ರಾಜಕಾಲುವೆ ಒತ್ತುವರಿ ತೆರವಿಗೆ ಸಿಎಂ ತಾಕೀತು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತನಿಖೆಗೆ ಆದೇಶ
ರಾಜಕಾಲುವೆ ಒತ್ತುವರಿ ತೆರವಿಗೆ ಮುಖ್ಯಮಂತ್ರಿ ತಾಕೀತು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ. ಒತ್ತುವರಿಯಿಂದಾಗಿಯೇ ಸಮಸ್ಯೆಗಳು ಸೃಷ್ಟಿ ಎಂದ ಸಿಎಂ ಬೊಮ್ಮಾಯಿ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತನಿಖೆಗೆ ಆದೇಶ.
ಬೆಂಗಳೂರು (ಸೆ.2): ರಾಜಕಾಲುವೆ ಒತ್ತುವರಿದಾರರಿಗೆ ಮತ್ತೆ ನೋಟಿಸ್ ನೀಡುವ ಅಗತ್ಯವಿಲ್ಲ. ಕೂಡಲೇ ಒತ್ತುವರಿ ತೆರವುಗೊಳಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಜತೆಗೆ, ಒತ್ತುವರಿ ಮಾಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತನಿಖೆಗೆ ಆದೇಶಿಸಿದ್ದಾರೆ. ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಕೆಆರ್‌ಪುರ ವಿಧಾನಸಭಾ ಕ್ಷೇತ್ರದ ಪ್ರವಾಹ ಪೀಡಿತ ಸ್ಥಳಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ರಾಜಕಾಲುವೆ ಒತ್ತುವರಿಗೆ ಸಹಕಾರ ಮತ್ತು ಒತ್ತುವರಿ ತೆರವಿಗೆ ಹಿಂದೇಟು ಹಾಕುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ 10ರಿಂದ 15 ವರ್ಷಗಳಲ್ಲಾದ ಕೆರೆ ಒತ್ತುವರಿಯಿಂದಾಗಿ ಈ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಒತ್ತುವರಿ ಮಾಡುವಾಗ ತಡೆಯಲು ಯಾಕೆ ಮುಂದಾಗಲಿಲ್ಲ. ರಾಜಕಾಲುವೆ ಮೇಲೆ ದೊಡ್ಡ ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ನೀವೆ ಈ ಅಕ್ರಮಗಳಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ, ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಬಿಡಿಎ ಇಲಾಖೆಗಳ ನಡುವೆ ಸಮನ್ವಯ ಕೊರತೆ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ ಸಿಎಂ, ತ್ಯಾಜ್ಯ ನೀರು ಚರಂಡಿಗೆ ಹರಿಯದಂತೆ ತಡೆಯಲು ಕ್ರಮ ಕೈಗೊಳ್ಳಬೇಕು. ಎಲ್ಲ ಇಲಾಖೆಗಳು ಸನ್ವಯತೆಯಿಂದ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.
ಯೋಜನೆ ಸಿದ್ಧಪಡಿಸಿ: ಒತ್ತುವರಿ ತೆರವು ಕಾರ್ಯಾಚರಣೆ ನಿರಂತವಾಗಿ ನಡೆಸಿ. ವ್ಯವಸ್ಥಿತವಾಗಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿ. ಭೂ ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ಎದುರಾದರೆ ಸರ್ಕಾರದಿಂದ ಪರಿಹಾರ ನೀಡಲಾಗುವುದು. ರಾಜಕಾಲುವೆಗೆ ಎತ್ತರವಾದ ಮತ್ತು ಶಾಶ್ವತ ತಡೆಗೋಡೆ ನಿರ್ಮಿಸಲು ಯೋಜನೆ ಸಿದ್ಧಪಡಿಸಿ ಕೂಡಲೇ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಈಗಾಗಲೇ ರಾಜಕಾಲುವೆ ದುರಸ್ತಿಗೆ 1,500 ಕೋಟಿ ರೂ. ನೀಡಲಾಗಿದೆ ಮಳೆ ನಿಂತ ನಂತರ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು.
