ್ಲಿ ಕೃಷಿ ಆಧಾರಿತ ಆರ್ಥಿಕತೆಯನ್ನು ಸುಧಾರಿಸುವ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು.

ರಾಜ್ಯಕ್ಕೆ ಹೊಸ ಯೊಜನೆಗಳನ್ನು ತಂದು ಬಂಡವಾಳ ಹೂಡಿಕೆ ಮಾಡಬೇಕು. ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುವ ಜತೆಗೆ ಯುವಕರನ್ನು ಸ್ವಾವಲಂಬಿಗಳನ್ನಾಗಿಸಲು ಉದ್ಯೋಗಾವಕಾಶ ಸೃಷ್ಟಿಸಬೇಕಾಗಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವಂತಹ ಯೋಜನೆಗಳಿಂದ ಕೃಷಿ ಆರ್ಥಿಕತೆ ಉತ್ತಮಗೊಳ್ಳಲಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಸಭೆಯಲ್ಲಿ 2000 ವ್ಯಾಟ್‌ ಕಂಪನಿಯ ಫುಡ್‌ ಕ್ಲಸ್ಟರ್‌ಗಳ ಅಭಿವೃದ್ಧಿ ಯೋಜನೆಯ ಕುರಿತು ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿದರು. ಈ ಕುರಿತು ಪ್ರಾತ್ಯಕ್ಷಿಕೆ ನೀಡಿದ ಕಂಪನಿಯ ಪ್ರತಿನಿಧಿಗಳು, ತಮ್ಮ ಬಳಿ ತಂತ್ರಜ್ಞಾನ ಇರುವುದಾಗಿ ಮತ್ತು ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಲು ಪೂರಕವಾದ ಫುಡ್‌ ಕ್ಲಸ್ಟರ್‌ಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುವುದಾಗಿ ವಿವರಿಸಿದರು. ಸತ್ವಪೂರ್ಣ ಆಹಾರ ಬೆಳೆಯಲು ಅಗತ್ಯವಿರುವ ಎಲ್ಲ ನೆರವು ಮತ್ತು ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳನ್ನು ನಾವು ಒದಗಿಸುತ್ತೇವೆ. ಅದರ ಮೂಲಕ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಒದಗಿಸಲಾಗುವುದು ಎಂದು ಸಂಸ್ಥೆಯ ವಿಜ್ಞಾನಿ ಆಂಡಿಯಾಸ್‌ ಬಿಂಕರ್ಟ್‌ ತಿಳಿಸಿದರು.

ಇದೇ ವೇಳೆ ಕಂಪನಿಯ ಸಂಸ್ಥಾಪಕ ಪಾಲುದಾರ ಮಾಧವ್‌ ಭಾಗವತ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ ಸ್ಮಾರ್ಟ್‌ ಸಿಟಿಯ ವಿನೂತನ ಪರಿಕಲ್ಪನೆಯ ಕುರಿತು ಮಾಹಿತಿ ನೀಡಿದರು. ಕಂಪನಿಯು ಇಂಗಾಲ ತಟಸ್ಥ ಸ್ಮಾರ್ಟ್‌ ಉಪನಗರಗಳ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದ್ದು, ಈಗಾಗಲೇ ಪುಣೆ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಹೇಳಿದರು.

ಮಂಗಳೂರಿನಲ್ಲಿ ಬಾಂಬ್: ದಾವೋಸ್‌ನಿಂದ ಸಿಎಂ ಖಡಕ್ ಎಚ್ಚರಿಕೆ.

ಇದಕ್ಕೂ ಮುನ್ನ ರಿನ್ಯೂ ಪವರ್‌ ಪ್ರತಿನಿಧಿಗಳು ರಾಜ್ಯದ ಬರಡು ಭೂಮಿಯಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸೌರ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲು ಆಸಕ್ತಿ ತೋರಿದರು. ಕಂಪನಿಯ ಸಿಇಓ ಸಮಂತ್‌ ಸಿನ್ಹಾ ಅವರು ತಮ್ಮ ಕಂಪನಿಯಿಂದ ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚುವರಿಯಾಗಿ ಉತ್ಪಾದನೆಯಾದ ವಿದ್ಯುತ್ತನ್ನು ಸಂಗ್ರಹಿಸುವ ಬ್ಯಾಟರಿಗಳು ಮತ್ತು ಇತರ ಉಪಕರಣಗಳನ್ನು ಅಳವಡಿಸಲು ಯೋಜಿಸಿರುವುದಾಗಿ ತಿಳಿಸಿದರು. ಆಡಳಿತಾತ್ಮಕ ಮತ್ತು ಕಾನೂನು ತೊಡಕುಗಳನ್ನು ನಿವಾಸರಿಸಲು ಸರ್ಕಾರ ಕ್ರಮ ವಹಿಸುವಂತೆ ಸಲಹೆ ನೀಡಿದರು.

ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಐಟಿ-ಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್‌ ಉಪಸ್ಥಿತರಿದ್ದರು.

ಅನಪೇಕ್ಷಿತ ನಿಯಮ ತಿದ್ದುಪಡಿಗೆ ಸಲಹೆ

ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ ಕಂಪನಿಗಳ ಪ್ರತಿನಿಧಿಗಳಲ್ಲಿ ಬಹುತೇಕ ಮಂದಿ ರೈತರಿಂದ ಜಮೀನು ಖರೀದಿಸಲು ಸರ್ಕಾರದ ಕೆಲವು ಅನಪೇಕ್ಷಿತ ನಿಯಮಗಳನ್ನು ತಿದ್ದುಪಡಿ ಮಾಡುವ ಅಥವಾ ರದ್ದುಪಡಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದ ಹೂಡಿಕೆದಾರರ ನಿಯೋಗಗಳೊಂದಿಗೆ ಸಮಾಲೋಚನೆ ನಡೆಸುವ ವೇಳೆ ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವ, ಹೆಚ್ಚು ಉದ್ಯೋಗ ಸೃಷ್ಟಿಮಾಡುವ ವಿಷಯಕ್ಕೆ ಒತ್ತು ನೀಡಿದರು. ರೈತರು ಮತ್ತು ಗ್ರಾಮೀಣ ಯುವಕರ ಹಿತರಕ್ಷಣೆ ಮಾಡುವ ಹೂಡಿಕೆದಾರರು ಮತ್ತು ಕೈಗಾರಿಕೆಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ ಎಂದರು.

ಸರ್ಕಾರ ಟೇಕ್‌ ಆಫ್‌ ಅಲ್ಲ, ಸತ್ತೇ ಹೋಗಿದೆ, ಸಿಎಂ ಸುಳ್‌ ಹೇಳ್ಕೊಂಡ್ ತಿರುಗ್ತಾರೆ: ಸಿದ್ದು...

ದಾವೋಸ್‌ನ ಕರ್ನಾಟಕ ಪೆವಿಲಿಯನ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಿನ್ಯೂ ಪವರ್‌ ಲಿಮಿಟೆಡ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಮಂತ್‌ ಸಿನ್ಹಾ ಅವರೊಂದಿಗೆ ಚರ್ಚಿಸಿದರು. ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ ಉಪಸ್ಥಿತರಿದ್ದರು.