Asianet Suvarna News Asianet Suvarna News

ಮಸ್ಕಿ ಉಪಚುನಾವಣೆ ರಣಕಹಳೆ: ಮೋದಿ ಅಭಿವೃದ್ಧಿ ನೆನೆದು ಮತ ನೀಡಿ, ಯಡಿಯೂರಪ್ಪ

ಬೇರೆಯವರು ಆಯ್ಕೆಯಾದರೆ ಕ್ಷೇತ್ರಕ್ಕೆ ಏನು ಲಾಭವಾಗುತ್ತೆ ನೀವೇ ಯೋಚನೆ ಮಾಡಿ| ದಯಮಾಡಿ ಪ್ರತಾಪಗೌಡ ಪಾಟೀಲ್‌ಗೆ ಮತ ಕೊಡುವುದರ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು| ಮೋದಿ  ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂದು ಕೆಲಸ ಮಾಡುತ್ತಿಲ್ಲವೇನು: ಬಿಎಸ್‌ವೈ| 

CM BS Yediyurappa Campaign at Maski in Raichur grg
Author
Bengaluru, First Published Mar 21, 2021, 12:04 PM IST

ರಾಯಚೂರು(ಮಾ.21): ನೀವು ವೋಟು ಕೊಡುತ್ತಾ ಇರುವುದು ಪ್ರತಾಪಗೌಡರಿಗೆ ಅಲ್ಲ, ಯಡಿಯೂರಪ್ಪಗೆ ಅಲ್ಲ. ಅಭಿವೃದ್ಧಿಗೋಸ್ಕರ ವೋಟು ಮಾಡುವಂತೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕೊಡುಗೆಗಳನ್ನು ನೋಡಿ, ಅವರನ್ನು ನೆನೆದು ಮತ ನೀಡಬೇಕು ಎಂದರು.

ಬೇರೆಯವರು ಆಯ್ಕೆಯಾದರೆ ಏನು ಲಾಭ:

ದೇಶದಲ್ಲಿ ಕಾಂಗ್ರೆಸ್‌ ಎಲ್ಲಿದೆ, ಯಾರಾರ‍ಯರೋ ಬಂದು ಬೂಟಾಟಿಕೆ ಮಾತುಗಳನ್ನಾಡಬಹುದು. ಟೀಕೆ-ಟಿಪ್ಪಣಿಗಳನ್ನು ಮಾಡಬಹುದು. ಆದರೆ ಇವತ್ತು ಆಡಳಿತ ಪಕ್ಷದ ಸದಸ್ಯರಾಗಿ ಪ್ರತಾಪಗೌಡ ಉಪಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆ. ಬೇರೆಯವರು ಆಯ್ಕೆಯಾದರೆ ಕ್ಷೇತ್ರಕ್ಕೆ ಏನು ಲಾಭವಾಗುತ್ತೆ ನೀವೇ ಯೋಚನೆ ಮಾಡಿ. ದಯಮಾಡಿ ಪ್ರತಾಪಗೌಡ ಪಾಟೀಲ್‌ಗೆ ಮತ ಕೊಡುವುದರ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು ಎಂದರು.

'ಇನ್ನೊಂದು ತಿಂಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ರಾಜೀನಾಮೆ'

ಸಂಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ:

ಮಸ್ಕಿ ಕ್ಷೇತ್ರದಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ಈ ಉಪಚುನಾವಣೆಯಲ್ಲಿ ನಾನು ಮತ್ತು ಸಚಿವರು, ಶಾಸಕರು, ಉಳಿದ ಮುಖಂಡರು ಅಲ್ಲಿಗೆ ಬರುತ್ತೇವೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಮಸ್ಕಿ ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ, ಅಲ್ಲಿಯ ಮಹಿಳೆಯರು, ಜನರನ್ನು ಭೇಟಿ ಮಾಡಿ ಅವರ ಸಂಕಷ್ಟಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಬಜೆಟ್‌ ಅಧಿವೇಶನ ಮುಗಿದ ಮೇಲೆ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಹೋಗಲಿದ್ದು, ಅದಕ್ಕಿಂತ ಮುಂಚೆ ಮಸ್ಕಿಗೆ ಬರುವುದಾಗಿ ತಿಳಿಸಿದರು.