ರಾಜಕಾಲುವೆ ನಿರ್ವಹಣೆ ಮಾರ್ಗಸೂಚಿ ರಚಿಸಿ: ಸ್ಥಳದಿಂದ ಸ್ಥಳಕ್ಕೆ ಸಮಸ್ಯೆಗಳು ಬೇರೆ ಬೇರೆ ಆಗಿವೆ. ಹಾಗಾಗಿ, ವಲಯವಾರು ರಾಜಕಾಲುವೆ ನಿರ್ವಹಣೆ ಕುರಿತು ಮಾರ್ಗಸೂಚಿ ರಚನೆ ಮಾಡಿ. ಜತೆಗೆ ಬೇಸಿಗೆ ಅವಧಿಯಲ್ಲಿ ಕೆರೆ ಹೂಳು ತೆರವಿಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಿಂದಿನ ಸರ್ಕಾರಗಳ ನಿರ್ಲಕ್ಷ್ಯ: ಕಳೆದ 8-10 ವರ್ಷಗಳಲ್ಲಿ ಬೆಂಗಳೂರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ. ಹಿಂದಿನ ಸರ್ಕಾರಗಳು ಕೆಲ ಯೋಜನೆಗಳ ಗುಣಮಟ್ಟಕಾಯ್ದುಕೊಂಡಿಲ್ಲ. ಭ್ರಷ್ಟಾಚಾರದ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗಿದೆ. ಬಿಬಿಎಂಪಿಯನ್ನು ತಮ್ಮ ಇಷ್ಟಕ್ಕೆ ಬಂದಂತೆ ನಡೆಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ಹಿಂದಿನ ಸರ್ಕಾರಗಳ ವೈಫಲ್ಯದಿಂದ ಈ ಸಮಸ್ಯೆಗಳು ಉದ್ಭವಿಸಿವೆ. ಜನರಿಗೆ ಅವರು ಉತ್ತರ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ರಾಜಕಾಲುವೆ ನಿರ್ಮಾಣಕ್ಕೆ 1500 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಪರದಾಟ ಮುಂದುವರಿಕೆ: ನಿರಂತರವಾಗಿ ಸುರಿದ ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹದ ನೀರು ಹೊರ ಹೋಗಲಾಗದೆ ಹಲವು ಬಡಾವಣೆಗಳ ನಿವಾಸಿಗಳು ಪರದಾಟ ಮುಂದುವರೆದಿದೆ. ಈವರೆಗೆ ನಗರದಲ್ಲಿ 209 ಪ್ರದೇಶಗಳನ್ನು ಮಳೆ ಹಾನಿ ಪ್ರದೇಶಗಳೆಂದು ಗುರುತಿಸಲಾಗಿದೆ.
ಬೇಗೂರು ಕೆರೆ ವ್ಯಾಪ್ತಿಯಲ್ಲಿ 81 ಒತ್ತುವರಿ, ಹೈಕೋರ್ಚ್‌ಗೆ ಬಿಬಿಎಂಪಿ ಮಾಹಿತಿ
ಇನ್ನು ಗುರುವಾರ ಮಳೆ ಪ್ರಮಾಣ ಕೊಂಚ ಕಡಿಮೆಯಾದರೂ, ಪ್ರವಾಹ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದೆ ಜನರು ಸಮಸ್ಯೆ ಅನುಭವಿಸಿದರು. ಮಹದೇವಪುರದ ರೈನ್‌ಬೋ ಡ್ರೈವ್ ಲೇಔಟ್‌ನ ಜನರು ಗುರುವಾರವೂ ಬೋಟ್‌ಗಳ ಮೂಲಕ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಡಾವಣೆಯ ಎಟಿಎಂ ಕೇಂದ್ರಕ್ಕೆ ನೀರು ನುಗ್ಗಿದ್ದು, ಎಟಿಎಂ ಯಂತ್ರದೊಳಗೆ ನೀರು ಹೋಗಿ ಹಣವೆಲ್ಲಾ ಒದ್ದೆಯಾಗಿದೆ. ಬೆಳ್ಳಂದರೂ, ಮಾರಹಳ್ಳಿ, ಎಚ್‌ಬಿಆರ್ ಲೇಔಟ್ ಸೇರಿ ಇನ್ನಿತರ ಕಡೆಗಳಲ್ಲಿ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಅದರ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಆಯಿತು.