ಜನನಿ, ಜನ್ಮಭೂಮಿ ಗೌರವಿಸುವುದು ನಮ್ಮ ಧರ್ಮ: ಸಿಎಂ ಬೊಮ್ಮಾಯಿ

ತಮ್ಮದೇ ಆದ ಆದರ್ಶಗಳ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿ ನಡೆಸಿರುವ ಸಿದ್ಧಗಿರಿ ಕನ್ಹೇರಿ ಮಠದ ಪರಮಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಸಾಧನೆ ಶ್ಲಾಘನೀಯ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

CM Basavaraj Bommai Talks Over Kannheri Siddhasiri Matha grg

ಚಿಕ್ಕೋಡಿ(ಅ.11): ಕನ್ಹೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಕರ್ನಾಟಕ 3 ಕೋಟಿ ಅನುದಾನ ನೀಡಿದ್ದು, ಶೀಘ್ರವೇ ಕೆಲಸ ಪ್ರಾರಂಭಿಸಿ ಮುಂಬರುವ ದಿನಗಳಲ್ಲಿ ಕರ್ನಾಟಕ ಭವನ ಕಾಮಗಾರಿಗೆ ಇನ್ನೂ 2 ಕೋಟಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಸೋಮವಾರ ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕನ್ಹೇರಿ ಸಿದ್ಧಗಿರಿ ಮಠದಲ್ಲಿ ಆಯೋಜಿಸಿದ್ದ ಸಂತ ಸಮಾವೇಶ ಉದ್ಘಾಟನೆ ಹಾಗೂ ಕರ್ನಾಟಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಿ ಮಾತನಾಡಿ, ತಮ್ಮದೇ ಆದ ಆದರ್ಶಗಳ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿ ನಡೆಸಿರುವ ಸಿದ್ಧಗಿರಿ ಕನ್ಹೇರಿ ಮಠದ ಪರಮಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಸಾಧನೆ ಶ್ಲಾಘನೀಯ ಎಂದು ಹೇಳಿದರು.

ಇಲ್ಲಿ ನಡೆಯುತ್ತಿರುವ ಸಹೃದಯಿ ಸಂತರ ಸಮಾವೇಶ ನನಗೆ ಸಂತಸ ತಂದಿದೆ. ನಾನು ಮೊದಲ ಬಾರಿ ಕನ್ಹೇರಿ ಮಠಕ್ಕೆ ಬಂದಿದ್ದು, ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಹಾಗೂ ಮಠದ ಸೇವೆ ನೋಡಿದಾಗ ಇದೊಂದು ಆದರ್ಶ ಮಠ ಎಂದು ನಿಸ್ಸಂಶಯವಾಗಿ ಹೇಳಬಹುದು. ಎಕಾನಾಮಿ ಅಂದ್ರೆ ಬರೀ ದುಡ್ಡಲ್ಲ, ದುಡಿಮೆ. ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಎನ್ನುವುದು ಈ ಮಠದಲ್ಲಿ ಕಾರ್ಯಗತವಾಗಿದೆ ಎಂದು ಮುಖ್ಯಮಂತ್ರಿ ಪ್ರಶಂಸಿಸಿದರು.
ಜನನಿ, ಜನ್ಮಭೂಮಿಯನ್ನು ಗೌರವಿಸುವ ಉತ್ಕಟ ಪರಂಪರೆ ಹಾಗೂ ಸಂಸ್ಕೃತಿ ಭಾರತದ್ದಾಗಿದೆ. ಇದುವೇ ನಮ್ಮ ದೇಶಕ್ಕೂ ಹಾಗೂ ಬೇರೆ ದೇಶಕ್ಕೂ ಇರುವ ವ್ಯತ್ಯಾಸವಾಗಿದೆ. ಇಂಥ ಶ್ರೇಷ್ಠ ಸಂಸ್ಕೃತಿ, ಸಂಸ್ಕಾರಗಳು ನಮ್ಮ ದೇಶದ ಮಠ-ಮಂದಿರಗಳಿಂದ ಸಿಗುತ್ತದೆ ಎಂದು ಹೇಳಿದರು.