ಇಲ್ಲಿ ಸೇರಿರುವ ಜನಸ್ತೋಮ ನೋಡಿದಾಗ ನನಗೆ ಅಚ್ಚರಿಯಾಗುತ್ತೆ. ಚುನಾವಣೆ ನಂತರ ವಿಜಯೋತ್ಸವಕ್ಕೆ ಬಂದಿದ್ದೇನೆಯೋ ಇಲ್ಲ ಪ್ರಚಾರಕ್ಕೆ ಬಂದಿರುವೆನೋ ಎನ್ನುವ ಅನುಮಾನದ ರೀತಿಯಲ್ಲಿ ತಾವು ಸೇರಿದ್ದೀರಿ ಎಂದರೆ ಮೋದಿ, ಪಕ್ಷದ ಮೇಲಿರುವ ವಿಶ್ವಾಸವೂ ತಿಳಿಯುತ್ತದೆ. ಸ್ವಾತಂತ್ರ ಬಂದು ಇಷ್ಟುವರ್ಷದಲ್ಲಿ ಕಾಂಗ್ರೆಸ್‌ ಯಾವ ರೀತಿ ಸಮುದ್ರದಲ್ಲಿ ಉಪ್ಪು ನೀರು ಕುಡಿಯಲು ಯೋಗ್ಯವಲ್ಲವೋ ಅದೇ ರೀತಿ ದೇಶವನ್ನು ಸರ್ವನಾಶ ಮಾಡಿ, ಭಾರತ ಜಗತ್ತಿನ ಮುಂದೆ ತಲೆತಗ್ಗಿಸುವ ಸ್ಥಿತಿಗೆ ತಂದರು. ಆದರೆ ಪ್ರಧಾನಿ ನರೇಂದ್ರ ಮೋದಿ ಕೇವಲ ಕೆಲವೇ ವರ್ಷದಲ್ಲಿ ಇಡೀ ಜಗತ್ತು ಅಚ್ಚರಿ ಪಡುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಒಂದು ಕಾಲದಲ್ಲಿ ದೇಶದ ಪ್ರಧಾನಿ ಸಾಲಕ್ಕಾಗಿ ಭೀಕ್ಷೆ ಬೇಡಲು ವಿದೇಶಕ್ಕೆ ಹೋಗುತ್ತಿದ್ದರು. ಆದರೆ ಇವತ್ತು ಮೋದಿ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಾ, ಯಾರನ್ನೂ ಒಂದೂ ರುಪಾಯಿ ಕೇಳದೆ ದೇಶದ ಆರ್ಥಿಕ ಸ್ಥಿತಿಯನ್ನು ಸದೃಢಪಡಿಸಿದ ನಾಯಕರಾಗಿದ್ದಾರೆ ಎಂದು ಹೇಳಿದರು.

ಮೋದಿ ಟೀಕಿಸುವ ಹಕ್ಕು ನಿಮಗೇನಿದೆ:

ನಾನು ಕಾಂಗ್ರೆಸ್‌ನವರಿಗೆ ಒಂದು ಕೇಳಲು ಬಯಸುತ್ತೇನೆ. ಅಂತಹ ದಯನೀಯ ಪರಿಸ್ಥಿತಿ ಬಂದಿದೆ ನಿಮಗೆ. ಪಕ್ಷದ ಅಧ್ಯಕ್ಷರು ಯಾರು ಎನ್ನುವುದನ್ನು ತೀರ್ಮಾನ ಮಾಡಲು ನಿಮ್ಮ ಕೈಯಲ್ಲಿ ಹಾಕಿಲ್ಲ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಕಚ್ಚಾಟ. ಸಿದ್ದರಾಮಯ್ಯನವರೇ, ಡಿ.ಕೆ.ಶಿವಕುಮಾರ ಅವರೇ ನಿಮ್ಮ ಬಗ್ಗೆ ನಾನು ಏನು ಒಂದು ಶಬ್ದ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಇಷ್ಟೇ ಕೇಳಲು ಇಷ್ಟಪಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ನೈಹಿಕತೆಯ ಹಕ್ಕು ನಿಮಗಿದೆಯೇ ಎಂದು ಪ್ರಶ್ನಿಸಿದರು.

