ಚಿತ್ರದುರ್ಗದ ಮೇದಾರ ಗುರುಪೀಠ ಟ್ರಸ್ಟ್‌ಗೆ 5 ಕೋಟಿ ನೆರವು: ಸಿಎಂ BSY
ಮೇದಾರ ಅಭಿವೃದ್ಧಿ ನಿಗಮ ಸ್ಥಾಪನೆ: ಸಿಎಂ|ಶಿವಶರಣ ಮೇದಾರ ಕೇತೇಶ್ವರ ಜಯಂತಿ ಸರ್ಕಾರದ ವತಿಯಿಂದ ಆಚರಿಸುವ ಬಗ್ಗೆ ಪರಿಶೀಲನೆ: ಸಿಎಂ|
ಬೆಂಗಳೂರು[ಫೆ.15]: ಮೇದಾರ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚಿತ್ರದುರ್ಗದ ಮೇದಾರ ಗುರುಪೀಠದ ಅಭಿವೃದ್ಧಿ ಟ್ರಸ್ಟ್‌ಗೆ ಐದು ಕೋಟಿ ರು. ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮೇದಾರ ಗುರುಪೀಠದ ಮೇದಾರ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮೇದಾರ ಮುಖಂಡರ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೇಡಿಕೆಯ ಪತ್ರ ಸಲ್ಲಿಸಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮನವಿಗೆ ಸ್ಪಂದಿಸಿದ ಮುಖ್ಯಮತ್ರಿಗಳು, ಮೇದಾರ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ಬಗ್ಗೆ ಎಲ್ಲರ ಜತೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಶಿವಶರಣ ಮೇದಾರ ಕೇತೇಶ್ವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಚಿತ್ರದುರ್ಗದಲ್ಲಿನ ಮೇದಾರ ಗುರುಪೀಠದ ಅಭಿವೃದ್ಧಿ ಟ್ರಸ್ಟ್‌ಗೆ ತಕ್ಷಣ ಐದು ಕೋಟಿ ರು. ನೆರವನ್ನು ನೀಡುವುದಾಗಿ ಇದೇ ವೇಳೆ ಮುಖ್ಯಮಂತ್ರಿಗಳು ಘೋಷಿಸಿದರು. ಮೇದಾರ ಸಮುದಾಯದ ರಾಜ್ಯಾಧ್ಯಕ್ಷ ಸಿ.ಪಿ.ಪಾಟೀಲ್ ಸೇರಿದಂತೆ ಮೇದಾರ ಸಮಾಜದ ಎಲ್ಲ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ನಿಯೋಗದಲ್ಲಿದ್ದರು.