ಜಿಲ್ಲೆಯಿಂದ ಹೊರಗಿಡಲು ನಾನೇನು ಟೆರರಿಸ್ಟಾ?: ವಿನಯ್‌ ಕುಲಕರ್ಣಿ

ಇಂದು ನಾವು ನಾಗರಿಕತೆ ಮತ್ತು ಸಂಸ್ಕೃತಿ ಮಧ್ಯದ ವ್ಯತ್ಯಾಸ ಮರೆತಿದ್ದೇವೆ. ನಾಗರಿಕತೆಯನ್ನೇ ನಾವು ಸಂಸ್ಕೃತಿ ಅಂದುಕೊಂಡಿದ್ದೇವೆ. ನಾವು ಹಿಂದೆ ಏನಾಗಿದ್ದೆವೋ ಅದು ನಮ್ಮ ಸಂಸ್ಕೃತಿ. ಈಗ ನಾವು ಏನಾಗಿದ್ದೇವೆಯೋ ಅದು ನಮ್ಮ ನಾಗರಿಕತೆ. ಬೀಸುವಕಲ್ಲು ನಮ್ಮ ಸಂಸ್ಕೃತಿಯಾದರೆ, ಮಿಕ್ಸರ್‌ ನಮ್ಮ ನಾಗರಿಕತೆ. ನಾವು ನಾಗರಿಕತೆಯ ಓಟದಲ್ಲಿ ಏನೇ ಸಾಧನೆ ಮಾಡಿದರೂ ನಮ್ಮ ಮೂಲ ಸಂಸ್ಕೃತಿಯನ್ನು ಮರೆಯಬಾರದು. ಈ ರೀತಿಯ ಸಾಂಸ್ಕೃತಿಕ ಪರಂಪರೆಯ ರೂಪಕಗಳನ್ನು ಕನ್ಹೇರಿ ಮಠದಲ್ಲಿ ಅತ್ಯುತ್ತಮವಾಗಿ ಸ್ಥಾಪಿಸಿದ್ದು, ಇದೊಂದು ಸಂಸ್ಕೃತಿ ಬೆಸೆಯುವ ಕ್ರಿಯಾ ಕಮ್ಮಟವಾಗಿದೆ ಎಂದು ಹೇಳಿದರು.

ಒಂದು ಲಕ್ಷ ಗೋವುಗಳ ರಕ್ಷಣೆ

ಕನ್ಹೇರಿ ಮಠದ ಗೋಸೇವೆಯನ್ನು ವಿಶೇಷವಾಗಿ ಪ್ರಶಂಸಿಸಿದ ಸಿಎಂ ಬೊಮ್ಮಾಯಿ, ಕರ್ನಾಟಕ ರಾಜ್ಯದಲ್ಲಿ ಪುಣ್ಯಕೋಟಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ನೂರು ಕೋಟಿ ರೂಪಾಯಿ ಸಂಗ್ರಹವಾಗುತ್ತಿದ್ದು, ಒಂದು ಲಕ್ಷ ಗೋವುಗಳನ್ನು ಜನರ ಹಣದಿಂದಲೇ ರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕನ್ಹೇರಿ ಮಠದ ಶಾಖೆ ಕರ್ನಾಟಕದಲ್ಲಿ ಸ್ಥಾಪಿಸಲು ಮನವಿ:

ಮಹಾರಾಷ್ಟ್ರದಲ್ಲಿ ಇರುವ ಕನ್ಹೇರಿಮಠ ಮಠ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ದೊಡ್ಡ ಮಠವಾಗಿದೆ. ಕರ್ನಾಟಕದಲ್ಲಿ ಕೂಡ ಕನ್ಹೇರಿ ಮಠದ ಶಾಖೆ ಸ್ಥಾಪನೆ ಮಾಡಿದರೆ ಅದಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು, ಸರ್ಕಾರದ ವತಿಯಿಂದ ಜಾಗವನ್ನು ಒದಗಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕನ್ಹೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮಠದಲ್ಲಿ ಆಯೋಜಿಸಿರುವ ಸಂತಸಮಾವೇಶದಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ. ಇದು ಭಕ್ತರು ಹಾಗೂ ಸ್ವಾಮೀಜಿಗಳ ಸಮ್ಮಿಲನ ಕಾರ್ಯಕ್ರಮವಾಗಿದೆ. ಭಕ್ತರ ದೇಣಿಗೆ, ಕಾಣಿಕೆಯಿಂದ ಮಠಗಳು ನಿರ್ಮಾಣವಾಗಿದ್ದು, ಸ್ವಾಮೀಜಿಗಳು ಮಠಗಳ ಮಾಲೀಕರಲ್ಲ. ಅವರು ಬರೀ ವ್ಯವಸ್ಥಾಪಕರು. ಭಕ್ತರಿಗೆ, ಸಮಾಜಕ್ಕೆ ಸಂಸ್ಕಾರ ಕೊಡುವ ಕೆಲಸವನ್ನು ಸ್ವಾಮೀಜಿಗಳು ಮಾಡಬೇಕು ಎಂದರು.