ಮಸ್ಕಿ ಉಪಚುನಾವಣೆ: ಎಲೆಕ್ಷನ್‌ ಖರ್ಚಿಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ದೇಣಿಗೆಯ ಮಹಾಪೂರ

ಏಕೈಕ ಪಾರ್ಟಿ ಬಿಜೆಪಿ:

ಹಣ ಬಲ, ಹೆಂಡ ಬಲ, ತೋಳ ಬಲ, ಅಧಿಕಾರದ ಬಲದಿಂದ ಜಾತಿಯ ವಿಷ ಬೀಜಬಿತ್ತಿ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡಿದ್ದೀರಿ ನೀವು. ಅಲ್ಪಸಂಖ್ಯಾತರಲ್ಲಿ ನಾನು ಒಂದೇ ಕೇಳುತ್ತೇನೆ. ಮೋದಿ ಅವರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂದು ಕೆಲಸ ಮಾಡುತ್ತಿಲ್ಲವೇನು. ಯಾವುದಾದರು ಒಂದು ಕಾರ್ಯಕ್ರಮ, ಕೇಂದ್ರ, ರಾಜ್ಯದ್ದಾಗಿ ಅಲ್ಪಸಂಖ್ಯಾತರಿಗೆ ಕ್ರಿಶ್ಚಿಯನ್ನರಿಗೆ ಕೊಡದೇ ಹಿಂದೂಗಳಿಗೆ ಮಾತ್ರ ಕೊಟ್ಟಿರುವ ಯೋಜನೆ ಇದಿಯೇ. ನಾವು ಮಾಡಿದ ಒಂದೊಂದು ಕಾರ್ಯಕ್ರಮವು ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದು ಯೋಚಿಸುವ ಏಕೈಕ ಪಾರ್ಟಿ ಮೋದಿಯ ಬಿಜೆಪಿಯಾಗಿದೆ. ಚುನಾವಣೆ ಬರುತ್ತೆ, ಹೋಗುತ್ತೆ ಜನ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಲೋಕಸಭೆಯಲ್ಲಿ ಕಾಂಗ್ರೆಸ್ಸಿಗೆ ಅಡ್ರಸ್‌ ಇದೆಯೇನು? ನಾನು ಬರೆದು ಕೊಡುತ್ತೇನೆ. ಮುಂದಿನ 20 ವರ್ಷಗಳ ಕಾಲ ಬಿಜೆಪಿ ಹೆಚ್ಚಿನ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಲ್ಲಿ ಮುಂದುವರೆಯುತ್ತೆ. ನನ್ನ ಜನ್ಮದಿನ ಸಮಯದಲ್ಲಿ ಪ್ರಧಾನಿ ಮೋದಿಗೆ ಮತ್ತೊಮ್ಮೆ ನೀವೇ ಪ್ರಧಾನಿಯಾಗಬೇಕು ಎಂದು ಹೇಳಿದ್ದು, ಇದು ನನ್ನ ಅಭಿಪ್ರಾಯವಲ್ಲ ಇದು ದೇಶದ ಜನರ ಅಭಿಪ್ರಾಯವಾಗಿದೆ ಎಂದು ತಿಳಿಸಿರುವುದಾಗಿ ಹೇಳಿದರು.

ಕುಡುಕನ ಅವಾಂತರ

ಸಮಾವೇಶಕ್ಕೆ ಕುಡಿದು ಫುಲ್ ಟೈಟ್ ಆಗಿ ಬಂದಿದ್ದ ವ್ಯಕ್ತಿಯೊಬ್ಬ ಅವಾಂತರ ಸೃಷ್ಟಿ ಮಾಡಿದ ಘಟನೆ ನಡೆದಿದೆ. ಮದ್ಯಪಾನ ಮಾಡಿದ್ದರಿಂದ ವ್ಯಕ್ತಿಗೆ ಸಮಾವೇಶದ ವೇದಿಕೆಗೆ ಪೊಲೀಸರು ಬಿಡದ ಹಿನ್ನೆಲೆಯಲ್ಲಿ ಗಲಾಟೆ ಮಾಡಲು ಮುಂದಾಗಿದ್ದನು. ಹೀಗಾಗಿ ಕುಡುಕನನ್ನ ಪೊಲೀಸರು ಹೊರ ಹಾಕಿದ್ದಾರೆ.
 

Follow Us:
Download App:
  • android
  • ios