ದೇಶದಲ್ಲಿ ಸುಮಾರು 50 ಲಕ್ಷ ದೇವಸ್ಥಾನ, 10 ಲಕ್ಷ ಮಠಗಳು, ಆಶ್ರಮಗಳು ಇವೆ. ಒಂದೊಂದು ಮಠ ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಂಡರೆ ದೇಶ ಸುಧಾರಣೆ ಸುಲಭವಾಗಿ ಆಗುತ್ತದೆ. ಮಠಗಳು ನಾಡಿನ, ಭಕ್ತರ ಹಿತಕಾಯುವ ಕಲ್ಯಾಣ ಕೆಲಸಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಮಠದಲ್ಲಿ ಭಕ್ತರ ಹಿತಕ್ಕಾಗಿ ಏನೇನು ಚಟುವಟಿಕೆ ಮಾಡಬೇಕೋ ಅಂಥ ಚಟುವಟಿಕೆಗಳನ್ನು ಆಗಾಗ ಮಾಡುತ್ತಿರುತ್ತೇವೆ ಎಂದರು.

ಮಠದಲ್ಲಿ ಜಾತ್ರೆ, ಸಮಾರಂಭಗಳು ಆಗುವಾಗ ಎತ್ತುಗಳ, ಹಸುಗಳ ಪ್ರದರ್ಶನ ಆಗಬೇಕು, ರೈತರಿಗೆ ಒಳ್ಳೆಯ ಸಸಿಗಳು, ದೇಸಿಬೀಜಗಳನ್ನು ಮಠದಿಂದ ದೊರಕಿಸಬೇಕು. ಭಕ್ತರಿಗೆ ನಿಸರ್ಗಾಧಾರಿತ, ಒಳ್ಳೆಯ ಆಹಾರ ಸಿಗಬೇಕು. ಮಠಗಳು ಇಂಥ ಉತ್ಪನ್ನಗಳ ಪೂರೈಕೆ ಕೇಂದ್ರಗಳಾಗಬೇಕು. ನಾವು ಸ್ವಾಮೀಜಿಗಳಾದ ಮೇಲೆ ಪೂರ್ವಾಶ್ರಮದ ಬಂಧಗಳನ್ನು ತೊರೆದು ಭಕ್ತರ ಹತ್ತಿರ ಹೋಗಬೇಕು. ಯಾವುದೇ ಜಾತಿ, ಮತ, ಪಂಥಗಳ ಆಧಾರದ ಮೇಲೆ ಸ್ವಾಮೀಜಿಗಳಾಗಬಾರದು. ವಿದ್ವತ್‌, ಯೋಗ್ಯತೆ ಆಧರಿಸಿ ಸ್ವಾಮೀಜಿಗಳಾಗಬೇಕು ಎಂದು ತಿಳಿಸಿದರು.

ಯಡಿಯೂರಪ್ಪರನ್ನು ಕರ್ಕೊಂಡು ತಿರುಗಾಡಿದರೆ ಸಿಎಂ ಬೊಮ್ಮಾಯಿ ಅವರೇ ನೀವು ಲಗಾ ಒಗಿತೀರಿ: ಯತ್ನಾಳ್‌

ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಮತಾಂತರ ನಿಷæೕಧ ಕಾನೂನನ್ನು ಜಾರಿಗೆ ತಂದು ಪುಣ್ಯ ಕಟ್ಟಿಕೊಂಡಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚಚ್‌ರ್‍, ಮಸೀದಿಗಳು ನಿರ್ಮಾಣ ಆಗುತ್ತಿದ್ದವು. ನಾವು ಬೇರೆಯವರನ್ನು ದೂಷಿಸುವುದೂ ಇಲ್ಲ, ದ್ವೇಷಿಸುವುದೂ ಇಲ್ಲ. ಬಹುಶಃ ಈ ವಿಷಯದಲ್ಲಿ ನಾವೇ ಎಡವಿದ್ದೇವೆ. ನಮ್ಮನ್ನು ಬಿಟ್ಟು ಹೋದ ಸಹೋದರರನ್ನು ವಾಪಸ್‌ ಕರೆತಂದು ಸಹಬಾಳ್ವೆಯಿಂದ ಬದುಕೋಣ ಎಂದರು.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ, ವಿ.ಸೋಮಣ್ಣ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಹಲವು ಸ್ವಾಮಿಜೀಗಳು, ಗಣ್ಯರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios